ಗೋಣಿಕೊಪ್ಪಲು: ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಮೈದಾನದಲ್ಲಿ 13 ವರ್ಷಗಳ ಬಳಿಕ ಪ್ರತಿಷ್ಠಿತ ನೆಸ್ ಕೆಫೆ ಕೊಡಗು ಹಾಕಿ ಕಪ್‌ಗೆ ಶುಕ್ರವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.
ದೇಶದ ಪ್ರಮುಖ ಕಂಪನಿಗಳಲ್ಲೊಂದಾದ ಪ್ರತಿಷ್ಠಿತ ನೆಸ್‌ಕೆಫೆ ಸಂಸ್ಥೆಯು ಹಾಕಿ ಕಪ್‌ನ ಪ್ರಾಯೋಜಕತ್ವವನ್ನು ಒದಗಿಸಿದ್ದು ಹಾಕಿ ಕೂರ್ಗ್ ಸಂಸ್ಥೆಯು ಇದರ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ.
ಈ ಹಿಂದೆ ಇದ್ದಂತಹ ನೆಸ್ಲೆ ಕಪ್ ಇದೀಗ ನೆಸ್‌ಕೆಫೆ ಕಪ್ ಆಗಿ ಬದಲಾವಣೆಯ ಹೆಸರನ್ನು ಪಡೆದಿದ್ದು ಹಾಕಿ ಕೂರ್ಗ್ ಸಂಸ್ಥೆ ಈ ಪಂದ್ಯಾವಳಿಯನ್ನು ಪುನರಾರಂಭಿಸಲು ಮಾಡಿದ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಸಫಲವಾಗಿದೆ. ಈ ಬಾರಿ ಲೀಗ್‌ನಲ್ಲಿ ಟಾಪ್ 8 ಸ್ಥಾನ ಪಡೆದ ತಂಡಗಳಾದ ಎಂ.ಆರ್.ಎಫ್. ಮೂರ್ನಾಡ್, ಬ್ಲೇಜ್ ಮೂರ್ನಾಡ್, ಮಹದೇವ ಸ್ಪೋರ್ಟ್ಸ್ ಕ್ಲಬ್ ಬಲಂಬೇರಿ, ಕೋಣನಕಟ್ಟೆ ಇಲವೆನ್, ಯುಎಸ್‌ಸಿ ಬೇರಳಿನಾಡ್, ಈವೈಸಿ ಬೇಗೂರ್, ಮಲ್ಮ ಕಕ್ಕಬ್ಬೆ, ಬೊಟ್ಯತ್‌ನಾಡ್ ಕುಂದ ತಂಡಗಳು ಈ ಬಾರಿಯ ನೆಸ್‌ಕೆಫೆ ಕೊಡಗು ಕಪ್‌ನಲ್ಲಿ ಸೆಣಸಾಟ ಆರಂಭಿಸಿದವು.
ಮುಂಜಾನೆ ಮೈದಾನಕ್ಕಿಳಿದ ತಂಡಗಳು ತೀವ್ರ ಪೈಪೋಟಿ ನಡೆಸಿ ಹಾಕಿಪ್ರಿಯರನ್ನು ಸಂತೋಷಗೊಳಿಸಿದರು. 8 ತಂಡಗಳಲ್ಲಿಯೂ ತಲಾ 6 ಅತಿಥಿ ಆಟಗಾರರನ್ನು ಕರೆಸಿಕೊಳ್ಳಲು ಅವಕಾಶವಿರುವುದನ್ನು ಈ ತಂಡಗಳು ಸದ್ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಆಟಗಾರರು ಮೈದಾನಕ್ಕಿಳಿದು ಉತ್ತಮ ಪ್ರದರ್ಶನ ನೀಡಿ ಕ್ರೀಡಾಭಿಮಾನಿಗಳ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾದರು.
ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಂಡ ಲವಕುಮಾರ್ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಮೇಜರ್ ಪಳಂಗಂಡ ಕುನಾಲ್ ಕುಟ್ಟಪ್ಪ ಮಾತನಾಡಿ, ಕೊಡಗಿನಲ್ಲಿ ಹಾಕಿ ಕ್ರೀಡೆಗೆ ವಿಶೇಷವಾದ ಸ್ಥಾನಮಾನವಿದೆ. ಇದರ ಗೌರವ ಮತ್ತಷ್ಟು ಹೆಚ್ಚಾಗಲು ಹಾಕಿ ಕೂರ್ಗ್ ಸಂಸ್ಥೆಯು ವಾರ್ಷಿಕವಾಗಿ ಹಲವು ಪಂದ್ಯಾವಳಿಗಳನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಸುವ ಮೂಲಕ ಹಾಕಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಯುವಕರಿಗೆ ಉತ್ತೇಜಿಸುತ್ತಿದೆ. ಪ್ರತಿ ವರ್ಷವೂ ಹಾಕಿ ಪಂದ್ಯಾವಳಿಗಳು ಹೆಚ್ಚು ಹೆಚ್ಚಾಗಿ ನಡೆಯುವಂತಾಗಲಿ, ಈ ರಾಷ್ಟ್ರಕ್ಕೆ ಉತ್ತಮ ಕ್ರೀಡಾಪಟುಗಳನ್ನು ಒದಗಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಂಡ ಲವಕುಮಾರ್ ಮಾತನಾಡಿ, ಹಾಕಿ ಕೂರ್ಗ್ ಅಸ್ತಿತ್ವಕ್ಕೆ ಬಂದ ನಂತರ ಆಡಳಿತ ಮಂಡಳಿಯು ನೆಸ್‌ಕೆಫೆ ಕಂಪನಿಯನ್ನು ಭೇಟಿ ಮಾಡುವ ಮೂಲಕ ಹಾಕಿ ಕ್ರೀಡೆಗೆ ಉತ್ತೇಜನ ನೀಡಲು ಮನವಿ ಮಾಡಲಾಗಿತ್ತು. ಈ ಮನವಿಯಂತೆ ಪ್ರಸ್ತುತ ಸಾಲಿನ ಕೊಡಗು ಕಪ್‌ಗೆ 15 ಲಕ್ಷ ರೂ. ಅನುದಾನವನ್ನು ನೆಸ್ ಕೆಫೆ ನೀಡಿದೆ. ಲಭ್ಯವಿರುವ ಹಣದಲ್ಲಿ ಸುಸಜ್ಜಿತ ಮೈದಾನ, ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಶಾಮಿಯಾನದ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಾಕಿ ಕ್ರೀಡೆಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಹಾಕಿ ಕೂರ್ಗ್ ಸಂಸ್ಥೆ ಶ್ರಮಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಕೆ.ಪಿ.ಬೋಪಣ್ಣ, ಹಾಕಿ ಕೂರ್ಗ್ ಉಪಾಧ್ಯಕ್ಷ ಮಾಪಂಗಡ ಯಮುನಾ ಚಂಗಪ್ಪ, ಕಾರ್ಯದರ್ಶಿ ಅಮ್ಮಂಡಿರ ಚೇತನ್, ಖಜಾಂಚಿ ಗುಮ್ಮಟ್ಟಿರ ಮುತ್ತಣ್ಣ, ಕಾಫಿ ಬೆಳೆಗಾರರಾದ ಕರ್ತಮಾಡ ಪವನ್ ಸುಬ್ಬಯ್ಯ, ನೆಲ್ಲಮಕ್ಕಡ ಮೋಹನ್, ಕುಳುವಂಡ ಸುಬ್ಬಯ್ಯ, ಚೆಪ್ಪುಡೀರ ಶುಭಾಶ್ ಮುತ್ತಣ್ಣ, ನೆಸ್ಲೆ ಇಂಡಿಯಾದ ಅಮಿತ್, ಕೌಶಿಕ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಮಲ್ಲಮಾಡ ಸಂತೋಷ್, ಮಿನ್ನಂಡ ಜೋಯಪ್ಪ, ತಾಂತ್ರಿಕ ಉಸ್ತುವಾರಿ ಬುಟ್ಟಿಯಂಡ ಚಂಗಪ್ಪ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.
