More

  ನೂತನ ಪ್ರವಾಸೋದ್ಯಮ ನೀತಿಯಲ್ಲಿ ಖಾಸಗಿಗೆ ಮಣೆ

  ಕಾರವಾರ: ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇತ್ತೀಚೆಗೆ ಜಾರಿಗೆ ಬಂದ ಪ್ರವಾಸೋದ್ಯಮ ನೀತಿಯು ಹೆಚ್ಚು ಅನುಕೂಲ ಮಾಡಿಕೊಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

  ಟ್ಯಾಗೋರ್ ಕಡಲ ತೀರದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 65 ಲಕ್ಷ ರೂ. ವೆಚ್ಚದಲ್ಲಿ ಸ್ವಾಗತ ಕಮಾನು ಹಾಗೂ ರಕ್ಷಣಾ ಬೇಲಿ ನಿರ್ವಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ, ಟ್ಯಾಗೋರ್ ಮೂರ್ತಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

  ಹೊಸ ಪ್ರವಾಸೋದ್ಯಮ ನೀತಿ ಉತ್ತರ ಕನ್ನಡ ಜಿಲ್ಲೆಗೆ ಕರಾವಳಿಗೆ ಹೆಚ್ಚು ಅನುಕೂಲವಾಗಿದೆ. ಸಾಕಷ್ಟು ಉದ್ಯಮಿಗಳು ಇಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಆಸಕ್ತಿ ತೋರಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಈ ಚಟುವಟಿಕೆಗಳಿಗೆ ಕೊಂಚ ಹಿನ್ನಡೆಯಾಗಿದೆ ಎಂದರು.

  ವಿಶ್ವವೇ ಕಂಡ ಮಹಾನ್ ನಾಯಕ, ಸನಾತನ ಸಂಸ್ಕೃತಿಯನ್ನು ಸಾರಿದ ಮಹಾನ್ ಪುರುಷ ರವೀಂದ್ರನಾಥ ಟ್ಯಾಗೋರರು ಕಾರವಾರಕ್ಕೆ ಬಂದು ಇಲ್ಲಿ ಅವರ ಪಾದ ಧೂಳಿಯನ್ನು ಹಾಕಿದ್ದರು. ಆ ನೆನಪು ಸದಾ ಉಳಿಯಬೇಕು, ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಬೇಕು ಎಂದು ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.

  ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಪಂ ಸಿಇಒ ಎಂ.ರೋಶನ್, ಎಸ್​ಪಿ ಶಿವಪ್ರಕಾಶ ದೇವರಾಜು, ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ., ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪುರುಷೋತ್ತಮ ಇದ್ದರು.

  ಜಿಲ್ಲೆಯ ವಿಭಜನೆ ವಿಚಾರ ರ್ಚಚಿಸುವೆ: ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಬೇಕು ಎಂಬ ವಿಚಾರವಾಗಿ ಚರ್ಚೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಜಿಲ್ಲೆಯ ಇಬ್ಬಾಗದ ಬಗ್ಗೆ ನಿರ್ಧಾರ ಮಾಡುವಾಗ ಸಂಸದರು, ಸ್ಪೀಕರ್, ಎಲ್ಲ ಶಾಸಕರು ಹಾಗೂ ಬುದ್ಧಿ ಜೀವಿಗಳ ಅಭಿಪ್ರಾಯ ಪಡೆದು ಮುಂದಡಿ ಇಡಲಾಗುವುದು ಎಂದರು.

  ಅಧ್ಯಕ್ಷ, ಉಪಾಧ್ಯಕ್ಷದ ಆಯ್ಕೆಗೆ ಮಾನ್ಯತೆಯ ವಿಶ್ವಾಸ: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯನ್ನು ರದ್ದು ಮಾಡಿ ಹೈಕೋರ್ಟ್ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಒಂದೆರಡು ದಿನದಲ್ಲಿ ಸರ್ಕಾರದ ಪರವಾಗಿಯೇ ತೀರ್ಮಾನ ಬರುವ ವಿಶ್ವಾಸವಿದೆ. ಈಗಾಗಲೇ ಮುಗಿದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮನ್ನಣೆ ದೊರೆಯುವ ವಿಶ್ವಾಸವಿದೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಅವರಿಗೆ ಅಧಿಕಾರ ದೊರಕಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆ. ಕೋರ್ಟ್ ಅನುಮತಿ ಪಡೆದೇ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡಲಾಗಿತ್ತು ಎಂದರು.

  ಫೆನ್ಸಿಂಗ್ ಹಾಕದಂತೆ ಮೀನುಗಾರರ ಮನವಿ: ಟ್ಯಾಗೋರ್ ಕಡಲ ತೀರದಲ್ಲಿ ಹೆದ್ದಾರಿ ಪಕ್ಕ ಫೆನ್ಸಿಂಗ್ ಅಳವಡಿಕೆಗೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಸಚಿವರು ಶಂಕುಸ್ಥಾಪನೆ ನೆರವೇರಿಸಿದ ಕಾಮಗಾರಿಗೆ ಒಂದೇ ದಿನದಲ್ಲಿ ವಿರೋಧ ವ್ಯಕ್ತವಾಗಿದೆ. ಪ್ರವೇಶ ದ್ವಾರ, ಟ್ಯಾಗೋರ್ ಮೂರ್ತಿ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಆದರೆ, ಫೆನ್ಸಿಂಗ್ ಹಾಕಿ ತೀರಕ್ಕೆ ಜನರ ಓಡಾಟ ತಡೆಯುವುದು ಸರಿಯಲ್ಲ. ಕಾಮಗಾರಿ ನಡೆಸಲು ಮುಂದಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಹೇಳಿದ್ದಾರೆ. ಈ ಸಂಬಂಧ ಸಚಿವರನ್ನೂ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts