ಸಂಡೂರು: ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ದಾಖಲೆಗಳನ್ನು ಭೂಸುರಕ್ಷಾ ಯೋಜನೆಯಡಿ ಇನ್ನು ಕೆಲವೇ ದಿನಗಳಲ್ಲಿ ಡಿಜಿಟಲೀಕರಣ ಮಾಡಲಾಗುವುದು ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ದುಸ್ಥಿತಿಯಲ್ಲಿರುವ ಹಳೆಯ ಭೂ ದಾಖಲೆಗಳು ಇನ್ನು ಮುಂದೆ ಡಿಜಿಟಲೀಕರಣಗೊಂಡು ಶಾಶ್ವತವಾಗಿ ದೊರೆಯಲಿವೆ. ನೇರವಾಗಿ ಜನರೇ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆಗಳು, ಸರ್ವೇ ಮತ್ತು ನೋಂದಣಿ ಇಲಾಖೆ ಕಡತಗಳನ್ನು ಪಡೆಯಬಹುದು. ಡಿಜಿ ಸ್ಪರ್ಶದಿಂದ ನಿಮ್ಮ ಭೂ ಒಡೆತನ ನೇರವಾಗಿ ನಿಮ್ಮ ಕೈಗೆ ತಲುಪಿಸುವ ಯೋಜನೆ ಇದಾಗಿದೆ ಎಂದರು.
ಸಾಮಾಜಿಕ ಭದ್ರತಾ ಯೋಜನೆಯಡಿ 20 ಜನರಿಗೆ ಮಾಸಾಶನ ಸೌಲಭ್ಯ ಹಾಗೂ 20 ರೈತರಿಗೆ ಪೋತಿ ಪಟ್ಟಾವನ್ನು ಶಾಸಕಿ ವಿತರಿಸಿದರು. ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಎಸ್.ಷಡಕ್ಷರಯ್ಯ, ಬಿಇಒ ಡಾ.ಐ.ಆರ್.ಅಕ್ಕಿ, ಶಿರಸ್ತೇದಾರ್ ಕೆ.ಎಂ.ಶಿವಕುಮಾರ್, ಸರ್ವೇ ಮತ್ತು ನೋಂದಣಿ ಇಲಾಖೆ ಅಧಿಕಾರಿಗಳಿದ್ದರು.