ಚಿಕ್ಕಮಗಳೂರು: ಸಂವಿಧಾನ ಗ್ರಂಥಕ್ಕೆ ಅಪಮಾನಿಸಿ, ಕರ್ತವ್ಯ ಲೋಪವೆಸಗಿರುವ ನ್ಯಾಯಾಧೀಶರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಬುಧವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ರಾಜ್ಯ ಮುಖಂಡ ದಂಟರಮಕ್ಕಿ ಶ್ರೀನಿವಾಸ್, ನಗರದ ಸರ್ವಧರ್ಮ ಸಮನ್ವಯ ವೇದಿಕೆ ಕಾರ್ಯಕ್ರಮದಲ್ಲಿ ಹಾಸನ ನಾಯಾಧೀಶರು ಸಂವಿಧಾನ ಅಂಬೇಡ್ಕರ್ ರಚನೆಯಲ್ಲ ಎಂದು ಸುಳ್ಳು ಸಂದೇಶ ರವಾನಿಸಿ ಜನತೆಗೆ ದಿಕ್ಕುತಪ್ಪಿಸಿ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಎಂದು ದೂರಿದರು.
ನ್ಯಾಯಾಧೀಶರ ಭಾಷಣದಲ್ಲಿ ಭಾರತದ ಸಂವಿಧಾನ ಕರಡು ಪ್ರತಿಯನ್ನು ಅಂಬೇಡ್ಕರ್ ರಚಿಸಿಲ್ಲ. ಬದಲಾಗಿ ಬಿ.ಎನ್.ರಾವ್ ಎಂಬುವವರು ವಿಶ್ವದ ಅನೇಕ ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತದ ಸಂವಿಧಾನದ ಕರಡನ್ನು ರಚಿಸಿದ್ದ ಸಂವಿಧಾನ ಪ್ರತಿಯನ್ನು ಅಂಬೇಡ್ಕರ್ ಅವರು ಸಭೆಗೆ ಹಾಜರುಪಡಿದ್ದರು ಎಂದು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು ಎಂದರು.
ಇಡೀ ಪ್ರಪಂಚವೇ ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂದು ಪರಿಗಣಿಸಿದೆ. ಅಲ್ಲದೇ ಸಂವಿಧಾನದ ಕರಡನ್ನು ರಚಿಸಿರುವುದಾಗಿ ಸಂವಿಧಾನ ಸಭೆಯಲ್ಲಿ ತಿಳಿಸಿದೆ. ಆದರೆ ಬರೆದಿರುವ ಬರಹ ಮತ್ತು ಭಾಷಣ ಕೃತಿಯಲ್ಲಿ ಬಿ.ಎನ್.ರಾವ್ ಸಂವಿಧಾನ ಕರಡು ಪ್ರತಿ ರಚಿಸಿರುವ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಿದರು.
ರಾಷ್ಟçದ ಜನತೆ ಅಂಬೇಡ್ಕರ್ ಅವರೆ ಸಂವಿಧಾನದ ಪಿತಾಮಹ ಎಂಬುದಾಗಿ ನಂಬಿದ್ದಾರೆ. ಇದನ್ನರಿಯದೇ ಭಾಷಣಕಾರರಾಗಿ ಭಾಗವಹಿಸಿದ ನ್ಯಾಯಾಧೀಶರು ಸುಳ್ಳು ಮಾಹಿತಿಯನ್ನು ರವಾನಿಸಿದ ಕಾರಣ ಭಾರತೀಯರಿಗೆ ನೋವುಂಟಾಗಿದೆ. ಅಲ್ಲದೇ ಅವರ ಮಾತುಗಳು ಅಂಬೇಡ್ಕರ್‌ಗೆ ನೇರವಾಗಿ ಅವಮಾನ ಮಾಡಿದಂತಾಗಿದೆ ಎಂದು ಆರೋಪಿಸಿದರು.
ಬಿಎಸ್‌ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ಮಾತನಾಡಿ, ಅಂಬೇಡ್ಕರ್ ಬಗ್ಗೆ ಅಪಾರ ಗೌರವದ ಭಾವನೆ ಹೊಂದಿರುವ ದೇಶದ ಜನತೆಯ ಮನಸ್ಸಿಗೆ ಘಾಸಿ ಉಂಟಾಗಿದೆ. ಭಾರತದ ಸಂವಿಧಾನದ ವಿಷಯದಲ್ಲಿ ತಪ್ಪು ಸಂದೇಶಗಳನ್ನು ನೀಡುವುದರ ಮೂಲಕ ಸಂವಿಧಾನದ ಇತಿಹಾಸವನ್ನು ತಿರುಚಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಸಂವಿಧಾನದ ಬಗ್ಗೆ ಸ್ಪಷ್ಟತೆ ಹೊಂದಿರದ ನ್ಯಾಯಾಧೀಶರು ಖಾಸಗಿ ಪತ್ರಿಕೆಯ ಪ್ರೇರಿತರಾಗಿ ಹಾಗೂ ಒಂದು ವರ್ಗಕ್ಕೆ ಸಂತೃಪ್ತಿಪಡಿಸಲು ತಪ್ಪು ಸಂದೇಶ ನೀಡಿರುವ ಉz್ದೆÃಶ ಹೊಂದಿದ್ದಾರೆ. ಸಂವಿಧಾನ ರಚನೆ ಮತ್ತು ಅಂಬೇಡ್ಕರ್‌ಗೆ ಅವಮಾನಗೊಳಿಸುವುದು ದೇಶದ್ರೋಹದ ಕೆಲಸ ಎಂದು ದೂರಿದರು.
ಕೂಡಲೇ ಹಾಸನ ನ್ಯಾಯಾಧೀಶರು ವಿರುದ್ಧ ಸೂಕ್ತ ಕಾನೂನು ಮತ್ತು ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಛಲವಾದಿ ಮಹಾಸಭಾ ರಘು, ಡಿಎಸ್‌ಎಸ್ ಮುಖಂಡರಾದ ಮರ್ಲೆ ಅಣ್ಣಯ್ಯ, ಕೃಷ್ಣಮೂರ್ತಿ, ಬಾಲಕೃಷ್ಣ, ಸಂತೋಷ್, ಚಂದ್ರಶೇಖರ್ ಪುರ, ಹರೀಶ್ ಮಿತ್ರ, ವಸಂತ್ ಕುಮಾರ್ ಮತ್ತಿತರರಿದ್ದರು.