ನೌಕಾನೆಲೆ ಮತಗಟ್ಟೆಯಲ್ಲಿ ಕಡಿಮೆ ಮತದಾನ

ಕಾರವಾರ: ಕದಂಬ ನೌಕಾನೆಲೆಯ ಮತಗಟ್ಟೆಯಲ್ಲಿ ಈ ಬಾರಿಯೂ ಅತೀ ಕಡಿಮೆ ಅಂದರೆ ಶೇ. 8.84 ರಷ್ಟು ಮತದಾನವಾಗಿದೆ.

ನೌಕಾನೆಲೆಯ ಒಳಗಿರುವ ಕೇಂದ್ರೀಯ ವಿದ್ಯಾಲಯದ ಮತಗಟ್ಟೆ ಸಂಖ್ಯೆ 139ರಲ್ಲಿ 835 ಪುರುಷ, 81 ಮಹಿಳೆಯರು ಸೇರಿ ಒಟ್ಟು 916 ಮತದಾರರಿದ್ದರು. ಅದರಲ್ಲಿ 60 ಪುರುಷ ಹಾಗೂ 21 ಮಹಿಳೆಯರು ಸೇರಿ 81 ಜನ ಮಾತ್ರ ಮತ ಚಲಾವಣೆ ಮಾಡಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಶೇ. 0.03ರಷ್ಟು ಅಂದರೆ ಇಬ್ಬರು ಮಾತ್ರ ಮತ ಚಲಾಯಿಸಿದ್ದರು. 2014ರ ಲೋಕಸಭೆಯ ಚುನಾವಣೆಯಲ್ಲಿ ಶೇ 30ರಷ್ಟು ಜನ ಮತ ಚಲಾಯಿಸಿದ್ದರು.

ನೌಕಾನೆಲೆಯಲ್ಲಿ ಕಡಿಮೆ ಮತದಾನವಾದ ಬಗ್ಗೆ ಕಳೆದ ಚುನಾವಣೆಯಲ್ಲೇ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಈ ಕುರಿತು ತನಿಖೆ ನಡೆಸುವಂತೆ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳು ಆಗ್ರಹಿಸಿದ್ದರು. ಆದರೂ ಈ ಬಾರಿಯೂ ಪ್ರಮಾಣ ಗಣನೀಯವಾಗಿ ಹೆಚ್ಚಿಲ್ಲ.

ಕಡಿಮೆಯಾಗಲು ಕಾರಣಗಳೇನು..?

  • 150ರಷ್ಟು ಸೇವಾ ಮತದಾರರು(ರಕ್ಷಣಾ ಪಡೆಯಲ್ಲಿರುವವರಿಗೆ ನೀಡುವ ಮತದಾನದ ವ್ಯವಸ್ಥೆ)ನೌಕಾನೆಲೆ ವ್ಯಾಪ್ತಿಯಲ್ಲಿದ್ದಾರೆ.
  • 250 ಮತದಾರರು ವಿವಿಧ ಕಾರಣಗಳಿಂದ ಯುದ್ಧ ನೌಕೆಗಳ ಮೇಲೆ ಸಮುದ್ರಕ್ಕೆ ತೆರಳಿದ್ದರಿಂದ ಮತದಾನ ಮಾಡಲು ಸಾಧ್ಯವಾಗಿಲ್ಲ ಎಂಬುದು ಅಧಿಕಾರಿಗಳ ಸ್ಪಷ್ಟನೆ.
  • ಚುನಾವಣೆ ದಿನ ನೌಕಾನೆಲೆಯ ಎಲ್ಲ ವಿಭಾಗಗಳಿಗೆ ಸಾರ್ವತ್ರಿಕ ರಜೆ ನೀಡಿಲ್ಲ. ಪ್ರಚಾರಕ್ಕೆ ತೆರಳಲು ರಾಜಕೀಯ ಪಕ್ಷಗಳಿಗೆ ಅನುಮತಿ ನೀಡುವುದಿಲ್ಲ.

ಜನಪ್ರತಿನಿಧಿಗಳ ಅಸಮಾಧಾನ

ವಿಧಾನಸಭೆ ಚುನಾವಣೆಯಲ್ಲಿ ನೌಕಾನೆಲೆಯ ಒಳಗೆ ಪ್ರಚಾರಕ್ಕೆ ಅವಕಾಶ ನೀಡುವಂತೆ ಶಾಸಕಿ ರೂಪಾಲಿ ನಾಯ್ಕ ಕೇಂದ್ರ ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದರು. ಎನ್​ಸಿಪಿ ಅಭ್ಯರ್ಥಿ ಮಾಧವ ನಾಯ್ಕ ಈ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಆದರೂ ಅಧಿಕಾರಿಗಳು ಮತದಾನ ಹೆಚ್ಚಳಕ್ಕೆ ಕ್ರಮವಹಿಸಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಕೇವಲ ಇಬ್ಬರು ಮತದಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಈ ಬಾರಿ ನೌಕಾ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದೆವು. ಅಂತೂ ಈ ಬಾರಿ 81 ಜನ ಮತದಾನ ಮಾಡಿದ್ದಾರೆ.

ಎಂ.ರೋಶನ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ