ಪಂಚಾಯಿತಿ ಎದುರು ಅನಿರ್ಧಿಷ್ಟಾವಧಿ ಧರಣಿ

ವಿಜಯವಾಣಿ ಸುದ್ದಿಜಾಲ ಕಮಲನಗರ
ಕಮಲನಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನೋದಕುಮಾರ ಕುಲಕರ್ಣಿ ಅವರ ವರ್ಗಾವಣೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ನಿಮ್ಮ ಹದಕ್ಕಿಗೆ ನಮ್ಮ ಧ್ವನಿ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಪಂಚಾಯಿತಿ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭವಾಗಿದೆ.

ನಿಮ್ಮ ಹಕ್ಕಿಗೆ ನಮ್ಮ ಧ್ವನಿ ವೇದಿಕೆಯ ಅಧ್ಯಕ್ಷ ಎಂ.ಕೆ.ಗಾಯಕವಾಡ್ ನೇತೃತ್ವದಲ್ಲಿ ಬೆಳಗ್ಗೆ ಗ್ರಾಮ ಪಂಚಾಯಿತಿಗೆ ತೆರಳಿದ ಸಾರ್ವಜನಿಕರು, ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು.

ಎಂ.ಕೆ.ಗಾಯಕವಾಡ್ ಮಾತನಾಡಿ, ವಿನೋದಕುಮಾರ ಕುಲಕರ್ಣಿ ಅವರು ಒಬ್ಬ ಪ್ರಾಮಾಣಿಕ ಅಧಿಕಾರಿ. ಅವರು ಕಮಲನಗರ ಗ್ರಾಮ ಪಂಚಾಯಿತಿ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡಿದ್ದಾಗಿನಿಂದ ಮೂಲಸೌಕರ್ಯ ಒದಗಿಸಲು ಶ್ರಮಿಸಿದ್ದಾರೆ. ಇಂತಹ ಅಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲ. ಸರ್ಕಾರದ ಈ ನಿರ್ಧಾರ ಬೇಸರ ತಂದಿದೆ. ಪಿಡಿಒ ಅವರ ವರ್ಗಾವಣೆ ರದ್ದುಗೊಳಿಸಬೇಕು. ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಧರಣಿ ಮುಂದುವರಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ವೈಜಿನಾಥ ವಡ್ಡೆ ಮಾತನಾಡಿ, ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಕುಲಕರ್ಣಿ ಅವರು, ಕಳಪೆ ಕಾಮಗಾರಿ ಕೈಗೊಂಡವರಿಗೆ ಬಿಲ್ ಮಾಡುತ್ತಿರಲಿಲ್ಲ. ಸರ್ಕಾರದ ಅನೇಕ ವಸತಿ ಯೋಜನೆಗಳಲ್ಲಿ ಅರ್ಹರಿಗೆ ಮನೆ ಒದಗಿಸಿದ್ದಾರೆ. ಆದರೆ ಪಂಚಾಯಿತಿಯ ಕೆಲವು ಸದಸ್ಯರು ಅನರ್ಹರಿಗೂ ಮನೆ ಮಂಜೂರು ಮಾಡುವಂತೆ ಪಿಡಿಒ ಅವರ ಮೇಲೆ ಒತ್ತಡ ಹೇರಿದ್ದಾರೆ. ಇದಕ್ಕೆ ಒಪ್ಪದ ಪಿಡಿಒ ಅವರನ್ನು ರಾಜಕೀಯ ಪ್ರಭಾವ ಬಳಸಿ, ಇಲ್ಲಿಂದ ವರ್ಗಾವಣೆ ಮಾಡಿಸಿದ್ದಾರೆ. ಇದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ತಿಳಿಸಿದರು.