ನ್ಯಾಯದಾನ ವಿಳಂಬದಿಂದ ನಂಬಿಕೆ ಕಡಿಮೆ

ಧಾರವಾಡ: ವ್ಯಾಜ್ಯಗಳು ನ್ಯಾಯಾಲಯ ವ್ಯಾಪ್ತಿಗೆ ಬಂದಾಗ ತ್ವರಿತ ನ್ಯಾಯದಾನದ ಅಗತ್ಯವಿರುತ್ತದೆ. ಆದರೆ ಒಂದೇ ಪ್ರಕರಣವು ಹಲವು ವರ್ಷಗಳವರೆಗೆ ವಿಚಾರಣೆ ಹಂತದಲ್ಲಿ ಉಳಿದಾಗ ಸಾರ್ವಜನಿಕರಿಗೆ ನ್ಯಾಯಾಂಗದ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಡಾ. ಸಂತೋಷ ಹೆಗ್ಡೆ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮೀಡಿಯೇಷನ್ ಮತ್ತು ಆರ್ಬಿಟ್ರೇಶನ್ ಕೌನ್ಸಿಲ್ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಜನರಿಗೆ ಶೀಘ್ರ ಮತ್ತು ಗುಣಮಟ್ಟದ ನ್ಯಾಯದಾನ ಅಗತ್ಯವಿದೆ. ಈ ನಿಟ್ಟಿನಲ್ಲಿ ವ್ಯಾಜ್ಯಗಳ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಅನುಕೂಲವಾಗಲಿದೆ. ವಿಳಂಬವಾಗಿ ತೀರ್ಪು ಬಂದಾಗ ‘ಗೆದ್ದವನು ಸೋತ, ಸೋತವನು ಸತ್ತ’ ಎಂಬಂತಾಗುತ್ತದೆ. ಇದರಿಂದ ನ್ಯಾಯಾಂಗದ ಘನತೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾನೂನು ವಿಶ್ವವಿದ್ಯಾಲಯದ ಡೀನ್ ಸಿ.ಎಸ್. ಪಾಟೀಲ ಮಾತನಾಡಿ, ಎಲ್ಲ ಪ್ರಕಾರದ ವ್ಯಾಜ್ಯಗಳು ನ್ಯಾಯಾಲಯಕ್ಕೆ ಬರುತ್ತವೆ. ಅದರಂತೆ ಅವುಗಳ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಬೇಕು. ನ್ಯಾಯಾಂಗದಲ್ಲಿ ತಾಂತ್ರಿಕತೆ ಜ್ಞಾನ ಹೆಚ್ಚಾಗಬೇಕು ಎಂದರು. ಮಿಡಿಯೇಷನ್ ಮತ್ತು ಆರ್ಬಿಟ್ರೇಶನ್ ಕೌನ್ಸಿಲ್​ನ ಲೋಗೋ ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ.ಬಿ. ಕಣವಿ, ವಿ.ಡಿ. ಕಾಮರೆಡ್ಡಿ, ಬಿ.ಕೆ. ಕಣವಿ, ಎಸ್.ಎಚ್. ಮಿಟ್ಟಲಕೋಡ, ಮಲ್ಲಿಕಾರ್ಜುನ ಹುಕ್ಕೇರಿ, ಇತರರು ಇದ್ದರು.

18 ವರ್ಷದ ಬಳಿಕ ಶಿಕ್ಷೆ: ಕೆಲ ಪ್ರಭಾವಿ ರಾಜಕಾರಣಿ, ಗಣ್ಯ ವ್ಯಕ್ತಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತವೆ. ಅವರಿಗೆ ಶಿಕ್ಷೆ ಆಗುವ ಹೊತ್ತಿಗೆ ವಯಸ್ಸು ಅರ್ಧ ಕಳೆದಿರುತ್ತದೆ. ಲಾಲುಪ್ರಸಾದ ಯಾದವ್​ಗೆ 18 ವರ್ಷಗಳ ಬಳಿಕ ಪಾಟ್ನಾ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತು. ಜಯಲಲಿತಾ, ಶಶಿಕಲಾ ಪ್ರಕರಣದಲ್ಲಿಯೂ ಅದೇ ಆಯಿತು ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.