ಪಂಚಮುಖಿ ಯೋಗಶಿಕ್ಷಣ

| ಎಂ. ಸುಬ್ರಹ್ಮಣ್ಯ, ಮೈಸೂರು,

‘ಸಂಸ್ಕಾರ’, ‘ಸಂಘಟನೆ’, ‘ಸೇವೆ’ ಧ್ಯೇಯದೊಂದಿಗೆ ಅಸ್ತಿತ್ವಕ್ಕೆ ಬಂದ ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿಯು ಜನರಿಗೆ ಉಚಿತವಾಗಿ ಯೋಗವನ್ನು ಕಲಿಸುತ್ತ ಸೇವಾಚಟುವಟಿಕೆಯನ್ನು ರಾಜ್ಯಾದ್ಯಂತ ವಿಸ್ತರಿಸಿದೆ. ಸಂಸ್ಥೆಯಿಂದ ತರಬೇತಿ ಪಡೆದ ಸುಮಾರು ನಲವತ್ತು ಸಾವಿರ ಶಿಕ್ಷಕರು, ಪ್ರಬಂಧಕರು ಸಾರ್ವಜನಿಕರಿಗೆ ಯೋಗ ತರಬೇತಿ ನೀಡುತ್ತಿದ್ದಾರೆ. ಸಂಸ್ಥೆಯ ವತಿಯಿಂದ ಲಕ್ಷಾಂತರ ಜನರು ವರ್ಷದ 365 ದಿನವೂ ಯೋಗ ಕಲಿಯುತ್ತಿದ್ದಾರೆ. ಯೋಗ ತರಗತಿಗೆ ಸೇರುವವರಿಗೆ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ ಹಾಗೂ ವೈಜ್ಞಾನಿಕ – ಹೀಗೆ ಪಂಚಮುಖಿ ಶಿಕ್ಷಣವನ್ನು ಹೇಳಿಕೊಡಲಾಗುತ್ತದೆ. ಇದರಿಂದ ಆರೋಗ್ಯ, ಆಯಸ್ಸು ಜತೆಗೆ ಜೀವನ ಪೂರ್ತಿ ಲವಲವಿಕೆಯಿಂದ ಇರುವ ಶಿಕ್ಷಣವನ್ನು ನೀಡಲಾಗುತ್ತದೆ.

ಸಂಸ್ಥೆಯ ಹುಟ್ಟು: ಆರೆಸ್ಸೆಸ್ ಮುಖ್ಯಸ್ಥರಾಗಿದ್ದ ಅಜಿತಕುಮಾರ್ ಅವರ ಮಾರ್ಗದರ್ಶನ, ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಜನ್ಮತಾಳಿದ್ದು ಶ್ರೀ ಪತಂಜಲಿ ಸಂಸ್ಥೆ. ವಿಶ್ವವಿಖ್ಯಾತ ಯೋಗಗುರು ಡಾ. ಬಿಕೆಎಸ್ ಅಯ್ಯಂಗಾರ್ ಅವರ ಪಠ್ಯಕ್ರಮವನ್ನು ಸಂಸ್ಥೆಯ ಯೋಗತರಗತಿಗಳಲ್ಲಿ ಅಳವಡಿಸಿಕೊಂಡಿದೆ. 1980ರಲ್ಲಿ ತುಮಕೂರಿನಲ್ಲಿ ಈಗಿನ ಪ್ರಧಾನ ಸಂಚಾಲಕರಾದ ಎ.ಆರ್. ರಾಮಸ್ವಾಮಿ ಅವರ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ಬಂತು. ತುಮಕೂರಿನಲ್ಲಿ ಒಂದು ಶಾಖೆಯಿಂದ ಆರಂಭವಾದ ಸಂಸ್ಥೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ 1200ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ರಾಜ್ಯದಲ್ಲಿ 1000 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಪಕ್ಕದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲೂ ಸಂಸ್ಥೆಯ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಹತ್ತು ವರ್ಷಗಳಿಂದೀಚೆಗೆ ಇರಾನ್, ತಾಂಜೇನಿಯಾ, ನಮೀಬಿಯ ಮತ್ತಿತರ ದೇಶಗಳಲ್ಲೂ ಯೋಗಾಭ್ಯಾಸ ಆರಂಭವಾಗಿದೆ.

ಯೋಗ ಕಲಿಕೆಯ ಬಗೆ: ಸಂಸ್ಥೆಯಲ್ಲಿ ನಿತ್ಯ ಬೆಳಗ್ಗೆ 5.30ರಂದ 7 ಗಂಟೆಯವರೆಗೆ ಹಾಗೂ ಸಂಜೆ 5.30ರಿಂದ 7 ಗಂಟೆಯವರೆಗೆ ಯೋಗತರಗತಿಗಳು ನಡೆಯುತ್ತವೆ. ತರಗತಿಗೆ ಬಂದವರಿಗೆ ಯೋಗಪಾಠಕ್ಕೂ ಮೊದಲು ಶಿಸ್ತಿನ ಬಗ್ಗೆ ಪಾಠ ಕಲಿಸಲಾಗುತ್ತದೆ. ಸಮಯಪಾಲನೆ, ಪಾದರಕ್ಷೆಗಳನ್ನು ಸಾಲಾಗಿ ಬಿಡುವುದು, ಯೋಗಕ್ಕೆ ಬರುವ ಮುನ್ನ ಮಾಡಬೇಕಾದ ಕ್ರಿಯೆಗಳ ಬಗ್ಗೆ ತಿಳಿಸಲಾಗುತ್ತದೆ. ಆನಂತರ ಪ್ರಾರ್ಥನೆಯಿಂದ ಆರಂಭವಾಗಿ ಶ್ವಾಸಕ್ರಿಯೆಗಳು, ಯೋಗಾಸನಗಳನ್ನು ಮಾಡಿಸಲಾಗುತ್ತದೆ. ಬಳಿಕ ಪ್ರಾಣಾಯಾಮ, ಧ್ಯಾನದೊಂದಿಗೆ ಮುಕ್ತಾಯಗೊಳಿಸಲಾಗುತ್ತದೆ. ಇದಲ್ಲದೆ ಪ್ರತಿ ಶುಕ್ರವಾರ ಭಜನೆಗಳನ್ನು ಹೇಳಿಕೊಡಲಾಗುತ್ತದೆ.

ನಾನಾ ರೀತಿಯ ತರಬೇತಿಗಳು

ಸಂಸ್ಥೆಯು ಯೋಗಪಾಠದ ಜತೆಗೆ ಕಾಲಕಾಲಕ್ಕೆ ವಿವಿಧ ತರಬೇತಿಗಳನ್ನು ಆಯೋಜಿಸುತ್ತಿದೆ. ಪ್ರಾಥಮಿಕ ಶಿಕ್ಷಣ ಶಿಬಿರ, ಪ್ರಾಂತ್ಯ ಪ್ರಶಿಕ್ಷಣ ಶಿಬಿರ, ಆತ್ಮಾನುಸಂಧಾನ ಶಿಬಿರಗಳನ್ನು ನಡೆಸುತ್ತದೆ. ತರಗತಿಗಳಿಗೆ ಬರುವ ಯೋಗಪಟುಗಳಿಗಾಗಿ ಪ್ರತಿ ತಿಂಗಳು ನಾಲ್ಕು ದಿನಗಳ ಕಾಲ ಪ್ರಾಥಮಿಕ ಶಿಕ್ಷಣ ಶಿಬಿರ ನಡೆಸಲಾಗುತ್ತದೆ. ವರ್ಷಕ್ಕೆ ಎರಡು ಬಾರಿ ಪ್ರಾಂತ್ಯ ಪ್ರಶಿಕ್ಷಣ ಶಿಬಿರ ನಡೆಸಲಾಗುತ್ತದೆ. ತುಮಕೂರಿನಲ್ಲಿರುವ ಸಿದ್ಧರಬೆಟ್ಟದ ಸೂರ್ಯಗವಿಯಲ್ಲಿ ಪ್ರತಿ ವರ್ಷ ಆತ್ಮಾನುಸಂಧಾನ ಶಿಬಿರ ನಡೆಯುತ್ತದೆ. ಇಲ್ಲಿ ಸಮಾಧಿಸ್ಥಿತಿ, ಮೌನ, ಧ್ಯಾನ, ಪ್ರಾಣಾಯಾಮಗಳ ಬಗ್ಗೆ ವಿಶೇಷ ತರಬೇತಿ ಜರುಗುತ್ತದೆ. ಮೂರು ದಿನಗಳ ಮೌನಾಚರಣೆ ಈ ಶಿಬಿರದ ವಿಶೇಷ.

ಯೋಗನಗರಿಯಲ್ಲಿ ಪತಂಜಲಿಯ ಶತಕ

ಸಾಂಸ್ಕೃತಿಕ ನಗರ ಮೈಸೂರು ಇದೀಗ ಯೋಗನಗರಿಯೆನಿಸಿದೆ. ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ಹಣ ಪಡೆಯದೆ ಯೋಗಶಿಕ್ಷಣ ನೀಡುತ್ತದೆ. 2000ನೇ ಇಸ್ವಿಯಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ರೆಡ್ಡಯ್ಯ ರಾಜು ಮಾರ್ಗದರ್ಶನದಲ್ಲಿ ಸಿದ್ಧಾರ್ಥನಗರ ಬಡಾವಣೆಯಲ್ಲಿ ಮೊದಲ ಶಾಖೆ ಆರಂಭವಾಯಿತು. ಇದೀಗ 100 ಶಾಖೆಗಳನ್ನು ಹೊಂದಿದೆ. ಮೈಸೂರು ಸಮಿತಿ ಅಧ್ಯಕ್ಷ ಡಾ. ಬಿ.ಎನ್.ಮಾರುತಿ ಅವರ ಮಾರ್ಗದರ್ಶನದಲ್ಲಿ ಕಾರ್ಯದರ್ಶಿ ಕೆ.ಎಸ್. ರವಿಶಂಕರ್, ಎನ್.ಎಸ್. ಸತ್ಯನಾರಾಯಣ, ಎನ್. ಕಿರಣ್, ಕೆ.ಜಿ. ಕೃಷ್ಣಪ್ಪ, ನಂಜುಂಡಸ್ವಾಮಿ ಸೇರಿ ಹಲವು ನಿಸ್ವಾರ್ಥ ಮನೋಭಾವದವರಿಂದ ಸಮಿತಿಯ ಯಶಸ್ಸು ಸಾಧ್ಯವಾಗಿದೆ. 2011-12ರಲ್ಲಿ ಶ್ರೀ ಪತಂಜಲಿ ಯೋಗ ಫೌಂಡೇಷನ್ ಹೆಸರಿನಲ್ಲಿ ಒಂದು ಟ್ರಸ್ಟ್ ರಚಿಸಲಾಯಿತು. ಬಳಿಕ ಕೃಷ್ಣಮೂರ್ತಿಪುರಂನಲ್ಲಿ ‘ಯೋಗಮಂದಿರ’ ಎಂಬ ಹೆಸರಿನಲ್ಲಿ ಒಂದು ಸ್ವಂತ ಕಟ್ಟಡ ನಿರ್ವಿುಸಲಾಯಿತು. 2015ರಲ್ಲಿ ಪೂರ್ಣಗೊಂಡ ಈ ಕಟ್ಟಡಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅನುದಾನ ನೀಡಿದ್ದಾರೆ.

Leave a Reply

Your email address will not be published. Required fields are marked *