ಬೆಳಗಾವಿ: ಇಲ್ಲಿನ ಪೀರಣವಾಡಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ಶ್ರೀನೇಮಿನಾಥ ತೀರ್ಥಂಕರರ ಹಾಗೂ ಮಾನಸ್ಥಂಭೋಪರಿ ಚರ್ತುಮುಖ ಜಿನಬಿಂಬ ಪಂಚಕಲ್ಯಾಣ ಮಹೋತ್ಸವ ಶನಿವಾರ ಆರಂಭಗೊಂಡಿದ್ದು, ಮಹಾಮಹೋತ್ಸವಕ್ಕೆ ಸಂಭ್ರಮದಿಂದ ಚಾಲನೆ ನೀಡಲಾಯಿತು.
ಶ್ರೀಧರ್ಮಸೇನ ಮುನಿಮಹಾರಾಜರು ಮತ್ತು ಶ್ರೀ 108 ವೃಷಭಸಾಗರ ಮುನಿ ಮಹಾರಾಜರ ಸಾನ್ನಿಧ್ಯದಲ್ಲಿ ಪಂಚಕಲ್ಯಾಣ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಶನಿವಾರ ಬೆಳಗ್ಗೆ ಅನಿಲ ಪಾಟೀಲ ದಂಪತಿ ಧ್ವಜಾರೋಹಣ ನೆರವೇರಿಸುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು. ತದನಂತರ, ಬಾಹುಬಲಿ ಸಂಗಮಿ ದಂಪತಿ ಮಂಟಪ ಉದ್ಘಾಟನೆ ನೆರವೇರಿಸಿದರು. ನಂತರ ಗರ್ಭ ಕಲ್ಯಾಣ ಕಾರ್ಯಕ್ರಮ ಜರುಗಿತು. ಬೆಳಗ್ಗೆ ನಾಂದಿಮಂಗಲ, ಯಜಮಾನ ಆಗಮನ, ಆಚಾರ್ಯ ನಿಮಂತ್ರಣ, ಇಂದ್ರ ಪ್ರತಿಷ್ಠಾ, ಕಂಕಣ ಬಂಧನ ಧ್ವಜಾರೋಹಣ, ಮಂಟಪ ಉದ್ಘಾಟನೆ, ದ್ವೀಪ ಪ್ರಜ್ವಲನೆ, ನವಗ್ರಹ ಹೋಮ, ಮಂಗಲ ಕಳಶ ತರುವುದು, ಪಂಚಾಮೃತ ಅಭಿಷೇಕ, ಶಾಂತಿಧಾರಾ, ಗರ್ಭ ಕಲ್ಯಾಣಕ ವಿಧಾನ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಕೊಲ್ಲಾಪುರ ಜಿಲ್ಲೆಯ ಮಜಲೆ ಗ್ರಾಮದ 25 ಯುವಕರು ಸೈಕಲ್ ಮೂಲಕ ಪೀರನವಾಡಿ ಗ್ರಾಮಕ್ಕೆ ಬೆನ್ನಿನ ಮೇಲೆ ಹೊತ್ತುಕೊಂಡು ತಂದಿದ್ದ ಮಹಾವೀರರ ಎರಡು ಪ್ರತಿಮೆಗಳು, ಧರ್ಮನಾಥ ತೀರ್ಥಂಕರರ ಪ್ರತಿಮೆಯನ್ನು ಪಂಚಕಲ್ಯಾಣ ಮಹೋತ್ಸವ ಸಮಿತಿಗೆ ಹಸ್ತಾಂತರಿಸಿದರು. ಭಾನುವಾರ ಭಗವತ್ ಜನ್ಮಕಲ್ಯಾಣ ಕೋಟಿವಾದ್ಯ ಘೋಷ, ಜನ್ಮಕಲ್ಯಾಣ ವಿಧಾಣ, ಪಾಡುಂಕಶೀಲೆಯ ಮೇಲೆ ಜನ್ಮಾಭಿಷೇಕ, ನಾಮಕರಣ, ಬಾಲಲೀಲೆ, ಕುಮಾರ ಕ್ರೀಡೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.