ನೇರ ಮಾರುಕಟ್ಟೆಯಿಂದ ಲಾಭ

ರಾಮನಗರ: ಎಲ್ಲಿ ನೋಡಿದರೂ ಮಾವಿನ ಗಿಡಗಳು. ರಾಶಿ ರಾಶಿಯಾಗಿ ನೇತಾಡುವ ಮಾವು. ಒಂದೇ ತೋಟದಲ್ಲಿ ಮೂರು – ನಾಲ್ಕು ತಳಿಗಳು. ಮಾವಿನ ಹಣ್ಣಿನ ಪರಿಮಳಕ್ಕೆ ಹಣ್ಣನ್ನು ಅಲ್ಲೇ ತಿನ್ನಬೇಕೆಂಬ ಆಸೆೆ…!

ಹೌದು, ರಾಮನಗರ ತಾಲೂಕಿನ ಬಿಳಗುಂಬ ನಿವಾಸಿ ರೈತ ವಾಸು ಅವರ ತೋಟಕ್ಕೆ ಭಾನುವಾರ ಭೇಟಿ ನೀಡಿದ್ದ ಬೆಂಗಳೂರಿನ 40ಕ್ಕೂ ಅಧಿಕ ಗ್ರಾಹಕರಿಂದ ಕೇಳಿ ಬಂದ ಮಾತುಗಳಿವು.

ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಕಲ್ಪಿಸಬೇಕೆಂಬ ಉದ್ದೇಶದಿಂದ ತೋಟಗಾರಿಕೆ ಇಲಾಖೆ ‘ಮ್ಯಾಂಗೊ ಪಿಕ್ಕಿಂಗ್ ಟೂರಿಸಂ’ ಕಾರ್ಯಕ್ರಮದಡಿ ಗ್ರಾಹಕರನ್ನು ನೇರವಾಗಿ ಬೆಳೆಗಾರರ ತೋಟಕ್ಕೆ ಕರೆದೊಯ್ದು ತಾಜಾ ಮಾವಿನ ಹಣ್ಣುಗಳನ್ನು ಕೊಡಿಸುವ ಕಾರ್ಯ ಮಾಡಿತು. ತೋಟ ನೋಡಿದ ಮಾವು ಪ್ರಿಯರು ಎಲ್ಲೆಡೆ ಸುತ್ತಾಡಿ, ತೋಟದ ಮಾಲೀಕ ವಾಸು ಅವರಿಂದ ವಿವಿಧ ತಳಿಯ ಮಾವುಗಳ ಪರಿಚಯ ಮಾಡಿಕೊಂಡರು.

ಗ್ರಾಹಕರಿಗೆ ಮಾವು ತಳಿಯ ಪರಿಚಯ: 8 ಎಕರೆಯಲ್ಲಿ ಬಾದಾಮಿ, ಮಲಗೋವಾ, ರಸಪುರಿ, ಸೆಂದೂರು, ಮಲ್ಲಿಕಾ, ರತ್ನಗಿರಿಯ ಆಲ್ಪಾನ್ಸ್, ದಸೇರಿ ಸಿಂಧೂ, ಕೇಸರಿ, ಕಾಲಪೋಡ್, ಇಮಾಮ್ಾಸ್, ಕೊಂಕಣ ರುಚಿ, ಅಮರಪಲ್ಲ ಸೇರಿ ಆಸ್ಟ್ರೇಲಿಯಾದ ಮಾಯಾ ಮತ್ತು ಸ್ವಿಜರ್​ಲ್ಯಾಂಡ್​ನ ಲಿಲ್ಲಿ ತಳಿಯ ಮಾವುಗಳನ್ನು ಪರಿಚಯಿಸಿದರು. 5 ವರ್ಷಗಳಿಂದ 100 ವರ್ಷಗಳ ಮಾವಿನ ಮರಗಳು ಸೇರಿ ಸುಮಾರು 500ಕ್ಕೂ ಹೆಚ್ಚು ಮಾವಿನ ಗಿಡಗಳಿವೆ. ತಲಾ 1 ಟನ್ ಹಣ್ಣುಗಳನ್ನು ನೀಡುವ 30 ಮರಗಳಿವೆ. ವರ್ಷಕ್ಕೆ 20 ಲಕ್ಷ ರೂ. ಆದಾಯ ನಿರೀಕ್ಷೆಯಿದ್ದು, ಈಗಾಗಲೇ 10 ಲಕ್ಷ ರೂ. ಸಂಪಾದಿಸಿದ್ದೇನೆ. ವಿವಿಧೆಡೆ ನಡೆಯುವ ಮಾವು ಮೇಳಗಳಿಗೆ 8 ಲಕ್ಷ ರೂ. ಮೌಲ್ಯದ ಮಾವು ಕಳುಹಿಸಿಕೊಟ್ಟಿದ್ದೇನೆ. ಇನ್ನು ತೋಟದಲ್ಲಿ 20ಕ್ಕೂ ಅಧಿಕ ಟನ್ ಮಾವಿನ ಬೆಳೆ ಇದೆ ಎಂದು ವಾಸು ತಿಳಿಸಿದರು.

ನೇರ ಮಾರುಕಟ್ಟೆ ವ್ಯವಸ್ಥೆಯಿಂದ ಅಧಿಕ ಲಾಭ: ಪ್ರತಿಯೊಬ್ಬ ರೈತನು ತಾನು ಬೆಳೆದ ಬೆಳೆಗೆ ತಕ್ಕ ಪ್ರತಿಫಲ ಪಡೆಯಲು ನೇರ ಮಾರುಕಟ್ಟೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಇದರಿಂದ ಅಧಿಕ ಲಾಭ ಪಡೆಯಲು ಸಾಧ್ಯ. ಉತ್ತಮ ಹಣ್ಣು ನೀಡುವ ಒಂದು ಮಾವಿನ ಮರವನ್ನು 3 ಲಕ್ಷ ರೂ.ಗೆ ಗುತ್ತಿಗೆ ನೀಡುತ್ತಿದ್ದೆ. ಅದೇ ಮಾವಿನ ಮರದ ಹಣ್ಣುಗಳನ್ನು ನೇರ ಮಾರುಕಟ್ಟೆ ವ್ಯವಸ್ಥೆಯಿಂದ 7 ಲಕ್ಷ ರೂ. ಸಂಪಾದಿಸಿದ್ದೇನೆ. ಬೆಳೆಯನ್ನು ಎಪಿಎಂಸಿಗೆ ನೀಡಿದರೆ ಶೇ.50 ಲಾಭ. ಅದನ್ನೆ ನೇರ ಮಾರುಕಟ್ಟೆ ಮೂಲಕ ಮಾರಾಟ ಮಾಡಿದರೆ ಶೇ.80 ಲಾಭ ದೊರೆಯುತ್ತದೆ ಎಂದರು. ವಾಸು ಅವರಿಂದ ಮಾವಿನ ಬಗ್ಗೆ ಸಮಗ್ರ ಮಾಹಿತಿ ಪಡೆದ ಗ್ರಾಹಕರು, ನೈಸರ್ಗಿಕವಾಗಿ ಬೆಳೆಯುವ ಮಾವಿನ ಹಣ್ಣುಗಳನ್ನು ಖರೀದಿಸಿ ಸಂಭ್ರಮಪಟ್ಟರು.

ಸಹಾಯಕ ತೋಟಗಾರಿಕೆ ಅಧಿಕಾರಿ ಸಿದ್ದಗಂಗಯ್ಯ ಮಾತನಾಡಿ, ಶ್ರಮಪಟ್ಟು ವ್ಯವಸ್ಥಿತವಾಗಿ ದುಡಿಯುವ ರೈತರಿಗೆ ತೋಟಗಾರಿಕೆ ಇಲಾಖೆ ಸದಾ ಸಹಕಾರ ನೀಡುತ್ತದೆ. ವಾಸು ಅವರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯ ದೊರಕಿಸಿಕೊಡುವ ಜತೆಗೆ ಬೇರೆ ಬೇರೆ ರಾಜ್ಯಗಳಲ್ಲಿ ಬೆಳೆಯುವ ಮಾವಿನ ಬೆಳೆಯ ಬಗ್ಗೆ ತರಬೇತಿ ಕೂಡ ನೀಡಿದ್ದೇವೆ. ಅದನ್ನೆಲ್ಲ ಸದ್ಬಳಕೆ ಮಾಡಿಕೊಂಡು ಉತ್ತಮ ಸಂಪಾದನೆ ಮಾಡಿಕೊಳ್ಳುವ ಜತೆಗೆ ಒಬ್ಬ ಪ್ರಗತಿಪರ ರೈತನಾಗಿ ವಾಸು ಹೊರಹೊಮ್ಮಿದ್ದಾರೆ ಎಂದು ಸಂತಸಪಟ್ಟರು.

 

ಸಿಟಿ ಜೀವನಕ್ಕೆ ಒಗ್ಗಿಕೊಂಡ ಬಳಿಕ ಹಳ್ಳಿಗಳಲ್ಲಿ ಬೆಳೆಯುವ ಸಾವಯವ ಹಣ್ಣುಗಳು ದೊರೆಯದಂತಾಗಿದೆ. ವಾಸು ಅವರ ತೋಟ ನೋಡಿ ಖುಷಿಯಾಯಿತು. ಆಗಾಗ್ಗೆ ಇಲ್ಲಿಗೆ ಬರಬೇಕು ಎನಿಸುತ್ತಿದೆ.

| ಗಿರೀಶ್, ಬೆಂಗಳೂರು

 

ಮಾವಿನ ತೋಟವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಹಣ್ಣು ತುಂಬಾ ಸ್ವಾದಿಷ್ಟವಾಗಿದೆ. ಬಹಳ ವರ್ಷಗಳ ಹಿಂದೆ ಅಜ್ಜಿ ಮನೆಗೆ ಹೋದಾಗ ಇಂಥ ತೋಟಗಳನ್ನು ನೋಡಿದ ನೆನಪು.

| ವೀರೇಂದ್ರಪ್ರಸಾದ, ಬೆಂಗಳೂರು

 

25 ವರ್ಷ ಕೃಷಿ ತೊರೆದು ರೈತಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೂ ಬದುಕು ಹಸನಾಗಿಲ್ಲ. 8 ವರ್ಷಗಳ ಹಿಂದೆ ಮತ್ತೆ ವ್ಯವಸ್ಥಿತವಾಗಿ ಕೃಷಿ ಆರಂಭಿಸಿ, ನೇರ ಮಾರುಕಟ್ಟೆ ಪದ್ಧತಿ ಅಳವಡಿಸಿಕೊಂಡು ಉತ್ತಮವಾಗಿ ಸಂಪಾದಿಸುತ್ತಿದ್ದೇನೆ. ರೈತರಲ್ಲಿ ತಾಳ್ಮೆ ಇರಬೇಕು. ನೂರು ಮಾವಿನ ಗಿಡಗಳನ್ನು ವ್ಯವಸ್ಥಿತವಾಗಿ ಬೆಳೆಸಿದರೆ ಉತ್ತಮ ಜೀವನ ನಿರ್ವಹಣೆ ಮಾಡಬಹುದು.

| ವಾಸು, ಮಾವು ಬೆಳೆಗಾರ

Leave a Reply

Your email address will not be published. Required fields are marked *