ಪಂಚ ಪೀಠಗಳಿಂದ ಧರ್ಮಪ್ರಜ್ಞೆ

ಗಜೇಂದ್ರಗಡ: ಭಾರತೀಯ ಉತ್ಕೃಷ್ಟ ಸಂಸ್ಕೃತಿ, ಪರಂಪರೆ, ಆದರ್ಶಗಳನ್ನು ಪಂಚಪೀಠಗಳು ಬೆಳೆಸಿಕೊಂಡು ಬಂದಿದ್ದು, ಜನರಲ್ಲಿ ಧರ್ಮ ಪ್ರಜ್ಞೆ ಮೂಡಿಸುತ್ತಿವೆ ಎಂದು ವಾರಾಣಸಿ ಜಂಗಮವಾಡಿಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಸೂಡಿ ಜುಕ್ತಿಹಿರೇಮಠದಲ್ಲಿ ಭಾನುವಾರ ಜರುಗಿದ ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರ ಲಿಂಗಾಂಗ ಸಾಮರಸ್ಯದ ಶತಮಾನೋತ್ಸವ ಹಾಗೂ ಗ್ರಂಥ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಸುವಿಚಾರದ ಸತ್ಪಥದಲ್ಲಿ ಕರೆದೊಯ್ಯುವ ಶಕ್ತಿ ಗುರುವಿಗಿದೆ. ವೀರಶೈವ ಧರ್ಮದಲ್ಲಿ ಗುರು ಪರಂಪರೆಗೆ ಅತ್ಯಂತ ಪಾವಿತ್ರ್ಯೆಯಿದೆ. ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ವಿವಿಧ ಸ್ಥಳಗಳಿಗೆ ತೆರಳಿ ಧರ್ಮ ಜಾಗೃತಿ ಮೂಡಿಸಿದ್ದಾರೆ ಎಂದರು.

ಶಾಸಕ ಸಿ.ಸಿ ಪಾಟೀಲ ಮಾತನಾಡಿ, ನಾವೆಲ್ಲರೂ ಪಂಚಪೀಠಗಳ ತತ್ತ್ವದಡಿ ಜೀವನ ನಡೆಸುವ ಅವಶ್ಯಕತೆ ಇದೆ. ಪಂಚ ಪೀಠಗಳು ಸರ್ವ ಸಮುದಾಯಕ್ಕೂ ಅನ್ವಯಿಸುವ ಸಮನ್ವಯ ಸಂದೇಶಗಳನ್ನು ಕೊಡುತ್ತ ಬಂದಿವೆ ಎಂದರು.

ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ವೀರಶೈವ ಧರ್ಮವು ಹಿಂದು ಸಂಸ್ಕೃತಿಯ ಆದರ್ಶ ಮೌಲ್ಯಗಳನ್ನು ಪಾಲಿಸುತ್ತ ವೇದ, ಆಗಮ, ಉಪನಿಷತ್ತುಗಳನ್ನು ಅನುಸರಿಸಿ ಶಿವನನ್ನು ಆರಾಧ್ಯ ದೈವವಾಗಿ ಇಷ್ಟಲಿಂಗ ಪೂಜಿಸುತ್ತ ಬಂದಿದೆ. ಧರ್ಮವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿದರು. ಗುರುಸ್ವಾಮಿ ಕಲಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದವಾಡಗಿಯ ಮಹಾಂತಲಿಂಗ ಶ್ರೀಗಳು, ಸುಳ್ಯದ ಶಿವಸಿದ್ಧರಾಮೇಶ್ವರ ಸ್ವಾಮೀಜಿ, ಹಿರೇವಡ್ಡಟ್ಟಿಯ ವೀರೇಶ್ವರ ಸ್ವಾಮೀಜಿ, ಬದಾಮಿಯ ಶಿವಪೂಜಾ ಶ್ರೀ, ಮಂಗಳೂರಿನ ಸಿದ್ಧಲಿಂಗ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಕೇದಾರಯ್ಯ ಜುಕ್ತಿಮಠ, ಅಂದಾನಗೌಡ ಪಾಟೀಲ, ಉಮೇಶ ಗುಡಿಮನಿ, ರವಿ ಬಿದರೂರ, ಶಿವಬಸವ ಬೆಲ್ಲದ ಇದ್ದರು.

ಅಕ್ಕನ ಬಳಗ ಉದ್ಘಾಟನೆ ಇಂದು: ಜುಕ್ತಿ ಹಿರೇಮಠದ ಅಕ್ಕನಬಳಗ ಉದ್ಘಾಟನೆ ಹಾಗೂ 260ನೇ ಶಿವಾನುಭವ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಜುಕ್ತಿ ಹಿರೇಮಠದ ಆವರಣದಲ್ಲಿ ನಡೆಯಲಿದೆ. ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶ್ರೀಗಳು ನೇತೃತ್ವ ವಹಿಸಲಿದ್ದು, ಬೆದವಟ್ಟಿಯ ಶಿವಸಂಗಮೇಶ್ವರ ಸ್ವಾಮೀಜಿ, ನರಸಾಪೂರದ ಮರಳುಸಿದ್ಧಲಿಂಗ ಶ್ರೀಗಳು, ಸೋಮಶೇಖರ ಸ್ವಾಮೀಜಿ, ಅಡ್ನೂರು-ಗದಗದ ಪಂಚಾಕ್ಷರ ಶಿವಾಚಾರ್ಯರು, ಯಲಬುರ್ಗಿಯ ಬಸವಲಿಂಗೇಶ್ವರ ಶ್ರೀಗಳು ಸಮ್ಮುಖ ವಹಿಸಲಿದ್ದಾರೆ.

ರಥೋತ್ಸವ ಇಂದು: ಸೂಡಿಯ ಕೊಟ್ಟೂರು ಮಠದಲ್ಲಿ ಅ. 15ರಂದು ಬೆಳಗ್ಗೆ 7 ಗಂಟೆಗೆ ಲಿಂ. ಉಮಾಪತಿ ಶಿವಾಚಾರ್ಯರ ಗದ್ದುಗೆಗೆ ರುದ್ರಾಭಿಷೇಕ ಬಿಲ್ವಾರ್ಚನೆ, ಮಧ್ಯಾಹ್ನ 12 ಗಂಟೆಗೆ ಮಹಾಗಣಾರಾಧನೆ ನಡೆಯಲಿದೆ. ಸಂಜೆ 5-30ಕ್ಕೆ ಮಹಾರಥೋತ್ಸವ ನಡೆಯಲಿದೆ.


ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ

ಗಜೇಂದ್ರಗಡ: ತಾಲೂಕಿನ ಸೂಡಿ ಗ್ರಾಮದಲ್ಲಿ ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರ ಲಿಂಗಾಂಗ ಸಾಮರಸ್ಯದ ಶತಮಾನೋತ್ಸವ, ಲಿಂ. ಉಮಾಪತಿ ಶಿವಾಚಾರ್ಯರ 71ನೇ ಪುಣ್ಯತಿಥಿ, ಉಜ್ಜಯನಿ ಸಿದ್ಧಲಿಂಗ ಜಗದ್ಗುರುಗಳ ಪುರಾಣ ಮಂಗಲ ಪ್ರಯುಕ್ತ ಭಾನುವಾರ ಶ್ರೀ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು.

ಸೂಡಿಯ ಜುಕ್ತಿಹಿರೇಮಠ ಕಲ್ಯಾಣ ಮಂಟಪದಿಂದ ಶ್ರೀಮಠದವರೆಗೂ ಬೆಳ್ಳಿ- ಚಿನ್ನ ಲೇಪಿತ ಪುಷ್ಪಾಲಂಕೃತ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಿತು. ಸಕಲ ವಾದ್ಯ ಮೇಳಗಳು, ಮಹಿಳೆಯರ ಡೊಳ್ಳು ಕುಣಿತ, 250 ಸುಮಂಗಲೆಯರ ಪೂರ್ಣಕುಂಭ, ಆರತಿ ಮೆರವಣಿಗೆಗೆ ಮೆರುಗು ನೀಡಿತು.

ವಾರಾಣಸಿಯ ಜಂಗಮವಾಡಿ ಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಚಿನ್ನದ ಕಿರೀಟ ಧರಿಸಿ, ಕೈಯಲ್ಲಿ ದಂಡ ಮತ್ತು ರಾಜಮುದ್ರಿಕೆಗಳನ್ನು ಹಿಡಿದು ರಾಜಪೋಷಾಕಿನಲ್ಲಿ ಕಂಗೊಳಿಸಿದರು. ನಂತರ ಮಾತನಾಡಿದ ಡಾ. ಚಂದ್ರಶೇಖರ ಶಿವಾಚಾರ್ಯರು, ‘ಜಾತಿ, ಮತ, ಧರ್ಮ, ಮೇಲು- ಕೀಳು ಎನ್ನದೆ ಮಾನವ ಕುಲ ಒಂದೇ ಎಂದು ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಮಾಜ ಕಟ್ಟುವ ಕೆಲಸವಾಗಬೇಕು. ಎಲ್ಲರ ಮಧ್ಯೆ ಬಾಂಧವ್ಯ ಕಾಯ್ದುಕೊಳ್ಳವಲ್ಲಿ ಧರ್ಮ ಗುರುಗಳ, ಮಠಾಧೀಶರ ಪಾತ್ರ ಮಹತ್ವದ್ದಾಗಿದೆ’ ಎಂದರು.

ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯ, ನಂದವಾಡಗಿಯ ಮಹಾಂತ ಲಿಂಗ ಸ್ವಾಮೀಜಿ, ಸುಳ್ಯದ ಶಿವಸಿದ್ಧರಾಮೇಶ್ವರ ಶ್ರೀಗಳು, ಹಿರೇವಡ್ಡಟ್ಟಿಯ ವೀರೇಶ್ವರ ಶ್ರೀ, ಬದಾಮಿಯ ಶಿವಪೂಜಾ ಶ್ರೀ, ಮಂಗಳೂರಿನ ಸಿದ್ಧಲಿಂಗ ಶ್ರೀ, ಎಸ್.ಡಿ. ಪಾಟೀಲ, ವೀರಭದ್ರಪ್ಪ ಮಾರನಬಸರಿ, ಶರಣಪ್ಪ ಹೂಗಾರ, ಎಂ.ಎಸ್. ಬಿದರೂರ, ಶರಣಪ್ಪ ಕಾಶಪ್ಪನವರ, ಉಮೇಶ ಗುಡಿಮನಿ, ಸಂಗಮೇಶ ಮಾರನಬಸರಿ, ರವಿ ಬಿದರೂರ, ಎಸ್.ಎಸ್. ಬೆಲ್ಲದ, ವೀರಣ್ಣ ಅಡಗತ್ತಿ, ಶ್ರೀಕಾಂತ ಮಾರನಬಸರಿ, ಶಶಿಧರ ಇತರರಿದ್ದರು.