ನೂರಾರು ಮಂದಿಗೆ ಐಎಂಎ ಧೋಖಾ

ಕೋಲಾರ: ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿರುವ ಐ ಮಾನಿಟರಿ ಅಡ್ವೈಸರಿ (ಐಎಂಎ) ಧೋಖಾ ಪ್ರಕರಣದ ಜಾಲ ಕೋಲಾರಕ್ಕೂ ಹರಡಿದ್ದು, ಮಾಲೂರು ತಾಲೂಕಿನಲ್ಲಿ ಅನೇಕರು ಹಣ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.

ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್​ನಲ್ಲಿ ಸಾವಿರಾರು ಮಂದಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಇತ್ತ ಮಾಲೂರಿನಲ್ಲೂ ಹೂಡಿಕೆದಾರರು ತಾವೂ ಹಣ ಕಳೆದುಕೊಂಡಿರುವ ಬಗ್ಗೆ ತುಟಿ ಬಿಚ್ಚಲಾರಂಭಿಸಿದ್ದಾರೆ.

ಮಾಲೂರು ತಾಲೂಕಿನ ಕೊಂಡಶೆಟ್ಟಿಹಳ್ಳಿ, ಸೀತನಾಯಕನಹಳ್ಳಿ, ಮಾಸ್ತಿ, ಟೇಕಲ್, ಮಾಲೂರು ಪಟ್ಟಣ ಸೇರಿ ಹತ್ತಾರು ಗ್ರಾಮಗಳ ನೂರಾರು ಜನರು ವಂಚನೆಗೊಳಗಾಗಿದ್ದಾರೆ. ಇವರ ಪ್ರಕಾರ ಕೊಂಡಶೆಟ್ಟಿಹಳ್ಳಿಯವರು ಐಎಂಎನಲ್ಲಿ 4-5 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಸೌದಿಯಲ್ಲಿ ನೆಲೆಸಿರುವ ಇಲ್ಲಿಯವರೂ ಸೇರಿದ್ದಾರೆ.

ಮಾಸ್ತಿ ಗ್ರಾಮದಲ್ಲಿ 7 ಕೋಟಿ ರೂ., ಸೀತನಾಕನಹಳ್ಳಿಯಿಂದ 5 ಕೋಟಿ ರೂ. ಗೂ ಅಧಿಕ ಹೂಡಿಕೆಯಾಗಿದೆ. ಅನೇಕರು ಬೆಂಗಳೂರಿನಲ್ಲಿರುವ ಸಂಬಂಧಿಕರ ಮಾತು ನಂಬಿ ಹಣ ಹಾಗೂ ಚಿನ್ನಾಭರಣ ಠೇವಣಿ ಇಟ್ಟಿದ್ದರು. ಮಾಲೂರು ಪಟ್ಟಣದಲ್ಲಿ ಶಾದಿಮಹಲ್ ನಿರ್ವಣಕ್ಕೆ ಮನ್ಸೂರ್ ಆರ್ಥಿಕ ನೆರವು ನೀಡಿದ್ದ. ಈ ನೆಪದಲ್ಲಿ ಮನ್ಸೂರ್ ಅನೇಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ.

ಹಣ ಕಳೆದುಕೊಂಡವರಲ್ಲಿ ಉಳ್ಳವರು ಸ್ಥಳೀಯವಾಗಿ ಬಹಿರಂಗಪಡಿಸಿಕೊಳ್ಳುತ್ತಿಲ್ಲ. ಮಕ್ಕಳ ಓದು, ಮದುವೆಗೆಂದು ಲಾಭದ ಆಸೆಗೆ ಹಣ ಹೂಡಿಕೆ ಮಾಡಿಕೊಂಡವರು ಇನ್ನೆಷ್ಟು ಮಂದಿಯೋ ಗೊತ್ತಿಲ್ಲ. ವಂಚನೆ ಪ್ರಕರಣ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಹಣ ಕಳೆದುಕೊಂಡಿರುವವರು ಬೆಂಗಳೂರಿನ ಶಿವಾಜಿನಗರದ ಠಾಣೆಯಲ್ಲಿ ದೂರು ನೀಡಿದ್ದಾರೆ.

ಶಾದಿಮಹಲ್​ಗೆ ನೆರವು: ಮಾಲೂರು ಪಟ್ಟಣದ ಕುಂಬೇಶ್ವರ ಬಡಾವಣೆಯಲ್ಲಿ 2 ಎಕರೆಯಲ್ಲಿ ವಕ್ಪ್ ಮಂಡಳಿಯಿಂದ ಶಾದಿಮಹಲ್ ನಿರ್ಮಾಣ ಆರಂಭವಾಗಿ ಶೇ. 80 ಮುಗಿದಿದೆ. ಹಿಂದಿನ ಶಾಸಕ ಮಂಜುನಾಥಗೌಡ ರಾಜಕೀಯ ವಲಯದ ಸ್ನೇಹಿತರ ಮೂಲಕ ಮನ್ಸೂರ್​ಖಾನ್ ಅವರನ್ನು ಭೇಟಿ ಮಾಡಿ ಶಾದಿಮಹಲ್ ನಿರ್ವಣಕ್ಕೆ ಕೋರಿದ ಸಹಕಾರಕ್ಕೆ ನೆರವು ನೀಡಿದ್ದರಿಂದ ಕಾಮಗಾರಿ ಪ್ರಾರಂಭವಾಗಿತ್ತು. ಮಂಜುನಾಥಗೌಡ ಕಳೆದ ಚುನಾವಣೆಯಲ್ಲಿ ಸೋತ ನಂತರ ಕಾಮಗಾರಿಯೂ ಸ್ಥಗಿತಗೊಂಡಿತ್ತು. ಹಾಲಿ ಶಾಸಕ ಕೆ.ವೈ. ನಂಜೇಗೌಡ, ಸಚಿವ ಜಮೀರ್ ಅಹಮದ್ ಮೂಲಕ ಮನ್ಸೂರ್ ಖಾನ್ ಭೇಟಿ ಮಾಡಿ ಶಾದಿ ಮಹಲ್ ಪೂರ್ಣಗೊಳಿಸಿಕೊಡುವಂತೆ ಕೋರಿದ್ದರು. ಮತ್ತೆ ಕಾಮಗಾರಿ ಆರಂಭವಾಗಿತ್ತಾದರೂ ಮೂರ್ನಾಲ್ಕು ತಿಂಗಳಿನಿಂದ ಕಾಮಗಾರಿ ನಿಂತಿದೆ.

ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದು ಕಷ್ಟಪಟ್ಟು ದುಡಿದ ಹಣವನ್ನು ಹೂಡಿಕೆ ಮಾಡಿದ್ದೆವು. ಪ್ರತಿ ತಿಂಗಳು ನಮಗೆ ಬಡ್ಡಿ ಹಣ ಬರುತ್ತಿತ್ತು. ಕಳೆದ ಮೂರು ತಿಂಗಳಿನಿಂದ ನಯಾಪೈಸೆ ಬರುತ್ತಿಲ್ಲ. ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ

| ಆಜೀರಾ, ಮಾಲೂರು

ಮಾಲೂರು ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಅನೇಕರು ಐಎಂಎನಲ್ಲಿ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದಾರೆ. ವಂಚನೆ ಸಂಬಂಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದೂರು ನೀಡಿದ್ದೇವೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ವಂಚನೆಗೆ ಒಳಗಾದವರಿಗೆ ನ್ಯಾಯ ದೊರಕಿಸಬೇಕು.

| ಶಕೀಲ್, ಕೊಂಡಶೆಟ್ಟಿಹಳ್ಳಿ, ಮಾಲೂರು

ಪಟ್ಟಣದಲ್ಲಿನ ವಕ್ಪ್ ಬೋರ್ಡ್​ಗೆ ಸೇರಿರುವ ಜಾಗದಲ್ಲಿ ಶಾದಿಮಹಲ್ ನಿರ್ವಣಕ್ಕೆ ಲಕ್ಷಾಂತರ ರೂಪಾಯಿ ನೆರವನ್ನು ಹಲವಾರು ಮಂದಿಯಿಂದ ಪಡೆಯಲಾಗಿದೆ. ಶಾದಿಮಹಲ್ ನಿರ್ವಣಕ್ಕೆ ಅಲ್ಪಸಂಖ್ಯಾತ ಸಮುದಾಯದ ಐಎಂಎ ಮಾಲೀಕರು ಸಹಾಯ ಮಾಡಿದ್ದಾರೆ. ದಾನ ಕೊಟ್ಟವರಿಗೆ ಯಾವುದೇ ಸ್ವೀಕೃತಿ ಪತ್ರ ಕೊಟ್ಟಿಲ್ಲ.

| ಶಬ್ಬೀರ್, ವಕ್ಪ್ ಬೋರ್ಡ್ ಸದಸ್ಯ, ಮಾಲೂರು

ಮೊದಲೇ ಅನುಮಾನ ಇತ್ತು: ರಮಜಾನ್ ಹಬ್ಬದಂದೇ ಈ ಬಗ್ಗೆ ಅನುಮಾನ ಬಂದಿತ್ತು. ಆ ತಿಂಗಳಿನಲ್ಲಿ ನಾವೆಲ್ಲರೂ ಉಪವಾಸವಿದ್ದುದರಿಂದ ಮಾಹಿತಿ ಸರಿಯಾಗಿ ಸಿಗಲಿಲ್ಲ. ನಾವೆಲ್ಲರೂ ಕಷ್ಟಪಟ್ಟು ದಿನವಿಡೀ ದುಡಿದು ಕಟ್ಟಿರುವ ಹಣ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಾಗಲಿ, ಸರ್ಕಾರವಾಗಲಿ ಮಧ್ಯಸ್ಥಿಕೆ ವಹಿಸಿ ಐಎಂಎ ಮಾಲೀಕನ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನಮ್ಮ ಹಣ ನಮಗೆ ಒದಗಿಸಬೇಕೆಂದು ಕೊಂಡಶೆಟ್ಟಹಳ್ಳಿಯ ಶಕೀಲ್, ರಿಯಾಜ್, ಜಾವಿದ್, ಸಾದಿಕ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *