ನೆರೆ ಸಂತ್ರಸ್ತರಿಗೆ ಶೃಂಗೇರಿ ಮಠದಿಂದ ನೆರವು

ಶೃಂಗೇರಿ: ಅತಿವೃಷ್ಟಿಯಿಂದ ವಸತಿ ಕಳೆದುಕೊಂಡ ಸಂತ್ರಸ್ತರಿಗೆ ಶೃಂಗೇರಿ ಶ್ರೀಮಠದಿಂದ ಮನೆ ಹೊದಿಕೆಗಳು, ಸಿಮೆಂಟ್ ಮತ್ತು ಶೌಚಗೃಹದ ಪರಿಕರ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಶ್ರೀಮಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ತಿಳಿಸಿದ್ದಾರೆ. ಅತಿವೃಷ್ಟಿಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನ ಮನೆಗಳನ್ನು ಕಳೆದುಕೊಂಡಿದ್ದಾರೆ. ಶೃಂಗೇರಿಯಲ್ಲೂ ತುಂಗಾನದಿ ಮೂರು ದಿನ ಉಕ್ಕಿ ಹರಿದು ಶ್ರೀಮಠದ ನರಸಿಂಹವನ, ಭೋಜನ ಶಾಲೆಗಳು ಜಲಾವೃತವಾಗಿ ಶ್ರೀಮಠಕ್ಕೂ ಹಲವು ರೀತಿಯ ನಷ್ಟವಾಗಿದೆ. ಈಗ ಪ್ರವಾಹ ಇಳಿಮುಖವಾಗಿ ಶ್ರೀಮಠದ ಭೋಜನಶಾಲೆ ಯಥಾಸ್ಥಿತಿಗೆ ಮರಳಿದೆ. ಭಕ್ತರು ಮತ್ತು ಶಾಲೆಗಳಿಗೆ ಮಧ್ಯಾಹ್ನದ ಊಟ ಎಂದಿನಂತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಶ್ರೀ ಜಗದ್ಗುರು ಮಹಾಸ್ವಾಮೀಜಿ ಅವರ ಆದೇಶದಂತೆ ನೆರೆಹಾವಳಿ ಪ್ರದೇಶದಲ್ಲಿರುವ ಶ್ರೀಮಠದ ಶಾಖೆಗಳಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ 25 ಲಕ್ಷ ರೂ.ಗೂ ಅಧಿಕ ಹಣ ವಿನಿಯೋಗಿಸಲಾಗಿದೆ. ಮುಂದೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ಹೊದಿಕೆಗಳು, ಸಿಮೆಂಟ್ ಮತ್ತು ಶೌಚಗೃಹದ ಪರಿಕರಗಳನ್ನು ವಿತರಿಸುವ ಯೋಜನೆ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *