ನೇತಾಜಿ ಪುತ್ಥಳಿ ಅನಾವರಣ ರಜತೋತ್ಸವ 23ಕ್ಕೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನೆಹರು ಗಂಜ್ ಬಳಿ ಪ್ರತಿಷ್ಠಾಪಿಸಿರುವ ನೇತಾಜಿ ಸುಭಾಶ್ಚಂದ್ರ ಬೋಸ್ ಪುತ್ಥಳಿ ಅನಾವರಣದ ರಜತೋತ್ಸವ, ನೇತಾಜಿ ಗೌರವ ಪ್ರಶಸ್ತಿ ಪ್ರದಾನ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ನಗರದಲ್ಲಿ ಜ.23ರಂದು ಹಮ್ಮಿಕೊಳ್ಳಲಾಗಿದೆ ಎಂದು ರಜತೋತ್ಸವ ಸಮಿತಿ ಅಧ್ಯಕ್ಷರಾದ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್ ನೆಲೋಗಿ, ಕಾರ್ಯದರ್ಶಿ ಡಾ.ಶ್ರೀಶೈಲ ಘೂಳಿ ಹಾಗೂ ಸಂಸ್ಥಾಪಕ ಅಧ್ಯಕ್ಷ ಸೋಮಶೇಖರ ಮಠಪತಿ ತಿಳಿಸಿದ್ದಾರೆ.

ರಜತೋತ್ಸವ ಸಮಿತಿ, ನೇತಾಜಿ ನಾಗರಿಕರ ಸಮಿತಿ ಮತ್ತು ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕ ಸಹಯೋಗದಡಿ ನೇತಾಜಿ 123ನೇ ಜಯಂತ್ಯುತ್ಸವ ನಿಮಿತ್ತ ಅಂದು ಬೆಳಗ್ಗೆ 8.30ಕ್ಕೆ ಪ್ರತಿಮೆ ಬಳಿಯಿಂದ ಬೃಹತ್ ಮೆರವಣಿಗೆ ಮೂಲಕ ಸಮಾರಂಭ ನಡೆಯಲಿರುವ ಸಾರ್ವಜನಿಕ ಉದ್ಯಾನದ ವೀರಶೈವ ಕಲ್ಯಾಣ ಮಂಟಪಕ್ಕೆ ಆಗಮಿಸಲಾಗುವುದು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

10.30ಕ್ಕೆ ವೀರಶೈವ ಕಲ್ಯಾಣ ಮಂಟಪದಲ್ಲಿ ನೇತಾಜಿ ಪುತ್ಥಳಿ ಅನಾವರಣದ ರಜತೋತ್ಸವ ಮತ್ತು ನೇತಾಜಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು. ಸ್ವಾತಂತ್ರ್ಯ ಸೇನಾನಿ ಮತ್ತು ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರಿಗೆ ನೇತಾಜಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸ್ವಾತಂತ್ರ್ಯ ಸೇನಾನಿಗಳ ಮತ್ತು ಸ್ವಾಮಿ ವಿವೇಕಾನಂದ ಚಿತ್ರಗಳಿರುವ ದೇಶಂ ಪ್ರಥಮಂ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಗುವುದು ಎಂದರು.

ಖ್ಯಾತ ಸಾಹಿತಿ ಲೀಲಾ ಮಲ್ಲಿಕಾರ್ಜುನ ಉಪನ್ಯಾಸ ನೀಡುವರು. ವೀರಶೈವ ಮಹಾಸಭಾದ ಹಿರಿಯ ಉಪಾಧ್ಯಕ್ಷ ದೇವರಾಯ ನಾಡೇಪಲ್ಲಿ, ಶಾಸಕರಾದ ವೆಂಕಟರಡ್ಡಿ ಮುದ್ನಾಳ್, ದತ್ತಾತ್ರೇಯ ಪಾಟೀಲ್ ರೇವೂರ, ಕನೀಜ್ ಫಾತಿಮಾ, ಎಂ.ವೈ.ಪಾಟೀಲ್, ಡಾ.ಅಜಯಸಿಂಗ್, ರಾಜಕುಮಾರ ಪಾಟೀಲ್ ತೆಲ್ಕೂರ, ಬಿ.ಜಿ.ಪಾಟೀಲ್, ಎಚ್ಕೆಇ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಮೇಯರ್ ಮಲ್ಲಮ್ಮ ವಳಕೇರಿ, ಮಾಜಿ ಮೇಯರ್ ಶರಣಕುಮಾರ ಮೋದಿ ಮುಖ್ಯ ಅತಿಥಿಗಳಾಗಿರುವರು ಎಂದು ತಿಳಿಸಿದರು.

ಪ್ರಮುಖರಾದ ಕಲ್ಯಾಣಪ್ಪ ಪಾಟೀಲ್ ಮಳಖೇಡ, ಆಶಾದೇವಿ ಖೂಬಾ, ರಾಜಶೇಖರ ಅಲ್ಲದ, ಶಿವರಾಯಗೌಡ ಪಾಟೀಲ್ ವರವಿ, ರೇವಣಸಿದ್ದಪ್ಪ, ವೀರುಪಾಕ್ಷಯ್ಯ ಎಸ್., ಲಕ್ಷ್ಮೀಕಾಂತ ಇತರರಿದ್ದರು.

ಕಲಬುರಗಿಯಲ್ಲಿ ನೇತಾಜಿ ನಾಗರಿಕ ಸಮಿತಿಗೆ ಸೇರಿದ ನೇತಾಜಿ ವ್ಯಾಯಾಮ ಶಾಲೆ ಹಾಗೂ ನಿವೇಶನದಲ್ಲಿ ನೇತಾಜಿ ಸಮುದಾಯ ಭವನ ನಿರ್ಮಿಸುವ ಜತೆಗೆ ಮುಂದಿನ ದಿನಗಳಲ್ಲಿ ಹಾಲಿ ಇರುವ ಪ್ರತಿಮೆ ಬದಲಾಯಿಸಿ ನೇತಾಜಿ ಪಂಚಲೋಹದ ಪುತ್ಥಳಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.
| ಎಸ್.ವಿ.ಮಠಪತಿ ನೇತಾಜಿ ನಾಗರಿಕ ಸಮಿತಿ ಸಂಸ್ಥಾಪಕ ಅಧ್ಯಕ್ಷ

ಕಾರ್ಯಕ್ರಮ ನಿಮಿತ್ತ ನೇತಾಜಿ ಸುಭಾಶ್ಚಂದ್ರ ಬೋಸ್-ಭಾರತ ಸ್ವಾತಂತ್ರ್ಯ ಸಂಗ್ರಾಮ ಕುರಿತು ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಥಮ ಬಹುಮಾನ 5 ಸಾವಿರ, ದ್ವಿತೀಯ 3 ಸಾವಿರ ಮತ್ತು ತೃತೀಯ ಬಹುಮಾನ 2 ಸಾವಿರ ರೂ. ನೀಡಲಾಗುವುದು. ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗುವುದು.
| ಡಾ.ಶ್ರೀಶೈಲ ಘೂಳಿ ನೇತಾಜಿ ರಜತೋತ್ಸವ ಸಮಿತಿ ಕಾರ್ಯದರ್ಶಿ