ನೋಂದಣಾಧಿಕಾರಿ ಕಚೇರಿ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಿ

ಕೋಲಾರ: ಖಾಸಗಿ ಕಟ್ಟಡದಲ್ಲಿರುವ ಹಿರಿಯ ನೋಂದಣಾಧಿಕಾರಿ ಕಚೇರಿಯನ್ನು ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಬೇಕು ಹಾಗೂ ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ರೈತ ಸಂಘದ ಮುಖಂಡರು ನೋಂದಣಿ ಉಪ ನೋಂದಣಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೋಟ್ಯಾಂತರ ರೂ. ಖರ್ಚು ಮಾಡಿ ಸರ್ಕಾರ ಜಿಲ್ಲಾಡಳಿತ ಭವನ ನಿರ್ವಿುಸಿ ಎರಡು ವರ್ಷ ಕಳೆದರೂ ಕೆಲವು ಇಲಾಖೆಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಲಕ್ಷಾಂತರ ರೂ. ಬಾಡಿಗೆ ನೀಡಿ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ. ನೋಂದಣಿ ಕಚೇರಿ ಖಾಸಗಿ ಕಟ್ಟಡದಲ್ಲಿದ್ದು, 60ರಿಂದ 70 ಸಾವಿರ ರೂ. ಬಾಡಿಗೆ ನೀಡುತ್ತಿದ್ದರೂ ಈ ಕಚೇರಿಯನ್ನು ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ನೋಂದಣಾಧಿಕಾರಿಗಳ ಕಚೇರಿ ಅಧಿಕಾರಿಗಳಿಗೆ ಮತ್ತು ದಲ್ಲಾಳಿಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿದೆ. ಹಣ ನೀಡಿದರೆ ದಾಖಲೆ ಪರಿಶೀಲಿಸದೆ ಸರ್ಕಾರಿ ಗೋಮಾಳ, ಗುಂಡು ತೋಪು ಕೆರೆಗಳನ್ನೇ ನೋಂದಣಿ ಮಾಡುತ್ತಿದ್ದಾರೆ. ಕಚೇರಿಯಲ್ಲಿ ಹೆಜ್ಜೆ ಹೆಜ್ಜೆಗೂ ದಲ್ಲಾಳಿಗಳಿದ್ದು, ಜನರಿಂದ ಹಣ ಪೀಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಹಾಗೂ ಈ ಕೂಡಲೇ ಜಿಲ್ಲಾಡಳಿತ ಭವನಕ್ಕೆ ಇಲಾಖೆಯನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.

ಹಿರಿಯ ನೋಂದಣಾಧಿಕಾರಿ ಮಂಜುಳಾ ಹಾಗೂ ಪ್ರತಿಭಟನಾಕರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸಂಘದ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಾಪುರ ಪುರುಷೋತ್ತಮ್ ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ರಂಜಿತ್, ಸಾಗರ್, ಸುಪ್ರಿಂ ಚಲ, ಮಂಗಸಂದ್ರ ನಾಗೇಶ್, ಮಂಗಸಂದ್ರ ತಿಮ್ಮಣ್ಣ, ಮಂಗಸಂದ್ರ ವೆಂಕಟೇಶಪ್ಪ, ಮುದುವಾಡಿ ಚಂದ್ರಪ್ಪ, ಮೀಸೆ ವೆಂಕಟೇಶಪ್ಪ, ಐತಂಡಹಳ್ಳಿ ಉದಯ್, ವಡ್ಡಹಳ್ಳಿ ಮಂಜುನಾಥ ಹಾಜರಿದ್ದರು.

Leave a Reply

Your email address will not be published. Required fields are marked *