ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ

ಮುಳಬಾಗಿಲು: ರಾಜ್ಯದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅವರದ್ದೇ ಪಕ್ಷದ ಶಾಸಕರು ಮತ್ತು ರಾಜ್ಯದ ಜನರು ಸಮ್ಮಿಶ್ರ ಸರ್ಕಾರದ ಆಡಳಿತದಿಂದ ರೋಸಿ ಹೋಗಿದ್ದು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕೆಂಬುದು ಜನರ ಇಚ್ಛೆಯಾಗಿದೆ ಎಂದು ಬಿಜೆಪಿ ಮುಖಂಡ, ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ತಾಲೂಕಿನ ಕುರುಡುಮಲೆ ಪುರಾಣ ಪ್ರಸಿದ್ಧ ವಿನಾಯಕ ದೇವಾಲಯ, ಚಿಂತಾಮಣಿಯ ಕೈವಾರ ಹಾಗೂ ಮುಳಬಾಗಿಲು ನಗರದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯಗಳಿಗೆ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಕ್ಷೇತರ, ಬಿಎಸ್​ಪಿ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದಾರೆ. ದೋಸ್ತಿ ಪಕ್ಷದ ಶಾಸಕರಿಗೇ ಈ ಸರ್ಕಾರ ಬೇಡವಾಗಿದೆ. ಸಿಎಂ ಕುಮಾರಸ್ವಾಮಿ ನೈತಿಕ ಹೊಣೆ ಇದ್ದರೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಸದನದಲ್ಲಿ ಬಹುಮತವಿಲ್ಲದಿದ್ದರೂ ವೃಥಾ ಕಾಲಹರಣ ಮಾಡುವ ಮೂಲಕ ಇಲ್ಲಸಲ್ಲದ ವಿಷಯ ಪ್ರಸ್ತಾಪನೆಗೆ ಸಮ್ಮಿಶ್ರ ಪಕ್ಷಗಳ ಶಾಸಕರಿಗೆ ಪ್ರೇರೇಪಣೆ ನೀಡಿ ಕಾಲ ದೂಡುತ್ತಿದ್ದಾರೆ. ಇದನ್ನು ಸಾಮಾನ್ಯ ಮತದಾರರು ಅರ್ಥ ಮಾಡಿಕೊಂಡಿದ್ದಾರೆ. ಸದನವನ್ನು ಜನ ವೀಕ್ಷಣೆ ಮಾಡುತ್ತಿದ್ದಾರೆ. ಕೋರಂ ಇಲ್ಲದಿದ್ದರೂ ಅಧಿಕಾರ ಲಾಲಸೆಯಿಂದ ಮುಂದುವರಿಯುವುದು ನಾಚಿಕೆಗೇಡಿನ ಸಂಗತಿ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ರಾಜ್ಯದ ಮೈತ್ರಿ ಸರ್ಕಾರದ ಶಾಸಕರೇ ದಿನದಿಂದ ದಿನಕ್ಕೆ ಬೇಸತ್ತು ಹೊರಬರುತ್ತಿದ್ದಾರೆ. ಇಂತಹ ವ್ಯವಸ್ಥೆಯಲ್ಲಿ ಸರ್ಕಾರ ನಡೆಸಲು ಸಾಧ್ಯವಾಗದಿದ್ದರೂ ಮೊಂಡು ವಾದ ಮಾಡುತ್ತ ಕೂತಿದ್ದಾರೆ. ಸೋಮವಾರ ಸಿಎಂ ವಿಶ್ವಾಸವನ್ನು ಮತಕ್ಕೆ ಹಾಕಬೇಕು. ಮುಂದಿನ ಹಂತದಲ್ಲಿ ನಮ್ಮ ಹೋರಾಟ ಇದ್ದೇ ಇದೆ ಎಂದರು.

ಮಾಜಿ ಸಚಿವ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಾನುವಾರವಾದ ಕಾರಣ ಮುಳಬಾಗಿಲಿನ ಪುರಾಣ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿದ್ದೇವೆ ಎಂದರು.

ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ತಾಲೂಕು ಅಧ್ಯಕ್ಷ ಕೆ.ವಿ.ನಾಗಾರ್ಜುನ, ಮಾಜಿ ಅಧ್ಯಕ್ಷ ಎಂ.ವೆಂಕಟೇಶ್, ಸಂಚಾಲಕ ಪಿ.ಎಂ.ಕೃಷ್ಣಮೂರ್ತಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಬಾಲಕೃಷ್ಣೇಗೌಡ, ತಾಲೂಕು ಅಧ್ಯಕ್ಷ ಸೋಮಶೇಖರ್, ಎಸ್ಸಿ ಮೋರ್ಚಾ ಅಧ್ಯಕ್ಷ ರಮೇಶ್, ಮುಖಂಡರಾದ ಕೆ.ಎಚ್.ನಾಗರಾಜ್, ಹೆಬ್ಬಣಿ ರವಿ, ಎಂ.ವಿ.ವೇಣುಗೋಪಾಲ್, ಕಾಪರ್ತಿ ಅಮರ್, ಎಂ.ಪಿ.ಅನಿಲ್​ಕುಮಾರ್, ಚಲಪತಿ, ಮಂಜುನಾಥ್, ರಮೇಶ್ ಮತ್ತಿತರರು ಇದ್ದರು.

ಬಿಜೆಪಿಯಲ್ಲಿ ನಾಯಕತ್ವದ ಗೊಂದಲವಿಲ್ಲ, ಈ ಜನವಿರೋಧಿ ಸಮ್ಮಿಶ್ರ ಸರ್ಕಾರ ಸೋಮವಾರ ಅಂತ್ಯವಾಗಲಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ. ಅವರ ನಾಯಕತ್ವವನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಯಾವುದೇ ಗೊಂದಲವಿಲ್ಲ. ಕುರುಡುಮಲೆ ಗಣಪತಿ ದೇವರ ಆಶೀರ್ವಾದ ನಾಡಿನ ಜನರ ಮೇಲೆ ಹಾಗೂ ಬಿಜೆಪಿ ಮೇಲೆ ಇದೆ.

| ಕೆ.ಎಸ್.ಈಶ್ವರಪ್ಪ, ಶಾಸಕ

ರಾಜ್ಯದಲ್ಲಿರುವುದು ದೋಸ್ತಿ ಸರ್ಕಾರವಲ್ಲ. ದುಷ್ಮನ್​ಗಳ ಸರ್ಕಾರ, ನಾವು ಎಂದೂ ಆಪರೇಷನ್ ಕಮಲ ಮಾಡಿಲ್ಲ, ಇದು ರಾಜಕೀಯ ಧ್ರುವೀಕರಣ, ಸಿದ್ದರಾಮಯ್ಯ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಶಾಸಕರಾಗಿ ಆಯ್ಕೆಯಾದಾಗ ಆಪರೇಷನ್ ಹಸ್ತ ಆಗಿರಲಿಲ್ಲವೇ? ದೇವೇಗೌಡರು ಸಿಎಂ, ಪಿಎಂ ಆಗಿದ್ದಾಗಲೂ ಆಗಿದೆ. ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗಲೂ ರಾಜಕೀಯ ಧ್ರ್ರುವೀಕರಣ ಆಗಿದೆ. ಇದನ್ನು ಮಾತ್ರ ಏಕೆ ಆಪರೇಷನ್ ಕಮಲ ಎನ್ನುತ್ತೀರಿ?

| ಸಿ.ಟಿ.ರವಿ, ಶಾಸಕ