ಕಾರವಾರ, ನೌಕಾವಲಯ, ಮುಖ್ಯಸ್ಥ, ಮಹೇಶ ಸಿಂಗ್, ಅಧಿಕಾರ

ನೌಕಾ ವಲಯ ಮುಖ್ಯಸ್ಥರಾಗಿ ಮಹೇಶ ಸಿಂಗ್ ಅಧಿಕಾರ ಸ್ವೀಕಾರ

ಕಾರವಾರ: ಕರ್ನಾಟಕ ನೌಕಾ ವಲಯ ಮುಖ್ಯಸ್ಥರಾಗಿ ರೇರ್ ಅಡ್ಮಿರಲ್ ಮಹೇಶ ಸಿಂಗ್ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಏಷ್ಯಾದಲ್ಲೇ ಅತಿ ದೊಡ್ಡ ನೌಕಾನೆಲೆಯಾಗಿ ರೂಪುಗೊಳ್ಳುತ್ತಿರುವ ಕಾರವಾರದ ಸೀಬರ್ಡ್ ನೌಕಾ ಯೋಜನೆ ಹಾಗೂ ಇಡೀ ಕರ್ನಾಟಕ ಕರಾವಳಿ ವ್ಯಾಪ್ತಿಯ ನೌಕಾ ಕಾರ್ಯಾಚರಣೆಗಳಿಗೆ ಇವರು ಮುಖ್ಯಸ್ಥರಾಗಿರುತ್ತಾರೆ.

ಕಾರವಾರದ ಕದಂಬ ನೌಕಾನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಹಿಂದಿನ ಮುಖ್ಯಸ್ಥ ಕೆ.ಜೆ. ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು. ನಂತರ ನೌಕಾ ಪಡೆಯಿಂದ ಗೌರವ ವಂದನೆ ಪಡೆದರು.

ರಾಷ್ಟ್ರೀಯ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿಯಾಗಿರುವ ಮಹೇಶ ಸಿಂಗ್ ಬ್ರಿಟನ್​ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್​ನಲ್ಲೂ ಓದಿದ್ದಾರೆ. ತಮ್ಮ ಕರ್ತವ್ಯ ಪ್ರಜ್ಞೆಗಾಗಿ ಅವರು ನೌಸೇನಾ ಪದಕ ಪಡೆದಿದ್ದಾರೆ.

ಅವರು 1987 ರಲ್ಲಿ ಭಾರತೀಯ ನೌಕಾಸೇನೆ ಸೇರಿದ್ದರು. ನೇವಿಗೇಶನ್ ಮತ್ತು ಡೈರೆಕ್ಷನ್ ತಜ್ಞರಾಗಿರುವ ಅವರು, ಐಎನ್​ಎಸ್ ಅಕ್ಷಯಾ ಹಾಗೂ ಜ್ಯೋತಿ ನೌಕೆಗಳ ಸಿಬ್ಬಂದಿಯಾಗಿ, ತಬರ ನೌಕೆಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಮಿಸೈಲ್ ನೌಕೆ ಐಎನ್​ಎಸ್ ನಿರ್ಗತ್​ದ ಮುಖ್ಯಸ್ಥರಾಗಿದ್ದರು. ಮೊರಿಶಸ್ ನೌಕಾನೆಲೆಗೆ ಕೆಲಕಾಲ ಪ್ರಭಾರ ಅಧಿಕಾರಿಯಾಗಿ ತೆರಳಿದ್ದರು.

ನೌಕಾಸೇನೆ ಕಾರ್ಯಾಚರಣೆ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿ, ನೌಕಾ ಸಿಬ್ಬಂದಿ ನಿರ್ದೇಶನಾಲಯದ ಪ್ರಧಾನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಕೊಚ್ಚಿಯ ನೇವಿಗೇಶನ್ ಎಂಡ್ ಡೈರೆಕ್ಷನ್ ಸ್ಕೂಲ್ ಹಾಗೂ ವಿಶಾಖಪಟ್ಟಣಂನ ಸಾಗರ ಯುದ್ಧ ಕೇಂದ್ರ ನೇತೃತ್ವ ವಹಿಸಿದ್ದರು. 2016 ರಲ್ಲಿ ರೇರ್ ಎಡ್ಮಿರಲ್(ನೌಕಾಸೇನೆಯ ಅತಿ ಉನ್ನತ ಅಧಿಕಾರಿಯ ಪದನಾಮ) ಆಗಿ ಭಡ್ತಿ ಹೊಂದಿದ ಅವರು ಪೂರ್ವ ನೌಕಾ ವಲಯದ ಮುಖ್ಯ ಸಿಬ್ಬಂದಿ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

Leave a Reply

Your email address will not be published. Required fields are marked *