ನೋಯಿಸಲು ಯಾವುದು ಸಕಾರಣ?

| ಡಾ.ಕೆ.ಪಿ. ಪುತ್ತೂರಾಯ

ನನಗೆ ವಯಸ್ಸಾದರೂ ನಾನೇನು ಹಣ್ಣು ಹಣ್ಣು ಮುದುಕನ ಹಾಗೆ ಕಾಣುತ್ತಿಲ್ಲ. ನನಗಿಂತ ಕೆಲವೇ ವರುಷ ಚಿಕ್ಕವಳಿರುವ ನನ್ನ ಹೆಂಡತಿಯೂ ಪ್ರಾಯದ ಹುಡುಗಿಯಂತೆ ಕಾಣುತ್ತಿಲ್ಲ. ಮೊನ್ನೆ ಬೆಳಗ್ಗೆ ನನ್ನ ಮಡದಿಯ ಜತೆ ವಾಕಿಂಗ್​ಗೆ ಹೋಗಿದ್ದಾಗ ನನ್ನ ಹಳೇ ಪರಿಚಯದವರೊಬ್ಬರು ಭೇಟಿಯಾದರು. ನನ್ನ ಮದುವೆ ಆದ ನಂತರ ನಾನು ಅವರನ್ನು ಭೇಟಿಯಾಗಿದ್ದು ಅದೇ ಮೊದಲ ಬಾರಿಗೆ. ನನ್ನನ್ನು ನನ್ನ ಮಡದಿಯ ಜತೆ ನೋಡಿ ‘ಮಗಳ ಜತೆ ವಾಕಿಂಗ್​ಗೆ ಹೊರಟಿದ್ದೀರಾ? ಎಂದು ಕೇಳಿದರು.’ ಆತ ಹಾಗೆ ಹೇಳಿದ್ದು ನನಗೆ ಬೇಸರ ತಂದಿತು. ಆದರೂ, ‘ಇಲ್ಲ, ಇಲ್ಲ. ಈಕೆ ನನ್ನ ಹೆಂಡತಿ’ ಎಂದೆ. ಅಷ್ಟಕ್ಕೂ ಸುಮ್ಮನಾಗದೆ ಆ ಮನುಷ್ಯ ‘ಅಂದ್ರೆ ಎರಡನೆಯ ಮದುವೆ ಇರಬೇಕೇನೋ?’ ಅನ್ನೋದೇ! ನಾನು ಮುದುಕನಾಗಿದ್ದೇನೆ ಎಂಬುದನ್ನು ತಿಳಿಸಲು, ಈತ ಹೀಗೆ ಹೇಳಿದ್ದಿರಬಹುದು. ಆದರೆ ಅವನ ಮಾತುಗಳಿಂದ ನನಗೆ ನೋವಾಗಿದ್ದು ನಿಜ.

ಇನ್ನೊಂದು ಘಟನೆ: ನನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿ ನಾನು ಆಸ್ಪತ್ರೆ ಸೇರಿದ್ದೆ. ವಾರದ ನಂತರ ಡಿಸ್​ಚಾರ್ಜ್ ಕೂಡ ಆಯಿತು. ಈ ವಿಷಯ ತಿಳಿದ ನನ್ನ ಹಳೇ ಗೆಳೆಯನೊಬ್ಬ ಮನೆಗೆ ನನ್ನನ್ನು ನೋಡಲು ಬಂದ. ಬಂದವನೇ ‘ನೀನು ಆಸ್ಪತ್ರೆಗೆ ಅಡ್ಮಿಟ್ ಆದ ವಿಷಯ ನನಗೇಕೆ ತಿಳಿಸಲಿಲ್ಲ? ನಾನು ನಿನ್ನ ಹಳೇ ಮಿತ್ರನಲ್ಲವೇ? ನೋಡಲು ಬರುತ್ತಿದ್ದೆ.’

ಆಗ ನಾನಂದೆ ‘ಸುಮ್ಮನೆ, ಯಾರಿಗೆ ಯಾಕೆ ತೊಂದರೆ ಕೊಡೋದಂತ, ಯಾರಿಗೂ ತಿಳಿಸಲಿಲ್ಲ? ತಕ್ಷಣ ಆ ಮನುಷ್ಯ ‘ಹೋಗ್ಲಿ ಬಿಡು, ನೆಕ್ಸ್ ್ಟ ಟೈಮ್ ಸೀರಿಯಸ್ ಆದಾಗ ತಿಳಿಸಿಬಿಡು, ನಾನೂ ಬಂದು ನೋಡುತ್ತೇನೆ’ ಅನ್ನೋದೇ! ಇದು ಅನೇಕರು ನಮ್ಮನ್ನು ಅವರ ಮಾತಿನಿಂದ ನೋಯಿಸುವ ರೀತಿ. ಇವು ಬೇಕೆಂದೇ ಆಡಿದ ಮಾತುಗಳಲ್ಲವಾದರೂ, ಪರಿಣಾಮ ಒಂದೇ.

ಉದ್ದೇಶಪೂರ್ವಕವಾಗಿ ನೋಯಿಸೋದಕ್ಕೆ ಏನೋ ಒಂದು ಬಲವಾದ ಕಾರಣವಿರುತ್ತದೆ. ಅದು ಪ್ರತೀಕಾರವಿರಬಹುದು, ದ್ವೇಷವಿರಬಹುದು. ಇಲ್ಲವೇ ತಮ್ಮ ಅಸಮಾಧಾನ ಹೊರಹಾಕುವ ವಿಧಾನವಿರಬಹುದು. ಕಾರಣ ಏನೇ ಇರಲಿ, ಇತರರನ್ನು ನೋಯಿಸುವುದು ಒಂದು ಸದ್ಗುಣವಲ್ಲ! ಮನುಷ್ಯ ಸ್ವಭಾವ ಹೇಗೆಂದರೆ, ಇತರರು ತನ್ನನ್ನು ಕೊಂಚ ನೋಯಿಸಿದರೂ ಸಾಕು, ಅದು ಅವನ ಗಮನಕ್ಕೆ ಬೇಗ ಬಂದು, ಆತ ನೊಂದುಕೊಳ್ಳುತ್ತಾನೆ. ಆದರೆ, ತಾನೂ ತನ್ನ ನಡೆ ನುಡಿಗಳಿಂದ ಕೆಲವೊಮ್ಮೆ ಇತರರನ್ನು ನೋಯಿಸುತ್ತಿರುತ್ತಾನೆ ಎಂಬ ನಿಜಾಂಶ ಇವನ ಗಮನಕ್ಕೆ ಬರುವುದೇ ಇಲ್ಲ. ಹೀಗಾಗಬಾರದೆಂದು ಪ್ರೇರಣೆಯಾಗಬಲ್ಲ ಈ ಶುಭ ಚಿಂತನೆ.

ಅಂತೆಯೇ ವ್ಯಕ್ತಿಯ ಜಾತಿ-ಕುಲ-ಧರ್ಮದ ಬಗ್ಗೆ ಕೇಳುವ ವೈಯಕ್ತಿಕವಾದ ಮಾತುಗಳಿಂದಲೂ, ಅವರ ವಯಸ್ಸು, ವೇತನದ ಬಗ್ಗೆ ನಡೆಸುವ ವಿಚಾರಣೆಯಿಂದಲೂ, ಜನ ನೊಂದುಕೊಳ್ಳುತ್ತಾರೆ. ಹೀಗಾಗದಂತೆ ನಾವು ಎಚ್ಚರವಹಿಸಬೇಕು. ಮಾತುಗಳು ನೇರವಾಗಿರಲಿ, ನಯವಾಗಿರಲಿ. ನಿಂದನೆ, ವ್ಯಂಗ್ಯದ ಮಾತುಗಳಿಂದಲೂ ಜನ ನೊಂದುಕೊಳ್ಳುತ್ತಾರೆ.

ಮೆಚ್ಚುಗೆಯ ಮಾತುಗಳನ್ನು ಆಡಲೇಬೇಕಾದಲ್ಲಿ ಒಂದು ಶಬ್ದವನ್ನು ಮಾತನಾಡದೆ ಸುಮ್ಮನಿದ್ದಾಗ ಸಹಾನುಭೂತಿ ತೋರಬೇಕಾದಲ್ಲಿ ಮೌನವಾಗಿದ್ದಾಗ, ಪ್ರೋತ್ಸಾಹದ ನುಡಿಗಳನ್ನಾಡಬೇಕಾದಲ್ಲಿ ಸುಮ್ಮನಿದ್ದಾಗಲೂ, ನಾವು ಇತರರನ್ನು ನೋಯಿಸುತ್ತೇವೆ.

ಇತರರಲ್ಲಿರುವ ಒಳ್ಳೆಯ ಗುಣಗಳನ್ನೆಲ್ಲ ಕಡೆಗಣಿಸಿ, ಬರೇ ಅವರಲ್ಲಿರುವ ಚಿಕ್ಕ ಪುಟ್ಟ ದೋಷಗಳನ್ನು ಮಾತ್ರ ಎತ್ತಿ ಹಿಡಿದು, ದೊಡ್ಡದು ಮಾಡಿ, ಅವರನ್ನು ಹಂಗಿಸಿ, ಹೀಯಾಳಿಸಿ, ನಿಂದಿಸಿದಾಗಲೂ ಅವರ ನೋವಿಗೆ ನಾವೇ ಕಾರಣವಾಗುತ್ತೇವೆ.

ಇನ್ನು ಇತರರನ್ನು ನೋಯಿಸುವ ಅತ್ಯುತ್ತಮ ವಿಧಾನವೆಂದರೆ, ಅವರ ಹೆತ್ತವರ ಬಗ್ಗೆ, ಮಡದಿ ಮಕ್ಕಳ ಬಗ್ಗೆ ಲಘುವಾಗಿ ಮಾತನಾಡುವುದು; ಇಲ್ಲವೇ ಅಲ್ಲಸಲ್ಲದ ಆಪಾದನೆಗಳನ್ನು ಹೊರಿಸುವುದು. ಅದೇ ರೀತಿ ಇತರರು ನೊಂದುಕೊಳ್ಳುವ ಇನ್ನಿತರ ಸಂದರ್ಭಗಳೆಂದರೆ-ನಮ್ಮನ್ನೇ ನಂಬಿದವರನ್ನು ನಾವು ಅವರ ಕಷ್ಟಕಾಲದಲ್ಲಿ ಕೈ ಬಿಟ್ಟಾಗ, ಅವರಿಗೆ ಕೈ ಕೊಟ್ಟಾಗ ಇಲ್ಲವೇ ಅವರ ಬಗ್ಗೆ ಕಾಳಜಿ, ಕನಿಕರ ವ್ಯಕ್ತಪಡಿಸಿದಾಗ.

ಬಂದ ದೂರವಾಣಿ ಕರೆಗಳಿಗೆ ಉತ್ತರಿಸದೇ ಇರೋದರಿಂದಲೂ ನಾವು ಜನರನ್ನು ನೋಯಿಸಬಹುದು. ನಮ್ಮ ಶ್ರೀಮಂತಿಕೆಯನ್ನು ಬೇಕೆಂದು ಇತರರ ಎದುರು ಪ್ರದರ್ಶಿಸಿದಾಗ, ತಾರತಮ್ಯ ತೋರಿದಾಗ, ಇತರರನ್ನು ಲಘುವಾಗಿ ಕಂಡಾಗಲೂ ನಾವು ಅವರ ನೋವಿಗೆ ಕಾರಣರಾಗುತ್ತೇವೆ. ವ್ಯಕ್ತಿಗೆ ಪ್ರಿಯವಾದ ವಸ್ತು-ವಿಷಯಗಳ ಬಗ್ಗೆ ಹಗುರವಾಗಿ ಮಾತನಾಡಿದಾಗಲೂ ಥರಥರದ ಉಪೇಕ್ಷೆಗಳಿಂದಲೂ, ನಾವು ಜನರನ್ನು ನೋಯಿಸುತ್ತೇವೆ. ಇತರರು ನಮ್ಮನ್ನು ಗಣನೆಗೆ ತೆಗೆದುಕೊಳ್ಳದಾಗ, ನಮ್ಮನ್ನು ನಿರ್ಲಕ್ಷಿಸಿದಾಗ, ನಮ್ಮ ಮಾತಿಗೆ ಬೆಲೆ ಕೊಡದಾಗ ನಮಗೆ ಬೇಸರವಾಗುತ್ತದೆ. ತನ್ನನ್ನು ಎಲ್ಲರೂ ಕೇಳಬೇಕು, ಗುರುತಿಸಬೇಕೆಂಬುದು ಎಲ್ಲರಲ್ಲೂ ಅಂತರ್ಗತವಾಗಿರುವ ಒಂದು ಸಹಜ ಸ್ವಾಭಾವಿಕವಾದ ಗುಣ. ಹೀಗಾಗುವಂತೆ ಜನರು ಥರಥರದ ಕಸರತ್ತುಗಳನ್ನು ನಡೆಸುತ್ತಾರೆ. ಅದು ತಮ್ಮ ಉಡುಪುಗಳ ಮೂಲಕವಿರಬಹುದು, ಅಧಿಕಾರ-ಶ್ರೀಮಂತಿಕೆಯ ಪ್ರದರ್ಶನದ ಮುಖೇನ ಇರಬಹುದು, ಒಟ್ಟಿನಲ್ಲಿ ಜನರ ಗಮನ ಸೆಳೆಯುವ ಪ್ರಯತ್ನಗಳಿವು. ಜನರ ಈ ಗುಣಸ್ವಭಾವವನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ವರ್ತಿಸಬೇಕು. ಪರಸ್ಪರ ಸಂಬಂಧಗಳು ಹಾರ್ದಿಕವಾಗಬೇಕಿದ್ದರೆ ಉಪೇಕ್ಷೆಗಳಿರಬಾರದು. ಉಪೇಕ್ಷೆ ಎಂದರೆ ನಾವು ವ್ಯಕ್ತಿಗೆ ತೋರುವ ಅತಿ ದೊಡ್ಡ ಅಗೌರವ. ದ್ವೇಷಿಸುವವರನ್ನು ಕ್ಷಮಿಸಬಹುದು; ಆದರೆ ಉಪೇಕ್ಷೆ ಮಾಡುವವರನ್ನು ಸಹಿಸೋದು ಬಹಳ ಕಷ್ಟವಾಗುತ್ತದೆ.

ಇನ್ನೊಬ್ಬರ ಮಾತುಗಳನ್ನು ಗಮನವಿಟ್ಟು ಕೇಳದಿರುವುದು, ಅವರು ಕರೆದಾಗ ಓ ಎನ್ನದಿರುವುದು, ಅವರ ಮಾತಿಗೆ ಪ್ರತಿಕ್ರಿಯಿಸದೇ ಇರುವುದು, ಅವರು ಗೈದ ಒಳ್ಳೆಯ ಕೆಲಸಗಳನ್ನು ಗಮನಿಸದೇ ಇರುವುದು, ಗಮನಕ್ಕೆ ಬಂದರೂ, ಒಂದು ಒಳ್ಳೆಯ ಮಾತನ್ನಾಡದಿರುವುದು-ನಾವು ಇತರರನ್ನು ನೋಯಿಸುವ ಕೆಲವು ಉದಾಹರಣೆಗಳು.

ಆಮಂತ್ರಿಸಿದ ಬಂಧು ಮಿತ್ರರು ಬಾರದೇ ಇದ್ದಾಗ ಹಾಗೂ ‘ಕ್ಷಮಿಸಿ ಬರಲಿಕ್ಕಾಗಲಿಲ್ಲ’ವೆಂದಾದರೂ ಹೇಳದಿದ್ದಾಗ ಬೇಸರವಾಗುತ್ತದೆ. ದುಡಿತಕ್ಕೆ ತಕ್ಕ ಮಿಡಿತವಿಲ್ಲದಿದ್ದರೂ ದುಃಖವಾಗುತ್ತದೆ.’ ಸ್ನೇಹ, ಬಂಧುತ್ವ, ದಾಂಪತ್ಯ ಎಲ್ಲ ಥರದ ಮಾನವೀಯ ಸಂಬಂಧಗಳು ಒಬ್ಬರಿನ್ನೊಬ್ಬರ ಗೌರವಿಸುವಿಕೆಯನ್ನು ಬಯಸುತ್ತದೆ. ಇದಕ್ಕಾಗಿ ಜನ ಕಾಯುತ್ತಿರುತ್ತಾರೆ. ಪರಸ್ಪರ ಪ್ರೀತಿ-ಗೌರವವಿಲ್ಲದ ದಾಂಪತ್ಯ ವಿರಸಕ್ಕೆ ಎಡೆಮಾಡಿಕೊಡುತ್ತದೆ, ಗೆಳೆತನ ಮುರಿದು ಬೀಳುತ್ತದೆ. ಹಾಗೂ ಸಂಬಂಧಗಳು ಹಳಸಿ ಹೋಗುತ್ತವೆ.

ನಿತ್ಯ ನಾವು ಹಲವಾರು ವ್ಯಕ್ತಿಗಳ ಸಂಪರ್ಕಕ್ಕೆ ಬರುತ್ತೇವೆ. ಕೆಲವರನ್ನು ತಕ್ಷಣ ಒಪ್ಪಿಕೊಳ್ಳುತ್ತೇವೆ; ಆದರೆ ಕೆಲವರನ್ನು ಅದೇನೋ ಒಪ್ಪಿಕೊಳ್ಳೋದೇ ಇಲ್ಲ. ಹೀಗಾಗಲು ನಾವು ನೋಡುವ ರೀತಿಯೇ ಕಾರಣ ಹೊರತು ವ್ಯಕ್ತಿಯ ದೋಷವಲ್ಲ! ಕೆಲವರನ್ನು ಅರ್ಥ ಮಾಡಿಕೊಂಡಿರುತ್ತೇವೆ. ಕೆಲವರನ್ನು ಅರ್ಥ ಮಾಡಿಕೊಂಡಿರುವುದಿಲ್ಲ! ಇಲ್ಲವೇ ಅರ್ಥ ಮಾಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನೇ ಮಾಡಿರುವುದಿಲ್ಲ. ಇದು ತರವಲ್ಲ. ಜನರನ್ನು ಅರ್ಥ ಮಾಡಿಕೊಂಡಷ್ಟು ಅವರನ್ನು ತಪ್ಪಾಗಿ ತಿಳಿದುಕೊಳ್ಳುವ ಪ್ರಸಂಗ-ಪ್ರಮೇಯಗಳು ಕಡಿಮೆಯಾಗುತ್ತವೆ.”Understanding each other is the shortest distance between people.’ ಎನ್ನಲಾಗಿದೆ. ಪ್ರೀತಿ ವಿನಾಕಾರಣವಾದರೂ ಪರವಾಗಿಲ್ಲ; ಆದರೆ, ದ್ವೇಷಿಸಲು, ನೋಯಿಸಲು ಕಾರಣವಿರಬೇಕು. ನಾವು ಜನರನ್ನು ತಿಳಿದೋ ತಿಳಿಯದೆಯೋ ನೋಯಿಸುತ್ತಿರುತ್ತೇವೆ. ಇದು ತರವಲ್ಲ. ಹಾಗೂ ಸುಸಂಸ್ಕೃತ ವ್ಯಕ್ತಿಯ ಲಕ್ಷಣವಲ್ಲ. ನಮ್ಮಿಂದ ತಿಳಿದೋ ತಿಳಿಯದೆಯೋ ಇತರರಿಗೆ ಉಪಕಾರವಾಗದಿದ್ದರೂ ಪರವಾಗಿಲ್ಲ. ಅಪಕಾರವಾಗಬಾರದು. ಇದುವೇ ಸುಸಂಸ್ಕೃತ ಜೀವನದ ಸಿದ್ಧಾಂತ.

(ಪ್ರತಿಕ್ರಿಯಿಸಿ : [email protected])

Leave a Reply

Your email address will not be published. Required fields are marked *