Laxmeshwra,Damage, Pump, Scream, Water,ಪಂಪ್, ಹಾಳು, ನೀರಿಗೆ, ಗೋಳು.

ಪಂಪ್ ಹಾಳು, ನೀರಿಗೆ ಗೋಳು

ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ
ಬೇಸಿಗೆ ಮುಕ್ತಾಯವಾಗಲು ಇನ್ನೂ ಒಂದೂವರೆ ತಿಂಗಳು ಬಾಕಿ ಇರುವಂತೆಯೇ ಪಟ್ಟಣದಲ್ಲಿ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ನಿರ್ವಣವಾಗಿದೆ.

ಪಟ್ಟಣಕ್ಕೆ ಸಮೀಪದ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿದೆ. ನದಿ ತಟದ ಮೇವುಂಡಿಯ ಜಾಕ್​ವೆಲ್​ನಿಂದ ನೀರನ್ನು ಮೇಲಕ್ಕೆತ್ತಿ ಸೂರಣಗಿಯ ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುತ್ತದೆ. ಅಲ್ಲಿ ನೀರು ಶುದ್ಧೀಕರಿಸಿದ ಬಳಿಕ 9 ಹಳ್ಳಿಗಳು ಹಾಗೂ ಲಕ್ಷೆ್ಮೕಶ್ವರ ಪಟ್ಟಣಕ್ಕೆ ಪೈಪ್​ಲೈನ್ ಮೂಲಕ ಸರಬರಾಜು ಮಾಡಲಾಗುತ್ತದೆ. ಆದರೆ, ಕಳೆದ ಒಂದು ವಾರದಿಂದ ಶುದ್ಧೀಕರಣ ಘಟಕದಲ್ಲಿನ ನೀರೆತ್ತುವ ಎರಡೂ ಪಂಪ್​ಗಳು ಕೆಟ್ಟಿರುವುದರಿಂದ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ 72 ಕೊಳವೆಬಾವಿಗಳಿವೆ. ಆದರೆ, ಅವುಗಳಲ್ಲಿ ಬಹುತೇಕವುಗಳ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರಿನ ಪ್ರಮಾಣ ಕಡಿಮೆ ಆಗಿದೆ. 23 ವಾರ್ಡ್​ಗಳ ವ್ಯಾಪ್ತಿಯಲ್ಲಿ 50 ಸಾವಿರ ಜನಸಂಖ್ಯೆಯಿದ್ದು, ಅಲ್ಲಲ್ಲಿ ಸಾರ್ವಜನಿಕ ನಳಗಳನ್ನು ಅಳವಡಿಸಲಾಗಿದೆ. ಅವುಗಳಿಗೆ ಕೊಳವೆಬಾವಿಗಳಿಂದ ನೀರು ಪೂರೈಸುತ್ತಿದ್ದು, ಅವುಗಳೇ ಈಗ ಆಧಾರವಾಗಿವೆ. ಅವುಗಳು ಸಹ ಅಂತರ್ಜಲ ಮಟ್ಟ ಕುಸಿದಿದ್ದರಿಂದ ನಾಲ್ಕಾರು ಕೊಡ ನೀರು ಬಂದು ಸ್ಥಗಿತಗೊಳ್ಳುತ್ತಿವೆ. ಇದರಿಂದ ಮಹಿಳೆಯರು, ಮಕ್ಕಳು ನಳಗಳ ಮುಂದೆ ದಿನವಿಡೀ ಕಾಯುವಂತಾಗಿದೆ. ಈಗ ಜನರು ಅನಿವಾರ್ಯವಾಗಿ ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ. ಬೇಡಿಕೆ ಹೆಚ್ಚಿದ್ದರಿಂದ ಪ್ರತಿ ಟ್ಯಾಂಕರ್ ನೀರಿಗೆ ಈಗ 350-400 ರೂ. ದರ ಪಡೆಯಲಾಗುತ್ತಿದೆ. ಪಟ್ಟಣದ ಹೊಸ ಬಡಾವಣೆಗಳಾದ ಲಕ್ಷ್ಮೀ ನಗರ, ಈಶ್ವರ ನಗರ, ಸೋಮೇಶ್ವರ ನಗರ, ರಂಭಾಪುರಿ ನಗರ ಮತ್ತಿತರ ಕಡೆ ಸಾರ್ವಜನಿಕ ನಳಗಳಿಲ್ಲ. ಅಲ್ಲದೆ, ತುಂಗಭದ್ರಾ ನದಿ ನೀರಿನ ಪೈಪಲೈನ್ ಕೂಡ ಇಲ್ಲದ್ದರಿಂದ ಪ್ರತಿ ವರ್ಷ ಬೇಸಿಗೆಯಲ್ಲಿ ಈ ಪ್ರದೇಶಗಳ ಜನರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದ ಹಳ್ಳದಕೇರಿ, ಸೊಪ್ಪಿನಕೇರಿ, ಬಸ್ತಿಬಣ, ಬಸಾಪುರ ಓಣಿ, ಮ್ಯಾಗೇರಿ ಓಣಿಗಳು ಬಹುತೇಕ ರೈತಾಪಿ ಕುಟುಂಬಗಳಿಂದ ಕೂಡಿದ್ದು, ಜಾನುವಾರುಗಳಿಗೆ ನೀರು ಒದಗಿಸುವುದು ರೈತರಿಗೆ ಸವಾಲಾಗಿದೆ.

ಅಧಿಕಾರಿಗಳ ಉದಾಸೀನವೇ ಕಾರಣ

ಸ್ಥಳೀಯ ಪುರಸಭೆ ಅಧಿಕಾರಿಗಳು ಕುಡಿಯುವ ನೀರಿಗೆ ಸಂಬಂಧಿಸಿದ ಮೋಟರ್, ಪೈಪ್​ಲೈನ್ ಖರೀದಿ, ದುರಸ್ತಿ ಖರ್ಚಿನ ಬಿಲ್ಲುಗಳ ಮಂಜೂರಾತಿಗಾಗಿ ಆಡಳಿತಾಧಿಕಾರಿಗಳಿಗೆ ಸಲ್ಲಿಸಿದರೂ ಅದಕ್ಕೆ ಮಂಜೂರಾತಿ ಸಿಗುತ್ತಿಲ್ಲ. ಮೋಟರ್ ದುರಸ್ತಿ ಮಾಡುವ ಗುತ್ತಿಗೆದಾರರ ಲಕ್ಷಾಂತರ ರೂ. ಬಿಲ್ ಬಾಕಿ ಇದೆ. ಹಾಗಾಗಿ, ಆ ಗುತ್ತಿಗೆದಾರರು ದುರಸ್ತಿಗೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಮರಳಿನ ಚೀಲಗಳಿಂದ ತಡೆಗೋಡೆ ನಿರ್ವಿುಸಲಾಗುತ್ತಿತ್ತು. ಆದರೆ, ಈ ವರ್ಷ ಅದಕ್ಕೂ ಆಡಳಿತಾಧಿಕಾರಿಗಳು ಅನುಮೋದನೆ ನೀಡಿಲ್ಲ. ಸಿವಿಲ್ ವಿಷಯಕ್ಕೆ ಸಂಬಂಧಿಸಿದ ಎಲ್ಲ ಬಿಲ್​ಗಳಿಗೂ ಮಂಜೂರಾತಿ ನೀಡುವ ಆಡಳಿತಾಧಿಕಾರಿಗಳು ನೀರಿನ ವಿಷಯಕ್ಕೆ ಹಿಂದೇಟು ಹಾಕುತ್ತಿರುವುದೇ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಕುಡಿಯುವ ನೀರಿಗಾಗಿ ಸರ್ಕಾರದ ಯಾವುದೇ ಆದೇಶಕ್ಕೂ ಕಾಯದೇ ತ್ವರಿತ ಕ್ರಮ ಕೈಗೊಳ್ಳುವಂತೆ ಸರ್ಕಾರವೇ ಹೇಳುತ್ತಿದೆ. ಆದರೂ ಅಧಿಕಾರಿಗಳ ಉದಾಸೀನತೆ ಅರ್ಥವಾಗುತ್ತಿಲ್ಲ ಎಂದು ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಹರಿಹಾಯ್ದಿದ್ದಾರೆ.

ಸೂರಣಗಿಯ ನೀರು ಶುದ್ಧೀಕರಣ ಘಟಕದ ಎರಡೂ ಮೋಟರ್​ಗಳನ್ನು ದುರಸ್ತಿ ಮಾಡಬೇಕಿದೆ. ಹೀಗಾಗಿ, ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಪಟ್ಟಣದಲ್ಲಿನ ಬೋರ್​ವೆಲ್​ಗಳಿಂದ ಸಾರ್ವಜನಿಕ ನಲ್ಲಿಗಳಿಗೆ ನೀರು ಪೂರೈಸಲಾಗುತ್ತಿದೆ. 4 ದಿನಗಳಲ್ಲಿ ಎಲ್ಲವೂ ಸರಿಯಾಗಲಿದ್ದು, ಸಾರ್ವಜನಿಕರು ಸಹರಿಸಬೇಕು.

| ಎಂ.ಆರ್. ರಾಜಪೂರ ಮುಖ್ಯಾಧಿಕಾರಿ

Leave a Reply

Your email address will not be published. Required fields are marked *