ಪಂದ್ಯ ಸಂಭಾವನೆ ಪೂರ್ತಿ ದಾನ!

ಮಾಸ್ಕೋ: ಫ್ರಾನ್ಸ್ ತಂಡ ಫಾರ್ವರ್ಡ್ ಆಟಗಾರ ಕೈಲಿಯನ್ ಬಾಪೆ ವಿಶ್ವಕಪ್ ವೇಳೆ ರಾಷ್ಟ್ರೀಯ ತಂಡದ ಪರ ಆಡಿದ ಕಾರಣಕ್ಕಾಗಿ ಸಿಗುವ ಪಂದ್ಯ ಸಂಭಾವನೆಯನ್ನು ದಾನ ಮಾಡುವುದಾಗಿ ತಿಳಿಸಿದ್ದಾರೆ. ಪ್ಯಾರಿಸ್ ಸೇಂಟ್ ಜರ್ಮನ್ ಕ್ಲಬ್​ನ ಸ್ಟ್ರೈಕರ್ ಆಗಿರುವ ಕೈಲಿಯನ್ ಬಾಪೆ, ವಿಶ್ವಕಪ್​ನಲ್ಲಿ ಆಡಿದ ಪ್ರತಿ ಪಂದ್ಯಕ್ಕೆ ಸಂಭಾವನೆ ರೂಪದಲ್ಲಿ 15.36ಲಕ್ಷ ರೂಪಾಯಿ (17 ಸಾವಿರ ಪೌಂಡ್) ಪಡೆಯಲಿದ್ದಾರೆ. ಈಗ ಫ್ರಾನ್ಸ್ ನಾಕೌಟ್​ಗೇರಿರುವ ಕಾರಣ ಅವರ ಸಂಭಾವನೆಯ ಮೊತ್ತವೂ ಹೆಚ್ಚಳವಾಗಲಿದೆ. ‘ದೇಶದ ಪರ ಆಡುವುದೇ ಹೆಮ್ಮೆ. ಹಣ ಪಡೆದು ದೇಶವನ್ನು ಪ್ರತಿನಿಧಿಸುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ’ ಎಂದು 19 ವರ್ಷದ ಬಾಪೆ ಹೇಳಿದ್ದಾರೆ. ವಿಶ್ವಕಪ್​ನಲ್ಲಿ ಆಡಿದ ಕಾರಣಕ್ಕೆ ಸಿಗುವ ಮೊತ್ತವನ್ನು ಪ್ಯಾರಿಸ್​ನಲ್ಲಿ ಅಂಗವಿಕಲ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಬೆಂಬಲ ನೀಡುವ ಸಂಸ್ಥೆಗೆ ನೀಡಲು ತೀರ್ವನಿಸಿದ್ದಾರೆ.