ಮೂಡಿಗೆರೆ: ಮಳೆಗಾಲ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸಿ ಅವರ ಆಸ್ತಿಪಾಸ್ತಿ ಉಳಿಸುವ ಕೆಲಸವನ್ನು ಮಾಡುವ ಸಲುವಾಗಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸ್ಥಾಪಿಸಲಾಗಿದೆ ಎಂದು ಧರ್ಮಸ್ಥಳ ಜನಜಾಗೃತಿ ವೇದಿಕೆ ಚಿತ್ರದುರ್ಗ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್ ಹೇಳಿದರು.
ಬಿಳಗುಳ ಗ್ರಾಮದ ಧರ್ಮಸ್ಥಳ ಯೋಜನಾ ಕಚೇರಿಯಲ್ಲಿ ನಡೆದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಆಪತ್ತಿನ ಸಂದರ್ಭದಲ್ಲಿ ನೆರವಿಗೆ ಧಾವಿಸುವವರನ್ನು ದೇವರಸ್ವರೂಪಿಯಾಗಿ ಸಂತ್ರಸ್ತರು ಕಾಣುತ್ತಾರೆ. 2019ರಿಂದ ನಿರಂತರವಾಗಿ ಅತಿವೃಷ್ಟಿ ಉಂಟಾದಾಗ ನೆರೆಗೆ ಸಿಲುಕಿದ ಅನೇಕರನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ರಕ್ಷಿಸಿದ್ದಾರೆ. ಅವರ ಆಸ್ತಿಪಾಸ್ತಿ ಉಳಿಸಿದ್ದಾರೆ ಎಂದು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಸುಧೀರ್ ಜೈನ್ ಮಾತನಾಡಿ, ಮೇನಲ್ಲಿ 10 ದಿನ ನಿರಂತರವಾಗಿ ಮಳೆಯಾಗಿದ್ದರಿಂದ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಮನೆ, ಜಾನುವಾರು ಕೊಟ್ಟಿಗೆ, ತಡೆಗೋಡೆ ಕುಸಿದಿವೆ. ಅಂತಹ ಕಡೆಗಳಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. ಇನ್ನು ಮಳೆಗಾಲದ ಪರಿಸ್ಥಿತಿ ಎದುರಿಸಲು ಶೌರ್ಯ ವಿಪತ್ತು ನಿರ್ವಹಣಾ ಘಟಕವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗುವುದು ಎಂದು ತಿಳಿಸಿದರು.
ಶೌರ್ಯ ವಿಪತ್ತು ನಿರ್ವಹಣಾ ಘಟಕದ ಚಿತ್ರದುರ್ಗ ವಿಭಾಗೀಯ ಪ್ರಾದೇಶಿಕ ಯೋಜನಾಧಿಕಾರಿ ಎಂ.ಕಿಶೋರ್‌ಕುಮಾರ್, ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಜೈವಂತ್ ಪಾಟೇಕರ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಪ್ರವೀಣ್ ಪೂಜಾರಿ, ಕ್ಯಾಪ್ಟನ್ ರವಿ ಇತರರಿದ್ದರು.