ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವುದು ಮಾನವನ ಧರ್ಮ

ವಿಜಯಪುರ: ರಾಜ್ಯದಲ್ಲಿ ಹಿಂದೆಂದು ಕಾಣದಂತಹ ಪ್ರಕೃತಿ ವಿಕೋಪ ಸಂಭವಿಸಿದ್ದು, ಸಂಕಷ್ಟದಲ್ಲಿರುವ ಪ್ರವಾಹ ಪೀಡಿತರಿಗೆ ನೇರವಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ಪಟ್ಟಣದ ಗಾಂಧಿ ಚೌಕನಲ್ಲಿ ಪಟ್ಟಣ ಬಿಜೆಪಿ ಮತ್ತು ಇತರೆ ಸಂಘಟನೆಗಳ ಆಶ್ರಯದಲ್ಲಿ ಸಂಗ್ರಹಿಸಿದ್ದ ದಿನಸಿ ಹಾಗೂ ದಿನಬಳಕೆ ವಸ್ತುಗಳ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಮಳೆ ಮತ್ತು ನದಿನೀರಿನ ರೌದ್ರ ನರ್ತನಕ್ಕೆ ಜನರ ಬದುಕು ಅತಂತ್ರವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಮೊದಲ ಹಂತದಲ್ಲಿ ಕನಿಷ್ಠ 10 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದರು.

ಹೊಸಕೋಟೆ ತಾಲೂಕಿನಿಂದ ಕಳೆದ ವಾರವಷ್ಟೇ ಬೆಳಗಾವಿ ಭಾಗಕ್ಕೆ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳುಹಿಸಲಾಗಿದೆ. ವಿಜಯಪುರದಿಂದ 10 ಲಕ್ಷ ರೂ. ಮತ್ತು ದೇವನಹಳ್ಳಿಯಿಂದ 4 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಉತ್ತರಕನ್ನಡ, ಶಿರಸಿ ಭಾಗಕ್ಕೆ ಕಳುಹಿಸಲಾಗುತ್ತಿದೆ ಎಂದರು.

ಟೌನ್ ಬಿಜೆಪಿ ಅಧ್ಯಕ್ಷ ಚ.ವಿಜಯಬಾಬು ಮಾತನಾಡಿ, ಪಟ್ಟಣದ ಜನರು ನೆರೆಸಂತ್ರಸ್ಥರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಅಗತ್ಯ ಔಷಧಿಗಳು ಸೇರಿದಂತೆ ನಿತ್ಯಬಳಕೆಯ ವಸ್ತುಗಳನ್ನು ಪರಿಹಾರಕ್ಕಾಗಿ ನೀಡಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಹಳ್ಳಿ ಬಿ.ರಾಜಣ್ಣ, ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎನ್.ರಾಜಗೋಪಾಲ್, ಪುರಸಭೆ ಮಾಜಿ ಸದಸ್ಯ ಬಲಮುರಿ ಜಿ.ಶ್ರೀನಿವಾಸ್‌ಮೂರ್ತಿ, ತಾಲೂಕು ಬಿಜೆಪಿ ಉಪಾಧ್ಯಕ್ಷ ಎನ್.ಕನಕರಾಜು, ಟೌನ್ ಬಿಜೆಪಿ ಕಾರ್ಯದರ್ಶಿ ರವಿಕುಮಾರ್, ಪ್ರಭುವೆಂಕಟೇಶ್, ರಾಘವ, ಡಿ.ಎಂ.ಮುನೀಂದ್ರ, ಆರ್.ನಟರಾಜು, ಚನ್ನರಾಯಪಟ್ಟಣ ಅಶ್ವತ್ಥಪ್ಪ, ಮತ್ತಿತರರು ಇದ್ದರು.

Leave a Reply

Your email address will not be published. Required fields are marked *