ಕೆ.ಆರ್.ಪೇಟೆ: ಪಂಚರತ್ನ ಕಾರ್ಯಕ್ರಮದಿಂದ ರಾಜ್ಯಕ್ಕೆ ಅನುಕೂಲವಾಗುತ್ತದೆ ಎಂಬ ಅರಿವು ಜನರಿಗಿದ್ದು, ಕುಮಾರಣ್ಣ ಅವರಿಗೆ 70ರಿಂದ 72 ಸೀಟು ದೊರೆಯಲಿವೆ ಎಂಬುದಾಗಿ ಸಮೀಕ್ಷೆ ತಿಳಿಸಿದೆ ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಅಗ್ರಹಾರ ಬಾಚಹಳ್ಳಿಯಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಮಾಡುತ್ತಿರುವ ಕುತಂತ್ರ ಮತದಾರರಿಗೆ ಗೊತ್ತಿದೆ. ಕಳೆದ 3-4 ವರ್ಷಗಳಿಂದ ತಾಲೂಕಿನ ಜನತೆ ಬೇಸತ್ತಿದ್ದು, ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಟ್ಟಿದ್ದಾರೆ. ಪಂಚರತ್ನ ಕಾರ್ಯಕ್ರಮದ ಅಂಶಗಳು ಜನರ ಮನದಲ್ಲಿ ಅಚ್ಚಳಿಯದೆ ನಿಂತಿವೆ. ಇದೇ ಕಾರಣಕ್ಕಾಗಿ ಕುಮಾರಣ್ಣ ಅವರ ಕಾರ್ಯಕ್ರಮಗಳಿಗೆ ಸಾಗರೋಪಾದಿಯಲ್ಲಿ ಜನ ಸೇರುತ್ತಾರೆ. ನುಡಿದಂತೆ ನಡೆದ ಹಾಗೂ ಕೊಟ್ಟ ಆಶ್ವಾಸನೆಯನ್ನು ಈಡೇರಿಸುವ ಮುಖ್ಯಮಂತ್ರಿ ರಾಜ್ಯದಲ್ಲಿ ಯಾರಾದರೂ ಇದ್ದರೆ ಅದು ಕುಮಾರಣ್ಣ ಮಾತ್ರ. ವಿರೋಧಿಗಳು ಚುನಾವಣೆಯಲ್ಲಿ ಅಪಪ್ರಚಾರ ಮಾಡುತ್ತಿದ್ದು, ಮಂಜಣ್ಣ ಏನೆಂದು ತಾಲೂಕಿನ ಜನತೆ ಕಳೆದ ಹತ್ತಾರು ವರ್ಷಗಳಿಂದ ನೋಡಿದ್ದಾರೆ ಎಂದರು.
ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿದರು. ಗ್ರಾಮದ ಮುಖಂಡರಾದ ಅಶೋಕ್, ರಾಮಚಂದ್ರ, ಮಂಜಣ್ಣ, ಕುಮಾರ್, ಶಿವಲಿಂಗೇಗೌಡ, ಜಯರಾಮು ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಸೇರಿದರು.
ಎಂಡಿಸಿಸಿ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ಅಗ್ರಹಾರ ಬಾಚಹಳ್ಳಿ ನಾಗೇಶ್, ತಾ.ಪಂ. ಮಾಜಿ ಉಪಾಧ್ಯಕ್ಷ ಮಹದೇವೇಗೌಡ, ಜೆಡಿಎಸ್ ಮುಖಂಡರಾದ ಎಸ್.ಎಲ್.ರಮೇಶ್ ರಾಜು, ತಾಲ್ಲೂಕು ವೀರಶೈವ ಮಹಾಸಬಾ ಅಧ್ಯಕ್ಷ ಹಾಗೂ ವಕೀಲ ಧನಂಜಯ, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ರಮೇಶ್, ಗ್ರಾಪಂ ಸದಸ್ಯ ಚನ್ನೇಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.