ಪಂಚಮಸಾಲಿಗರಿಂದ ಪ್ರತ್ಯೇಕ ಆಚರಣೆ

ಮುಂಡರಗಿ: ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿಯನ್ನು ಸಕಾಲದಲ್ಲಿ ಆಚರಿಸಲಿಲ್ಲ ಎಂದು ಆರೋಪಿಸಿ ತಾಲೂಕು ಪಂಚಮಸಾಲಿ ಸಮಾಜದವರು ಮಂಗಳವಾರ ತಹಸೀಲ್ದಾರ್ ಕಾರ್ಯಾಲಯ ಮುಂದೆ ಪ್ರತಿಭಟನೆ ನಡೆಸಿದರು.

ಬೆಳಗ್ಗೆ 9ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ 11.30 ಗಂಟೆಯಾದರೂ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳದ್ದಕ್ಕೆ ಪ್ರತಿಭಟನಾಕಾರರು ತಾಲೂಕಾಡಳಿತದ ವಿರುದ್ಧ ಹರಿಹಾಯ್ದರು. ಸೋಮವಾರ ಬೆಂಗಳೂರಿಗೆ ತೆರಳಿದ್ದ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ಮಂಗಳವಾರ ಬೆಳಗ್ಗೆ 11.15ಕ್ಕೆ ಕಚೇರಿಗೆ ಆಗಮಿಸಿದ್ದರು. ಕಚೇರಿ ಸಿಬ್ಬಂದಿಯು ತಹಸೀಲ್ದಾರ್ ಸಭಾಂಗಣದಲ್ಲಿ ನಡೆಯುತ್ತಿದ್ದ ವಿಡಿಯೋ ಕಾನ್ಪ್​ರನ್ಸ್ ಕಾರ್ಯಕ್ರಮದಲ್ಲಿ ತೊಡಗಿದ್ದರು. ತಹಸೀಲ್ದಾರ್ ಅವರು ಕಚೇರಿಗೆ ಆಗಮಿಸಿದ ಕೂಡಲೇ ಬೇರೆ ಕೊಠಡಿಯಲ್ಲಿ ಪೂಜೆಗೆ ಸಿದ್ಧತೆ ಮಾಡಲು ಸೂಚಿಸಿದರು.  ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಸ್. ವಿ. ಪಾಟೀಲ ಮಾತನಾಡಿ, ‘ಎಲ್ಲ ಜಯಂತಿಗಳನ್ನು ಅಚ್ಚುಕಟ್ಟಾಗಿ ಆಚರಿಸುವ ತಾಲೂಕಾಡಳಿತ ಚನ್ನಮ್ಮ ಜಯಂತಿ ಆಚರಣೆಯನ್ನು ನಿರ್ಲಕ್ಷಿಸಿ ಪಂಚಮಸಾಲಿ ಜನಾಂಗವನ್ನು ಅವಮಾನಿಸಿದೆ. ತಹಸೀಲ್ದಾರ್ ಅವರನ್ನು ತಕ್ಷಣ ಬೇರೆಡೆಗೆ ವರ್ಗಾಯಿಸಬೇಕು’ ಎಂದು ಒತ್ತಾಯಿಸಿದರು.

ಪಂಚಮಸಾಲಿ ಸಮಾಜದವರು ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಪ್ರತ್ಯೇಕವಾಗಿ ಜಯಂತಿ ಆಚರಿಸಿದರು. ಬಿ.ಕೆ. ಪಾಟೀಲ, ಅಶೋಕ ಹಂದ್ರಾಳ, ಸಿದ್ದು ದೇಸಾಯಿ, ಬಸವರಾಜ ದೇಸಾಯಿ, ವಿ.ಎಸ್. ಗಟ್ಟಿ, ದೇವಪ್ಪ ಇಟಗಿ, ನಾಗರಾಜ ಮುರಡಿ, ಮಂಜುನಾಥ ಮುಧೊಳ, ಅಂದಪ್ಪ ಕಲ್ಲಳ್ಳಿ, ಮುತ್ತು ಅಳವಂಡಿ, ಈರಣ್ಣ ಹಕ್ಕಂಡಿ, ಚನ್ನವೀರಗೌಡ ಪಾಟೀಲ, ಮಹೇಶ ಜಂತ್ಲಿ, ನಿಂಗನಗೌಡ ಪೊಲೀಸ್ ಪಾಟೀಲ, ರವಿ ಅರಿಸಿಣದ, ಸೋಮನಗೌಡ ಹಕ್ಕಂಡಿ, ಕೃಷ್ಣ ಲಿಂಗಶೆಟ್ಟರ, ಈರಣ್ಣ ಬಂಡಿ, ಮುತ್ತಣ್ಣ ತವರಿ, ಶ್ರೀಕಾಂತಗೌಡ ಪಾಟೀಲ, ಬಸವರಾಜ ಬಣಕಾರ, ಶಿವಾನಂದ ಕಮತಾರ, ಈರಣ್ಣ ಬಡ್ನಿ, ಶೋಭಾ ಪಾಟೀಲ, ಮಂಜುಳಾ ಇಟಗಿ, ಅನ್ನಪೂರ್ಣಾ ದೇಸಾಯಿ, ನೇತ್ರಾವತಿ ಬಾವಿಹಳ್ಳಿ, ರೇಣುಕಾ ಮುದ್ದಿ, ನಿಂಗಮ್ಮ ಸಬರದ, ಸುವರ್ಣಾ ಹಂದ್ರಾಳ, ಇತರರಿದ್ದರು.

ಅಧಿಕಾರಿಗಳಿಂದ ಜಯಂತಿ ಆಚರಣೆ

ತಹಸೀಲ್ದಾರ್ ಕಚೇರಿಯಲ್ಲಿ ನಡೆಯಬೇಕಿದ್ದ ಚನ್ನಮ್ಮ ಜಯಂತಿಯಲ್ಲಿ ಪಂಚಮಸಾಲಿ ಸಮಾಜದವರು ಭಾಗವಹಿಸಲಿಲ್ಲ. ಹೀಗಾಗಿ ಕಚೇರಿಯಲ್ಲಿ ತಹಸೀಲ್ದಾರ್ ಗುಬ್ಬಿಶೆಟ್ಟಿ, ಅಧಿಕಾರಿಗಳು, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಕೊಟ್ರಗೌಡ ಪಾಟೀಲ, ಬಸವರಾಜ ನವಲಗುಂದ ಮತ್ತಿತರರು ಸೇರಿ ಚನ್ನಮ್ಮ ಜಯಂತಿ ಆಚರಿಸಿದರು.

ಕಣ್ಣೀರಿಟ್ಟ ತಹಸೀಲ್ದಾರ್ !

ಪಂಚಮಸಾಲಿ ಸಮಾಜದ ಮುಖಂಡರೊಂದಿಗೆ ತಹಸೀಲ್ದಾರ್, ಸಿಪಿಐ ಶ್ರೀನಿವಾಸ ಮೇಟಿ ಅವರು ಸಭೆ ನಡೆಸಿದರು. ಕಚೇರಿ ಕಾರ್ಯದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರಿಂದ ಕಚೇರಿಗೆ ಬರಲು ತಡವಾಯಿತು. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಕಣ್ಣೀರು ಹಾಕಿ ನೋವಿನಿಂದ ನುಡಿದರು.