ನೈಸರ್ಗಿಕ ಕೃಷಿ ಪದ್ಧತಿ ಲಾಭದಾಯಕ

ಚಿಕ್ಕಮಗಳೂರು: ಯುವಜನರು ಹೊಸ ರೀತಿಯ ಆಲೋಚನೆ ಮಾಡಿ ನೈಸರ್ಗಿಕ ಪದ್ಧತಿ ಅನುಸರಿಸಿದರೆ ಕೃಷಿಯನ್ನು ನಷ್ಟದಿಂದ ಲಾಭದತ್ತ ಕೊಂಡೊಯ್ಯಬಹುದು ಎಂದು ಕಾಶಿ ಜಂಗಮವಾಡಿ ಮಠಾಧೀಶ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ತಾಲೂಕಿನ ಮೂಗುತಿಹಳ್ಳಿಯ ಪ್ರಗತಿಪರ ಕೃಷಿಕ ಚಂದ್ರಶೇಖರ್ ಅವರ ನೈಸರ್ಗಿಕ ಕೃಷಿ ಅಡಕೆ ತೋಟಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿ, ಪ್ರತಿಯೊಂದು ಕ್ಷೇತ್ರವನ್ನೂ ನಷ್ಟದಿಂದ ಲಾಭಕ್ಕೆ ಕೊಂಡೊಯ್ಯಲು ಅದರದೇ ಆದ ತಂತ್ರಜ್ಞಾನ, ಕೌಶಲಗಳಿರುತ್ತವೆ. ಹಾಗೆಯೇ ಸಾಕಷ್ಟು ಸಮಸ್ಯೆಗಳ ನಡುವೆಯೂ ಹೊಸ ವಿಧಾನಗಳಿಂದ ಕೃಷಿ ಮಾಡಿದರೆ ನಷ್ಟದಿಂದ ಪಾರಾಗಬಹುದು. ಇಂತಹ ಸಾಧನೆಯನ್ನು ಕೃಷಿಕ ಚಂದ್ರಶೇಖರ್ ನಾರಣಾಪುರ ಮಾಡಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರು ಆದಾಯಕ್ಕಿಂತ ಅಧಿಕವಾಗಿ ಖರ್ಚು ಮಾಡುತ್ತಿದ್ದಾರೆ. ಆದಾಯ ನೋಡಿಕೊಂಡು ಕೃಷಿಗೆ ವೆಚ್ಚ ಮಾಡಬೇಕು. ಯಾವುದೆ ಬೆಳೆ ಬೆಳೆಯುವ ಮುನ್ನ ಅದರ ಪೂರ್ವಾಪರ ಹಾಗೂ ಸಮಸ್ಯೆಗಳ ಮಾಹಿತಿ ಪಡೆಯಬೇಕು. ಆಗ ಮಾತ್ರ ನಷ್ಟವಿಲ್ಲದೆ ನಿಶ್ಚಿತವಾದ ಲಾಭ ಗಳಿಸಬಹುದು ಎಂದರು