ನೆರೆ ಹಾನಿ 662 ಕೋಟಿ ರೂ.ಗಳಿಗೆ ಏರಿಕೆ

ಕಾರವಾರ ಜಿಲ್ಲೆಯಲ್ಲಿ ನೆರೆಯಿಂದ ಉಂಟಾದ ಹಾನಿಯ ಸಮೀಕ್ಷೆ ಭಾಗಶಃ ಅಂತಿಮಗೊಂಡಿದ್ದು, ಹಾನಿಯ ಮೊತ್ತ 750 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ.

10 ದಿನಗಳ ಮೊದಲು 418 ಕೋಟಿ ರೂ. ಇದ್ದ ಒಟ್ಟಾರೆ ಹಾನಿಯ ಮೊತ್ತ ಈಗ ವಿವರವಾದ ಸಮೀಕ್ಷೆಯ ನಂತರ 662 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕೃಷಿ ಹಾಗೂ ತೋಟಗಾರಿಕೆ ಹಾನಿಯ ಸಮೀಕ್ಷೆ ಕಾರ್ಯ ಮಾತ್ರ ಇದುವರೆಗೂ ಮುಕ್ತಾಯವಾಗಿಲ್ಲ. ಅದರ ನಂತರ ಹಾನಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಹಾನಿಗೊಳಗಾದ ಅಂಗನವಾಡಿ ಹಾಗೂ ಶಾಲೆಗಳ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ಜಿಲ್ಲೆಯ 517 ಶಾಲಾ ಕಟ್ಟಡಗಳಿಗೆ 12.59 ಕೋಟಿ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. 306 ಅಂಗನವಾಡಿ ಕಟ್ಟಡಗಳಿಗೆ 7.37 ಕೋಟಿ ರೂ. ಹಾನಿಯಾಗಿದೆ. ಬಂದರು ಇಲಾಖೆಯ ಹಾನಿಯ ವಿವರವೂ ಹೆಚ್ಚಳವಾಗಿದೆ ಎನ್ನುತ್ತವೆ ಜಿಲ್ಲಾಡಳಿತದ ದಾಖಲೆಗಳು. ಸರ್ಕಾರಿ ಆಸ್ತಿಗಳು, ಮನೆ, ಕೊಟ್ಟಿಗೆ, ಜಾನುವಾರು ಕಳೆದುಕೊಂಡವರ ವಿವರವಾದ ಸಮೀಕ್ಷೆ ಮುಗಿಸಲಾಗಿದೆ. ನೆರೆಯ ತಾತ್ಕಾಲಿಕ ಪರಿಹಾರ ವಿತರಿಸಲಾಗಿದೆ. ಆಹಾರದ ಕಿಟ್​ಗಳನ್ನು ವಿತರಿಸಲಾಗಿದೆ. ಮನೆಗಳ ಹಾನಿಯ ಪರಿಹಾರ ವಿತರಣೆ ಇನ್ನೂ ಬಾಕಿ ಇದೆ.

ಅರಣ್ಯ ಜಮೀನಿನ ಗೊಂದಲ: ಅರಣ್ಯ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಮನೆ ಕಳೆದುಕೊಂಡವರಿಗೆ ಯಾವ ರೀತಿ ಪರಿಹಾರ ನೀಡಬೇಕು ಎಂಬ ಬಗ್ಗೆ ಸರ್ಕಾರ ಇದುವರೆಗೂ ಸ್ಪಷ್ಟ ನಿರ್ದೇಶನ ನೀಡಿಲ್ಲ. ಇದರಿಂದ ಆ ಕುರಿತು ಪರಿಹಾರ ಕಾರ್ಯಕ್ಕೆ ಇನ್ನೂ ಚಾಲನೆ ದೊರೆತಿಲ್ಲ. ಕೆಲವು ಸಂತ್ರಸ್ತರಿಗೆ ಬೇರೆಡೆ ಮನೆಗಳ ನಿರ್ಮಾಣ ಮಾಡಿಕೊಡುವ ಪ್ರಸ್ತಾಪವೂ ಇದೆ.

6,858 ಕುಟುಂಬಗಳಿಗೆ ಪರಿಹಾರ ನೆರೆ ಇಳಿದ ನಂತರ ಉಡೋಣ ಎಂದರೆ ಬಟ್ಟೆಯಿಲ್ಲ. ಊಟ ಮಾಡೋಣ ಎಂದರೆ ಸಿಲಿಂಡರ್ ತೇಲಿ ಹೋಗಿದೆ. ಒಲೆಯಲ್ಲಿ ನೀರು ಹೋಗಿ ಹಾಳಾಗಿದೆ. ಪಾತ್ರೆಯೆಲ್ಲ ರಾಡಿಯಾಗಿದೆ. ಹೀಗೆ ದಯನೀಯ ಪರಿಸ್ಥಿತಿ ಎದುರಿಸಿದ ಹಲವು ಕುಟುಂಬಗಳಿದ್ದವು. ಅದನ್ನು ಗಮನಿಸಿದ ಸರ್ಕಾರ ಪಾತ್ರೆ, ಬಟ್ಟೆ ಹಾನಿಯಾಗಿದ್ದರೆ ಅದನ್ನು ಕೊಳ್ಳುವ ಸಲುವಾಗಿ ಕುಟುಂಬಕ್ಕೆ ತಲಾ 10 ಸಾವಿರ ರೂ. ನೀಡುವುದಾಗಿ ಘೊಷಿಸಿತ್ತು. ಅದರಂತೆ ಅಂಕೋಲಾದ 1545, ಭಟ್ಕಳದ 43, ಹಳಿಯಾಳದ 52, ಹೊನ್ನಾವರದ 1147, ಕಾರವಾರದ 1540, ಕುಮಟಾದ 2330, ಮುಂಡಗೋಡಿನ 81, ಸಿದ್ದಾಪುರದ 58, ಜೊಯಿಡಾದ 1 ಹಾಗೂ ಯಲ್ಲಾಪುರದ 61 ಕುಟುಂಬಗಳ ಮುಖ್ಯಸ್ಥರ ಖಾತೆಗೆ ಹಣ ಜಮಾ ಮಾಡಲಾಗಿದೆ. ಕಾರವಾರ ಹಾಗೂ ಅಂಕೋಲಾದಲ್ಲಿ ಕೆಲವು ಹೆಚ್ಚುವರಿ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಗಿದ್ದು, ಒಟ್ಟಾರೆ 7758 ಆಹಾರದ ಕಿಟ್​ಗಳನ್ನು ಇದುವರೆಗೆ ವಿತರಿಸಲಾಗಿದೆ.

2249 ಮನೆಗಳಿಗೆ ಹಾನಿ! ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮರ ಬಿದ್ದು ಹಲವು ಮನೆಗಳು ಮುರಿದಿದ್ದವು. ಕಾರವಾರ ಅಂಕೋಲಾದಲ್ಲಿ ನಿರಂತರವಾಗಿ ಐದು ದಿನ ನೀರು ನಿಂತಿದ್ದರಿಂದ ಮಣ್ಣಿನ ಗೋಡೆಯಿರುವ ಎಲ್ಲ ಮನೆಗಳೂ ಕುಸಿದು ಬಿದ್ದಿವೆ. ಮುಂಡಗೋಡು, ಹಳಿಯಾಳದಲ್ಲೂ ಮನೆಗಳಿಗೆ ಹಾನಿಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 531 ಕುಟುಂಬಗಳು ಅಕ್ಷರಶಃ ನಿರಾಶ್ರಿತರಾಗಿದ್ದಾರೆ. ಬಾಡಿಗೆ ಮನೆ, ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಾರವಾರದ 99, ಅಂಕೊಲಾ- 74, ಹಳಿಯಾಳ- 26, ಯಲ್ಲಾಪುರ- 21, ಹಳಿಯಾಳ- 26, ಮುಂಡಗೋಡ- 10, ಸಿದ್ದಾಪುರ- 11, ಶಿರಸಿ- 5, ಭಟ್ಕಳ- 2 ಮನೆಗಳು ಸೇರಿ ಒಟ್ಟಾರೆ 248 ಮನೆಗಳು ಸಂಪೂರ್ಣವಾಗಿ ಬಿದ್ದು ಹೋಗಿದ್ದು, 9.15 ಕೋಟಿ ರೂ. ಹಾನಿಯಾಗಿದೆ. ಅಂಕೋಲಾದ 127, ಕಾರವಾರ- 33, ಭಟ್ಕಳ- 49, ಮುಂಡಗೋಡ- 37, ಜೊಯಿಡಾ- 19, ಹಳಿಯಾಳ- 12, ಹೊನ್ನಾವರ ಹಾಗೂ ಕುಮಟಾದ ತಲಾ 3 ಮನೆಗಳು ಸೇರಿ 283 ಮನೆಗಳಿಗೆ ತೀವ್ರವಾಗಿ ಹಾನಿಯಾಗಿದ್ದು, ಕುಟುಂಬಗಳು ಮನೆಯಲ್ಲಿ ವಾಸ ಮಾಡುವ ಪರಿಸ್ಥಿತಿ ಇಲ್ಲ. ಒಟ್ಟಾರೆ 4.71 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಂಕೋಲಾದ 205, ಭಟ್ಕಳ- 29, ಹಳಿಯಾಳ- 460, ಹೊನ್ನಾವರ- 112, ಕಾರವಾರ- 166, ಕುಮಟಾ- 79, ಮುಂಡಗೋಡ- 288, ಸಿದ್ದಾಪುರ- 61, ಶಿರಸಿ- 86, ಜೊಯಿಡಾ- 111, ಯಲ್ಲಾಪುರ- 121 ಸೇರಿ 1718 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 5.49 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 4 ಗುಡಿಸಲುಗಳು, 41 ಕೊಟ್ಟಿಗೆಗಳಿಗೆ ಹಾನಿಯಾಗಿದೆ.

128 ಜಾನುವಾರು ಸಾವು ಜಾನುವಾರುಗಳ ಸಾವಿನ ಸಂಖ್ಯೆಯೂ ಹೆಚ್ಚಾದ ಕುರಿತು ವರದಿಯಾಗಿದೆ. ಅಂಕೋಲಾದಲ್ಲಿ 12, ಕಾರವಾರದಲ್ಲಿ 38, ಜೊಯಿಡಾದಲ್ಲಿ 37, ಯಲ್ಲಾಪುರದಲ್ಲಿ 23, ಕುಮಟಾ, ಸಿದ್ದಾಪುರ, ಶಿರಸಿಯಲ್ಲಿ ತಲಾ 2, ಮುಂಡಗೋಡಿನಲ್ಲಿ 4 ಜಾನುವಾರುಗಳು ಮೃತಪಟ್ಟಿವೆ. ಇದುವರೆಗೆ 16.18 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಇನ್ನೂ 13.63 ಲಕ್ಷ ರೂ. ಪರಿಹಾರ ವಿತರಣೆ ಬಾಕಿ ಇದೆ.

ಹಾನಿಯ ಲೆಕ್ಕ: ಸೇತುವೆಗಳು 271, ಕುಡಿಯುವ ನೀರಿನ ಯೋಜನೆಗಳು 130, ಸರ್ಕಾರಿ ಕಟ್ಟಡಗಳು 887, ಹಾಳಾದ ರಸ್ತೆ 1691 ಕಿ.ಮೀ., ಬಾಂದಾರಗಳು 201, ಏತ ನೀರಾವರಿ ಯೋಜನೆ 32

ಕೃಷಿ, ತೋಟಗಾರಿಕೆ ಹೊರತುಪಡಿಸಿ ಉಳಿದ ಇಲಾಖೆಗಳ ಸವಿವರ ಸಮೀಕ್ಷೆ ಮುಕ್ತಾಯವಾಗಿದೆ. ಈ ಹಾನಿಯ ವರದಿ ಆಧರಿಸಿ ಸರ್ಕಾರದಿಂದ ಅನುದಾನಕ್ಕೆ ಪ್ರಸ್ತಾವನೆ ಕಳಿಸಲಾಗುವುದು. ತುರ್ತು ಕಾಮಗಾರಿಗಳನ್ನು ಮೊದಲು ಕೈಗೊಳ್ಳಲಾಗುವುದು. | ನಾಗರಾಜ ಸಿಂಗ್ರೇರ್ ಅಪರ ಜಿಲ್ಲಾಧಿಕಾರಿ ಉತ್ತರ ಕನ್ನಡ

Leave a Reply

Your email address will not be published. Required fields are marked *