ನೈತಿಕತೆ ಇಲ್ಲದ ಸರ್ಕಾರ ಶೀಘ್ರ ಪತನ

ಕುಣಿಗಲ್ : ನೈತಿಕತೆಯೇ ಇಲ್ಲದೆ ನಡೆಯುತ್ತಿರುವ ಸಮ್ಮಿಶ್ರ ಸರ್ಕಾರ ಶೀಘ್ರ ಪತನವಾಗಲಿದೆ ಎಂದು ರಾಜಾಜಿನಗರ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಭವಿಷ್ಯ ನುಡಿದರು.

ಕುಣಿಗಲ್ ಪುರಸಭೆ ಚುನಾವಣೆ ಹಿನ್ನೆಲ್ಲೆಯಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿದರು.

ದ್ವೇಷ ರಾಜಕಾರಣಕ್ಕೆ ಹಾಗೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಕರಾತ್ಮಕ ಧೋರಣೆಗೆ ಲೋಕಸಭೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಎಚ್ಚರಿಸಿದರು.

ಈ ಮೈತ್ರಿ ಸರ್ಕಾರ ಮುಂದುವರಿಯುವುದು ಅವರದೇ ಪಕ್ಷದಲ್ಲಿ ಯಾರಿಗೂ ಬೇಕಿಲ್ಲ. ಈ ಬಗ್ಗೆ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಹೊಸ ವ್ಯಾಖ್ಯಾನವನ್ನೇ ನೀಡಿದ್ದು, ಈಗಲಾದರೂ ಎರಡೂ ಪಕ್ಷದವರು ಜನಾದೇಶ ಇರುವ ಬಿಜೆಪಿಗೆ ಅಧಿಕಾರ ನಡೆಸಲು ಬಿಟ್ಟುಕೊಡಬೇಕು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಡಿ.ಕೃಷ್ಣಕುಮಾರ್, ಅಭ್ಯರ್ಥಿಗಳಾದ ವೆಂಕಟೇಶಯ್ಯ, ರವಿಕುಮಾರ್, ಕೆ.ಎಸ್.ಕೃಷ್ಣ, ಮುಖಂಡರಾದ ವಕೀಲ ನಾರಾಯಣ್​ಗೌಡ, ಸತ್ಯನಾರಾಯಣ್ ಒಡೆಯರ್, ಮಲ್ಲಿಕಾರ್ಜುನ್ ಇತರರಿದ್ದರು.

ಸ್ಮಾರ್ಟ್ ಸಿಟಿ ಗುರಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಬಹಳ ದೊಡ್ಡದು. ಬೆಂಗಳೂರಿನ ಸಮೀಪವೇ ಇರುವ ಕುಣಿಗಲ್​ಗೆ ಇಲ್ಲಿವರೆಗೂ ಅಭಿವೃದ್ಧಿ ನಕಾಶೆಯಲ್ಲಿ ಜಾಗ ಸಿಕ್ಕಿಲ್ಲ. ಈ ಬಾರಿ ಬಿಜೆಪಿ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಪುರಸಭೆ ಅಧಿಕಾರ ಹಿಡಿದು ಕುಣಿಗಲ್​ನ್ನು ಸ್ಮಾರ್ಟ್ ಸಿಟಿ ಮಾಡುವ ಗುರಿ ಹೊಂದಿದೆ. ಇದೇ ಕಾರಣದಿಂದ ಬಿಜೆಪಿ ಪುರಸಭೆ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಸುರೇಶ್​ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *