ನೆರೆ ಭೀತಿಯಲ್ಲಿ ಪಾದೆಬೆಟ್ಟಿನ ಆರು ಕುಟುಂಬ

ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಕಾಮಿನಿ ನದಿಗೆ ಸೇರುವ ಬೃಹತ್ ತೋಡುಗಳ ಮಧ್ಯದ ಜಾಗಗಳಲ್ಲಿ ಮೆನ ಕಟ್ಟಿ ವಾಸ್ತವ್ಯವಿರುವ ಪಾದೆಬೆಟ್ಟಿನ ಹೊಗೆತೋಟದ ಕುಟುಂಬಗಳು ಮಳೆಗಾಲದಲ್ಲಿ ನೆರೆ ಭೀತಿಯಿಂದಲೇ ಜೀವನ ಸಾಗಿಸುವಂತಾಗಿದೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಈ ಬಗ್ಗೆ ಓದುಗರೊಬ್ಬರು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಹೇಳಿದ್ದು ಪಡುಬಿದ್ರಿ ವರದಿಗಾರ ಹೇಮನಾಥ ಪಡುಬಿದ್ರಿ ಈ ಬಗ್ಗೆ ವರದಿ ಮಾಡಿದ್ದಾರೆ.

ಪಡುಬಿದ್ರಿ: ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಕಾಮಿನಿ ನದಿ ಸೇರುವ ಬೃಹತ್ ತೋಡುಗಳ ಮಧ್ಯದ ಪ್ರದೇಶದಲ್ಲಿ ಮನೆ ಕಟ್ಟಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಪಡುಬಿದ್ರಿ ಪಾದೆಬೆಟ್ಟಿನ ಹೊಗೆತೋಟದ ಆರು ಕುಟುಂಬಗಳು ಮಳೆಗಾಲದಲ್ಲಿ ನೆರೆ ಭೀತಿಯಿಂದ ಜೀವನ ಸಾಗಿಸಬೇಕಾಗಿದೆ.

ಇಲ್ಲಿನ ಮೀನಾಕ್ಷಿ, ವಾದಿರಾಜ್, ವನಜಾ, ಲೀಲಾ ಪೂಜಾರಿ, ಸುಜಾತಾ ಹಾಗೂ ಯೋಗೀಶ್ ಎಂಬುವರ ಕುಟುಂಬಗಳು ಮಳೆ ಬಂದು ನೆರೆ ಪರಿಸ್ಥಿತಿ ಉಂಟಾದರೆ ಮನೆ ಬಿಟ್ಟು ಸ್ಥಳಾಂತರವಾಗುವ ಸನ್ನಿವೇಶ ಏರ್ಪಡುತ್ತದೆ. ಕಳೆದ ಬಾರಿಯಂತೂ ಮಳೆಗಾಲದಲ್ಲಿ ನೆರೆಯಿಂದ ಸಂಕಟ ಅನುಭವಿಸಿ ಹಲವು ಬಾರಿ ಸ್ಥಳಾಂತರವವಾಗಿದ್ದುಂಟು ಎನ್ನುವ ಇವರು ಮನೆಗಳಿಂದ ಮುಖ್ಯ ರಸ್ತೆಗೆ ಸಾಗಬೇಕಾದರೆ ಇನ್ನಿಲ್ಲದ ಪಾಡುಪಡಬೇಕು. ಮಳೆಗಾಲ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಎರಡು ಕುಟುಂಬಗಳು ಈಗಾಗಲೇ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ದೈನಂದಿನ ಕೆಲಸಕ್ಕೆ ಹೋಗಲು ಗದ್ದೆ ಬದು: ಈ ಕುಟುಂಬಗಳು ದೈನಂದಿನ ಕೆಲಸ ಕಾರ‌್ಯಕ್ಕೆ ಸಾಗಬೇಕಾದರೆ ಗದ್ದೆ ಬದುಗಳೇ ರಸ್ತೆ. ಅದರ ಮೂಲಕ ಅರ್ಧ ಕಿ.ಮೀ ಸಾಗಿದರಷ್ಟೇ ಮುಖ್ಯ ರಸ್ತೆಗೆ ಕ್ರಮಿಸಬಹುದು. ಕೆಲವು ವರ್ಷಗಳ ಹಿಂದೆ ಸ್ಥಳೀಯಾಡಳಿತ ಎರಡು ಕಡೆ ತೋಡಿಗೆ ಕಾಲುಸಂಕ ಹಾಗೂ ಗದ್ದೆ ಬದುವಿಗೆ ಕಾಂಕ್ರೀಟ್ ಅಳವಡಿಸಿದ್ದು ಸಂಚಾರಕ್ಕೆ ಸ್ವಲ್ಪಮಟ್ಟಿನ ಅನುಕೂಲ ಕಲ್ಪಿಸಿದೆ. ಆದರೆ ರಸ್ತೆ ನಿರ್ಮಾಣ ಇನ್ನೂ ಆಗಿಲ್ಲ. ಗ್ರಾಪಂ ಸದಸ್ಯರು ಅದಕ್ಕಾಗಿ ಪ್ರಯತ್ನ ಮುಂದುವರಿಸಿದ್ದಾರೆ.

ಇಕ್ಕೆಲಗಳ ಬೃಹತ್ ತೋಡುಗಳು ಮಳೆ ನೀರು ಹರಿದು ಅಲ್ಲಲ್ಲಿ ಕಡಿದುಹೋಗಿ ಇನ್ನಷ್ಟು ಅಪಾಯಕ್ಕೆ ಕಾರಣವಾಗುತ್ತಿವೆ. ತೋಡಿನ ಎರಡೂ ಕಡೆ ತಡೆಗೋಡೆ ನಿರ್ಮಿಸಿ ಅನುಕೂಲ ಮಾಡಬೇಕು ಎಂದು ಇಲ್ಲಿನ ನಿವಾಸಿಗಳು ಬೇಡಿಕೆ ಮುಂದಿಟ್ಟಿದ್ದಾರೆ. ಅಲ್ಲದೆ ಯುಪಿಸಿಎಲ್ ಕಾರ‌್ಯಾರಂಭಿಸಿದ ಬಳಿಕ ಉಪ್ಪು ನೀರಿನ ಹಾವಳಿಯಿಂದ ಬಾವಿಗಳ ನೀರು ಕಲುಷಿತಗೊಂಡು ಕುಡಿಯಲು ಅಯೋಗ್ಯವಾಗಿದೆ ಎಂದೂ ದೂರಿದ್ದಾರೆ.

ಮಳೆ ನೀರು ಹರಿಯುವ ತೋಡಿಗೆ ಅಡ್ಡಲಾಗಿ ಬಿದ್ದು ನೀರು ಸರಾಗ ಹರಿಯಲು ತೊಂದರೆಯಾಗುತ್ತಿದ್ದ ಮರವನ್ನು ಈಗಾಗಲೇ ತೆರವು ಮಾಡಲಾಗಿದೆ. ಹೊಗೆತೋಟ ಭಾಗಕ್ಕೆ ರಸ್ತೆ ನಿರ್ಮಾಣದ ಬಗ್ಗೆ ಪ್ರಯತ್ನ ಮುಂದುವರಿದಿದೆ.
ಜಗದೀಶ್ ಶೆಟ್ಟಿ ಗ್ರಾಮ ಪಂಚಾಯಿತಿ ಸದಸ್ಯ

ಹಲವು ವರ್ಷಗಳಿಂದ ಈ ಭಾಗದಲ್ಲಿ ನೆರೆ ಹಾವಳಿ ಉಂಟಾಗುತ್ತಿದೆ. ಈವರೆಗೂ ಶಾಶ್ವತ ಪರಿಹಾರ ಲಭಿಸಿಲ್ಲ. ಗರ್ಭಿಣಿಯರು, ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡೇ ಸಾಗಬೇಕಾದ ಪರಿಸ್ಥಿತಿ ಇದೆ. ಮಳೆ ಬಂತೆಂದರೆ ಆತಂಕದಲ್ಲೇ ದಿನ ಸಾಗಿಸಬೇಕಾಗಿದೆ. ಕಳೆದ ವರ್ಷದ ಮಳೆಗಾಲದಲ್ಲಿ ನಾಲ್ಕೈದು ಬಾರಿ ಸ್ಥಳಾಂತರವಾಗಬೇಕಾಯಿತು. ನೆರೆಯ ತೊಂದರೆಯಿಂದ ಇದ್ದ ದನಕರುಗಳನ್ನೂ ಮಾರಬೇಕಾದ ಪ್ರಮೇಯ ಒದಗಿ ಬಂತು.
ಮೀನಾಕ್ಷಿ ಹೊಗೆತೋಟದ ಹಿರಿಯ ನಾಗರಿಕರು

Leave a Reply

Your email address will not be published. Required fields are marked *