ನೋಟು ಬದಲಿಸುತ್ತಿದ್ದ 6 ಮಂದಿ ಬಂಧನ

ಬೆಂಗಳೂರು: ಹೊಸ ನೋಟುಗಳಿಗೆ ಬದಲಿಸಿಕೊಳ್ಳಲು ರದ್ದಾದ ನೋಟುಗಳನ್ನು ಸಾಗಿಸುತ್ತಿದ್ದ ಆರು ಜನರನ್ನುಮೈಕೊ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ 2.80 ಕೋಟಿ ರೂ. ಅಮಾನ್ಯೀಕರಣಗೊಂಡ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ದೊಮ್ಮಲೂರಿನ ವಕೀಲ ಕೆ.ಬಿ. ಮರಿ ರೆಡ್ಡಿ (60), ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಇಂಜಿನಿಯರ್ ಬಾನೂಜಿ (59), ರಿಯಲ್​ಎಸ್ಟೇಟ್ ವ್ಯಾಪಾರಿ ಯಲಹಂಕದ ಆರ್. ಹರೀಶ್ (50), ತಾವರೆಕೆರೆಯ ಚಂದ್ರಶೇಖರ್ (60), ಬನಶಂಕರಿಯ ಜಿ. ದಿನೇಶ್ (40) ಹಾಗೂ ಗೂಡ್ಸ್ ಆಟೋ ಚಾಲಕ ಬಿಟಿಎಂ ಲೇಔಟ್​ನ ಎಸ್. ದಿನೇಶ್ (30) ಬಂಧಿತರು. ವಶಪಡಿಸಿಕೊಂಡ ನೋಟುಗಳಲ್ಲಿ 2.02 ಲಕ್ಷ ರೂ ಮೌಲ್ಯದ 1 ಸಾವಿರ ರೂ. ಮುಖಬೆಲೆಯ 102 ಮತ್ತು 500 ರೂ. ಮುಖಬೆಲೆಯ 200 ನಕಲಿ ನೋಟುಗಳು ಅದರಲ್ಲಿ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಕತ್ರಿಗುಪ್ಪೆಯ ಶ್ರೀನಿವಾಸನಗರದ ರಮೇಶ್ ತಲೆಮರೆಸಿಕೊಂಡಿದ್ದಾನೆ. ಹಣ ಕೂಡ ಆತನಿಗೆ ಸೇರಿದ್ದು ಎನ್ನಲಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ.

ರದ್ದಾದ ನೋಟುಗಳನ್ನು ಬದಲಿಸಿಕೊಳ್ಳಲು ಮಹಿಳೆಯೊಬ್ಬರ ಬಳಿಗೆ ಕೊಂಡೊಯ್ಯುತ್ತಿದ್ದೆವು ಎಂದು ಮಾಹಿತಿ ನೀಡಿದ್ದಾರೆ. ಆ ಮಹಿಳೆ ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ತಿಳಿಸಿದರು.

ರದ್ದಾದ ನೋಟುಗಳನ್ನು ರಮೇಶ್ ಬದಲಿಸಲು ಯತ್ನಿಸುತ್ತಿದ್ದ. ಪರಿಚಯಸ್ಥ ದಿನೇಶ್​ಗೆ ಈ ವಿಷಯ ತಿಳಿಸಿದ್ದ. ಬಳಿಕ ರಮೇಶ್, ಮರಿರೆಡ್ಡಿಯ ಜತೆ ನೋಟು ಬದಲಾವಣೆ ಕುರಿತು ಮಾತನಾಡಿದ್ದ. ಮರಿರೆಡ್ಡಿ ತನ್ನ ಪರಿಚಯಸ್ಥ ಮಹಿಳೆಯಿಂದ ಹಣ ಬದಲಿಸಿಕೊಡುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ.

ಮೈಕೊ ಲೇಔಟ್ ಠಾಣೆಯಲ್ಲಿ ಸ್ಪೆಸಿಫೈಡ್ ನೋಟ್ಸ್ ಆಕ್ಟ್ ಮತ್ತು ನಕಲಿ ನೋಟು ಚಲಾವಣೆ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಗೂಡ್ಸ್ ಆಟೋದಲ್ಲಿ ಸಾಗಣೆ

ರದ್ದಾದ ನೋಟುಗಳನ್ನು ಅಕ್ಕಿ ಚೀಲದಲ್ಲಿ ತುಂಬಿಸಿಕೊಂಡು ಗೂಡ್ಸ್ ಆಟೋದಲ್ಲಿ ಸಾಗಿಸುತ್ತಿದ್ದರು. ಅನುಮಾನ ಬರದಿರಲಿ ಎಂದು ಹಣ ತುಂಬಿದ ಚೀಲಗಳು ಕಾಣದಂತೆ ಗ್ಯಾಸ್ ಸಿಲಿಂಡರ್ ಮತ್ತು ತೆಂಗಿನಕಾಯಿ ಚಿಪ್ಪು ತುಂಬಿದ ಚೀಲಗಳನ್ನು ಇರಿಸಿದ್ದರು. ಇತರೆ ಆರೋಪಿಗಳು ಬೈಕ್​ನಲ್ಲಿ ಗೂಡ್ಸ್ ಆಟೋವನ್ನು ಹಿಂಬಾಲಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ವಿಜಯ ಬ್ಯಾಂಕ್ ಲೇಔಟ್ ಬಿಬಿಎಂಪಿ ಆಟದ ಮೈದಾನ ಬಳಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾಗಿ ಡಿಸಿಪಿ ತಿಳಿಸಿದರು.

ಶೇ.70 ಕಮಿಷನ್

ಒಂದು ಕೋಟಿಗೆ ಕೇವಲ 30 ಲಕ್ಷ ರೂ. ಮಾತ್ರ ಹೊಸ ನೋಟಿಗೆ ಬದಲಾವಣೆ ಮಾಡಿಕೊಡುವ ಒಪ್ಪಂದಕ್ಕೆ ಬರಲಾಗಿತ್ತು. ಉಳಿದ ಶೇ.70 ಕಮಿಷನ್ ಎಂದು ನಿಗದಿಯಾಗಿತ್ತು. ಬದಲಿಸಿದ ಹೊಸ ನೋಟುಗಳಲ್ಲಿ ಮಧ್ಯಸ್ಥಿಕೆ ವಹಿಸಿದ್ದವರಿಗೆ ಶೇ.1 ಕಮಿಷನ್ ಬರುತ್ತಿತ್ತು ಎಂದು ಬಂಧಿತ ಆರೋಪಿಗಳು ತಿಳಿಸಿದ್ದಾರೆ.

ಜೈಲಿನಿಂದಲೇ 30 ಸಾವಿರ ರೂ. ಹಫ್ತಾಕ್ಕೆ ಬೆದರಿಕೆ

ಬೆಂಗಳೂರು: ಹಫ್ತಾ ಕೊಡಲು ನಿರಾಕರಿಸಿದ ಉದ್ಯಮಿ ಕಾರಿನ ಗಾಜುಗಳನ್ನು ದುಷ್ಕರ್ವಿುಗಳು ಪುಡಿಗಟ್ಟಿದ್ದಾರೆ. ವಿಜಯನಗರದ ಅಮರಜ್ಯೋತಿ ನಗರದಲ್ಲಿ ಗುರುವಾರ ಮಧ್ಯರಾತ್ರಿ ಪುಂಡರು ಗಲಾಟೆ ಮಾಡಿ ಕುಶಾಲ್ ಕುಮಾರಸ್ವಾಮಿ ಎಂಬುವರ ಕಾರಿನ ಗಾಜುಗಳನ್ನು ಒಡೆದು ಹಾಕಿದ್ದಾರೆ. ಈ ಸಂಬಂಧ ಮೂವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿ ರವಿ ಸಹಚರರಾದ ನವೀನ್, ಕಿರಣ ಮತ್ತು ಆಕಾಶ್ ಬಂಧಿತರು.ವಿಜಯನಗರದಲ್ಲಿ ಕಾರಿನ ಬಿಡಿಭಾಗಗಳ ಮಳಿಗೆ ಇಟ್ಟಿರುವ ಕುಶಾಲ್​ಗೆಜೈಲಿನಿಂದಲೇ ಕರೆ ಮಾಡಿದ್ದ ರವಿ, 30 ಸಾವಿರ ರೂ. ಹಫ್ತಾ ಕೇಳಿದ್ದ. ಕುಶಾಲ್ ನಿರಾಕರಿಸಿದ್ದರು. ಹಫ್ತಾ ಕೊಡದಿದ್ದರೆ ವ್ಯಾಪಾರಕ್ಕೆ ಅಡ್ಡಿಪಡಿಸುವುದಾಗಿ ರವಿ ಬೆದರಿಸಿದ್ದ. ಇದಕ್ಕೂ ಕುಶಾಲ್ ಮಣಿಯದಿದ್ದಾಗ, ಅವರ ಮನೆ ಬಳಿಗೆ ತನ್ನ ಸಹಚರರನ್ನು ಕಳಿಸಿ, ಜೂ.7ರಂದು ಅವರ ಮೇಲೆ ಹಲ್ಲೆ ಮಾಡಿಸಿದ್ದ. ಬೆದರಿದ ಅವರು 10 ಸಾವಿರ ರೂ. ಕೊಟ್ಟಿದ್ದರು.ಅದೇ ರಾತ್ರಿ ಮದ್ಯ ಸೇವಿಸಿ ಮತ್ತೆ ಕುಶಾಲ್ ಮನೆಗೆ ಬಂದ ದುಷ್ಕರ್ವಿುಗಳು ಮನೆ ಮುಂದಿದ್ದ 2 ಕಾರುಗಳ ಮೇಲೆ ಕಲ್ಲು ಎತ್ತಿಹಾಕಿ ಗಾಜುಗಳನ್ನು ಪುಡಿ ಮಾಡಿದ್ದರು. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜೈಲಿನಿಂದ ಕರೆ ಮಾಡಿರುವ ರವಿಗೆ ಮೊಬೈಲ್ ಸಿಕ್ಕ ಬಗ್ಗೆ ತನಿಖೆ ನಡೆಸಲು ಜೈಲು ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಡಿಸಿಪಿ ಅನುಚೇತ್ ತಿಳಿಸಿದರು.

Leave a Reply

Your email address will not be published. Required fields are marked *