ನೈತಿಕತೆ ಕೊರತೆಯಿಂದ ಹೆಚ್ಚುತ್ತಿದೆ ಅಪರಾಧ

ಚಿಕ್ಕಮಗಳೂರು: ನೈತಿಕತೆ ಕೊರತೆಯಿಂದ ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ ತಡೆಗಟ್ಟಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಕಾರ್ವಿುಕ ನ್ಯಾಯಾಲಯದ ನ್ಯಾಯಾಧೀಶ ಎ.ಎಸ್.ಸದಲಗೆ ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ಆಯೋಜಿಸಿದ್ದ ಬಾಲನ್ಯಾಯ ಪೋಕ್ಸೋ ಕಾಯ್ದೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಕಲ್ಯಾಣಕ್ಕೆ ಸರ್ಕಾರ ಹಲವಾರು ಕಾನೂನು ಜಾರಿಗೆ ತಂದಿದ್ದು ಅವುಗಳನ್ನು ಜಾರಿಗೊಳಿಸುವ ಮೂಲಕ ಕಾನೂನಿಗೆ ಗೌರವ ಕೊಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದಾಗ ತೊಂದರೆಗಳು ಉದ್ಭವಿಸುವುದಿಲ್ಲ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶ ಬಸವರಾಜ ಚೇಂಗಟಿ ಮಾತನಾಡಿ, ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷಿದಾರರು ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳಲು ಹಿಂಜರಿಯುತ್ತಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಮಾತನಾಡಿ, ತರಬೇತಿ ಕಾರ್ಯಾಗಾರ ಎಚ್ಚರಿಸುವ ಕೆಲಸ ಮಾಡುತ್ತಿದೆ. ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸ್ ಇಲಾಖೆ ಹೊಂದಾಣಿಕೆಯಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.

ಮಂಗಳೂರಿನ ಶಾಂತಿ ಸಂದೇಶ ಟ್ರಸ್ಟ್ ನಿರ್ದೇಶಕಿ ಸಿಸ್ಟರ್ ಡುಲ್ಸೀನ ಕ್ರಾಸ್ತ ಬಾಲನ್ಯಾಯ (ಮಕ್ಕಳ ಪಾಲನೆ-ಪೋಷಣೆ) ಕಾಯ್ದೆ-2015ರ ಕುರಿತು ಉಪನ್ಯಾಸ ನೀಡಿದರು.

ಎಸ್ಪಿ ಹರೀಶ್​ಪಾಂಡೆ, ಬಾಲನ್ಯಾಯ ಮಂಡಳಿ ಸದಸ್ಯ ಎಚ್.ಸಿ.ನಟರಾಜ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ಎನ್.ಶಿವಪ್ರಕಾಶ್ ಇದ್ದರು.</

Leave a Reply

Your email address will not be published. Required fields are marked *