ಚಿತ್ರದುರ್ಗ: ಹೊಳಲ್ಕೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 350 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಸಲಾಗುತ್ತಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಲಂಬಾಣಿಹಟ್ಟಿಯಲ್ಲಿ ನೂತನ ಕಂದಾಯ ಗ್ರಾಮ ‘ಪ್ರಿಯಾ ನಗರ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕಾಳಘಟ್ಟ ಲಂಬಾಣಿಹಟ್ಟಿ ಗ್ರಾಮದಲ್ಲಿ 3.20 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಕುಡಿವ ನೀರು, ಅಂಗನವಾಡಿ ಕಟ್ಟಡ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಮಹತ್ವದ ಕಾರ್ಯ ನಡೆಯುತ್ತಿದೆ. ತಾಲೂಕಿನ ಪ್ರತಿ ಗ್ರಾಮಕ್ಕೂ ಸೂಳೆಕೆರೆಯಿಂದ ಕುಡಿವ ನೀರು ಪೂರೈಸಲು 300 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಅಭಿಮಾನದ ನಾಮಕರಣ: ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅವರ ಗ್ರಾಮ ವಾಸ್ತವ್ಯದಿಂದ ಗ್ರಾಮದ ಚಿತ್ರಣವೇ ಬದಲಾಯಿತು. ಅಧಿಕಾರಿಗಳು ಪ್ರಾಮಾಣಿಕತೆ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಈ ಗ್ರಾಮವೇ ಸಾಕ್ಷಿಯಾಗಿದೆ. ಹೀಗಾಗಿ ಈ ಗ್ರಾಮಕ್ಕೆ ಗ್ರಾಮಸ್ಥರೇ ಅಭಿಮಾನದಿಂದ ಪ್ರಿಯಾ ನಗರ ಎಂದು ನಾಮಕರಣ ಮಾಡಿದ್ದಾರೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಗ್ರಾಮಸ್ಥರು ತಮ್ಮ ಗ್ರಾಮಗಳ ಅಭಿವೃದ್ಧಿಗೆ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಕೈಜೋಡಿಸಬೇಕು. ಸರ್ಕಾರ ಜನರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಯೋಜನೆ ರೂಪಿಸಿ ಜಾರಿಗೊಳಿಸಿದೆ. ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 10 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಶುದ್ಧ ಕುಡಿವ ನೀರಿನ ಘಟಕಕ್ಕೆ ಚಾಲನೆ ನೀಡಲಾಯಿತು. 10.80 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಯಿತು.
ಮುಖಂಡ ಬಸವಂತಪ್ಪ, ಉಪವಿಭಾಗಾಧಿಕಾರಿ ವಿಜಯ ಕುಮಾರ್, ಜಂಟಿಕೃಷಿ ನಿರ್ದೇಶಕ ಲಕ್ಷ್ಮಣ್ ಕಳ್ಳೆನವರ್, ಗ್ರಾಪಂ ಸದಸ್ಯೆ ಪುಷ್ಪಾವತಿ, ತಹಸೀಲ್ದಾರ್ ಕೆ.ನಾಗರಾಜ್ ಉಪಸ್ಥಿತರಿದ್ದರು.
ಪ್ರಿಯಾ ನಗರವಾದ ಕಾಳಘಟ್ಟ ಗ್ರಾಮ: ಸರ್ಕಾರದ ಸೂಚನೆಯಂತೆ ಫೆ.19 ರಂದು ಡಿಸಿ ಆರ್.ವಿನೋತ್ ಪ್ರಿಯಾ ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಲಂಬಾಣಿಹಟ್ಟಿಯಲ್ಲಿ ಜನಸ್ಪಂದನ ಸಭೆ ನಡೆಸಿ ಗ್ರಾಮದಲ್ಲಿ ತಂಗಿದ್ದರು. ಮೂಲಸೌಲಭ್ಯ ಕಲ್ಪಿಸಬೇಕೆಂಬ ಜನರ ಮನವಿಗೆ ಸ್ಪಂದಿಸಿದರು.
ಕೇವಲ ನಾಲ್ಕು ತಿಂಗಳಲ್ಲಿ ಗ್ರಾಮಕ್ಕೆ ಡಾಂಬರ್ ರಸ್ತೆ, ಶುದ್ಧ ಕುಡಿವ ನೀರಿನ ಘಟಕ, ಅಂಗನವಾಡಿ ಕಟ್ಟಡ, ಅರ್ಹ 50 ಜನರಿಗೆ ಮಾಸಾಶನ ಮಂಜೂರು, ಹೆಲ್ತ್ ಕಾರ್ಡ್ ವಿತರಣೆ ಆಗಿದೆ.
ಜೀವ ಉಳಿಸಿದ ಡಿಸಿ: ಮೆದುಳಿನ ತೊಂದರೆಯಿಂದ ಬಳಲುತ್ತಿದ್ದ ಗ್ರಾಮದ ಗೀತಾಬಾಯಿ ಅವರಿಗೆ ಜಿಲ್ಲಾಧಿಕಾರಿ ಸೂಚನೆಯಂತೆ ಅಧಿಕಾರಿಗಳು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಇದರ ಫಲವಾಗಿ ಗೀತಾಬಾಯಿ ಜೀವ ಉಳಿದಿದೆ.