
ಕಿಕ್ಕೇರಿ: ಬದುಕಲು ಸೂರು, ಜಮೀನು ಇಲ್ಲವಾಗಿದ್ದು ಕನಿಷ್ಠ ಸತ್ತಾಗ ನೆಮ್ಮದಿಯಿಂದ ಅಂತ್ಯಕ್ರಿಯೆ ಮಾಡಲು ಜಾಗವನ್ನಾದರೂ ಕೊಡಿ ಎಂದು ಸಾರ್ವಜನಿಕರು ಅಲವತ್ತುಕೊಂಡರು.
ಪಟ್ಟಣದ ನಾಡಕಚೇರಿಗೆ ಬುಧವಾರ ನೂತನ ತಹಸೀಲ್ದಾರ್ ನಿಸರ್ಗಪ್ರಿಯ ಭೇಟಿ ನೀಡಿದ ವೇಳೆ ಸಾರ್ವಜನಿಕರು ತಮ್ಮ ಸಮಸ್ಯೆಗಳ ಸುರಿಮಳೆ ಸುರಿಸಿದರು.
ಕೃಷ್ಣಾಪುರ ಗ್ರಾಮದಲ್ಲಿ ಸಿಂಧೋಳ್, ಹಕ್ಕಿಪಿಕ್ಕಿ, ದೊಂಬಿದಾಸ, ಸಿಳ್ಳೇಕ್ಯಾತ ಸೇರಿದಂತೆ ಹಲವು ಸಮುದಾಯಗಳಿದ್ದು ಸತ್ತಾಗ ಊಳಲು ಜಾಗವಿಲ್ಲವಾಗಿದೆ. ಇರುವ ಸರ್ಕಾರಿ ಗೋಮಾಳದಲ್ಲಿ ಸ್ಮಶಾನಕ್ಕೆ ಜಾಗವಿದ್ದರೂ ಜಾಗಕ್ಕೆ ಹೋಗಲು ಪ್ರಭಾವಿ ವ್ಯಕ್ತಿಗಳು ಬಿಡದೆ ಬೆದರಿಕೆ ಹಾಕುತ್ತಾರೆ. ಎಲ್ಲ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಟ ಕೊಡುತ್ತಿದ್ದಾರೆ. ನಾಡಕಚೇರಿ ಅಧಿಕಾರಿಗಳು ಮನವಿ ಮಾಡಿದರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ತಮ್ಮ ಜಮೀನು ಹದ್ದುಬಸ್ತು ಮಾಡಿಕೊಡಲು, ಪೌತಿ ಖಾತೆ, ದುರಸ್ಥಿ ಮಾಡಿಕೊಡಲು ಅಧಿಕಾರಿಗಳು ಹಣ ಕೇಳುತ್ತಿದ್ದು, ತಿಂಗಳುಗಟ್ಟಲೆ ಅಲೆದಾಡಿಸುತ್ತಿದ್ದಾರೆ ಎಂದು ಹಲವು ರೈತರು ದೂರಿದರು.
ತಹಸೀಲ್ದಾರ್ ನಿಸರ್ಗಪ್ರಿಯಾ ಮಾತನಾಡಿ, ಈಗಷ್ಟೆ ಅಧಿಕಾರ ವಹಿಸಿಕೊಂಡಿದ್ದೇನೆ. ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಕ್ರಮವಹಿಸಲಾಗುವುದು. ಅಧಿಕಾರಿಗಳೊಂದಿಗೆ ಚರ್ಚಿಸಿ, ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ರೈತಸಂಘ ತಾ.ಅಧ್ಯಕ್ಷ ಕಾರಿಗಾನಹಳ್ಳಿ ಪುಟ್ಟೇಗೌಡ, ಚಿಕ್ಕಮಂದಗೆರೆ ಜಯರಾಮ, ಕೃಷ್ಣಾಪುರ ಮಿಲ್ ರಾಜು, ನಾರಾಯಣಸ್ವಾಮಿ, ಸ್ವಾಮಿಗೌಡ, ಕುಮಾರ, ಮೂರ್ತಿ, ಲತಾ, ಶಿವಣ್ಣ, ಮಂಜೇಗೌಡ ಮತ್ತಿತರರಿದ್ದರು.