ನುಡಿ ಜಾತ್ರೆಗೆ ಸಜ್ಜುಗೊಂಡ ಕಮ್ಮರಡಿ

ಕೊಪ್ಪ: ಕಮ್ಮರಡಿಯಲ್ಲಿ ಜ.12 ಮತ್ತು 13ರಂದು ನಡೆಯುವ ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿದೆ.

ಸುಭಾಷ್ ಚಂದ್ರಬೋಸ್ ಕ್ರೀಡಾಂಗಣದಲ್ಲಿ ಬೃಹತ್ ಪೆಂಡಾಲ್ ನಿರ್ವಿುಸಿ ಕುಸುರಿಗೆ ಕೃಷ್ಣಪ್ಪ ಗೌಡ ಮಂಟಪ ಹಾಗೂ ಕಾರ್ಯಕ್ರಮ ನಡೆಯುವ ಮುಖ್ಯವೇದಿಕೆಗೆ ಸಂತ ಶಿಶುನಾಳ ಶರೀಫರ ಹೆಸರಿಡಲಾಗಿದೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಡುವ ಸ್ಥಳದಿಂದ ಸಾಹಿತ್ಯ ಸಮ್ಮೇಳನ ವೇದಿಕೆಯವರೆಗೆ ಮೂರು ಕಡೆ ಮಹಾದ್ವಾರಗಳನ್ನು ನಿರ್ವಿುಸಿದ್ದು ಅವುಗಳಿಗೆ ಚಾವಲ್ಮನೆ ಪಟೇಲ್ ಸುಬ್ಬಣ್ಣ ನಾಯ್ಕ, ಉಂಟುಗೋಡು ಯು.ಪಿ.ವೆಂಕಟೇಶ್ ಹಾಗೂ ರಾಘವೇಂದ್ರ ಸ್ವಾಮಿ ಭಕ್ತವೃಂದ ಎಂದು ಹೆಸರಿಡಲಾಗಿದೆ.

ವೇದಿಕೆ ಬಲಭಾಗದಲ್ಲಿ 60ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ವಿುಸಲಾಗಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗುವ ದಾರಿ, ಸಮ್ಮೇಳನ ನಡೆಯುವ ಸುಭಾಷ್​ಚಂದ್ರ ಬೋಸ್ ಕ್ರೀಡಾಂಗಣದ ತುಂಬ ಸಮ್ಮೇಳಕ್ಕೆ ಸ್ವಾಗತ ಕೋರುವ, ಬ್ಯಾನರ್, ಪ್ಲ್ಲೆಕ್ಸ್​ಗಳು ರಾರಾಜಿಸುತ್ತಿವೆ. ಕಮ್ಮರಡಿ ಪೇಟೆ ಹಾಗೂ ಸಮ್ಮೇಳನದ ಸ್ಥಳಗಳನ್ನು ಬಂಟಿಂಗ್ಸ್​ಗಳಿಂದ ಸಿಂಗರಿಸಲಾಗಿದೆ.

ಬೆಳಗ್ಗೆ 9ಕ್ಕೆ ಶಾಸಕ ಟಿ.ಡಿ.ರಾಜೇಗೌಡ ರಾಷ್ಟ್ರಧ್ವಜಾರೋಹಣ, ತಹಸೀಲ್ದಾರ್ ತನುಜಾ ಟಿ. ಸವದತ್ತಿ ಪರಿಷತ್ ಧ್ವಜಾರೋಹಣ, ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ಇನೇಶ್ ನಾಡ ಧ್ವಜಾರೋಹಣ ನೆರವೇರಿಸುವರು. 9.30ಕ್ಕೆ ವಿಶ್ವಮಾನವ ಸಂದೇಶ ಜ್ಯೋತಿಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಗಣಪತಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು.

10ಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಸಮ್ಮೇಳನ ಉದ್ಘಾಟಿಸುವರು. ಶಾಸಕ ಟಿ.ಡಿ.ರಾಜೇಗೌಡ ಅವರು ಹ.ಪ.ಗಣಪತಿ ಪ್ರಭು ಸ್ಮಾರಕ ಪುಸ್ತಕ ಮಳಿಗೆ, ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ಇನೇಶ್ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡುವರು. ಸಂಸದೆ ಶೋಭಾ ಕರಂದ್ಲಾಜೆ ಪುಸ್ತಕಗಳ ಬಿಡುಗಡೆ ಮಡಲಿದ್ದು, ಸಮ್ಮೇಳನಾಧ್ಯಕ್ಷ ಶಂ.ನ. ಶೇಷಗಿರಿ ಅಧ್ಯಕ್ಷೀಯ ಭಾಷಣ ಮಾಡುವರು.

ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್.ರಾಮಸ್ವಾಮಿ ನೇತೃತ್ವದಲ್ಲಿ ಉತ್ಸವ ಮತ್ತು ಅಲಂಕಾರ ಸಮಿತಿ ಅಧ್ಯಕ್ಷ ಕೆ.ಪಿ.ರಾಜಶೇಖರ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಲಯನ್ಸ್ ಜಿಲ್ಲಾ ಗರ್ವನರ್ ಎಚ್.ಜಿ.ವೆಂಕಟೇಶ್, ವಿವಿಧ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸಾಹಿತ್ಯ ಪರಿಷತ್ ಅಧ್ಯಕ್ಷರು, ಪದಾಧಿಕಾರಿಗಳು, ಕಮ್ಮರಡಿ ಗ್ರಾಮಸ್ಥರು ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ವಿವಿಧ ಗೋಷ್ಠಿಗಳ ಆಯೋಜನೆ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಕುವೆಂಪು ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಎಂ.ಪುಟ್ಟಯ್ಯ ಅಧ್ಯಕ್ಷತೆಯಲ್ಲಿ ಸಾಹಿತ್ಯ ಗೋಷ್ಠಿ ನಡೆಯಲಿದ್ದು, ‘ಕುವೆಂಪು ಅವರ ಸಾಹಿತ್ಯದ ಪ್ರಸ್ತುತತೆ’ ಕುರಿತು ಡಾ. ಅರುಣ್ ಜೋಳದ ಕೂಡ್ಲಗಿ ಹಾಗೂ ‘ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ’ ಕುರಿತು ಎಸ್.ಎಸ್.ವೆಂಕಟೇಶ್ ಉಪನ್ಯಾಸ ನೀಡುವರು.

ಸಂಜೆ 4 ಗಂಟೆಗೆ ನಿವೃತ್ತ ಉಪನ್ಯಾಸಕಿ ಕೆ.ಆರ್.ಉಮಾದೇವಿ ಅಧ್ಯಕ್ಷತೆಯಲ್ಲಿ ನಡೆಯುವ ಮಹಿಳಾ ಗೋಷ್ಠಿಯಲ್ಲಿ ‘ಮಹಿಳಾ ಸಬಲೀಕರಣದ ಹೆಜ್ಜೆಗಳು’ ಕುರಿತು ಎಸ್.ವರಲಕ್ಷ್ಮೀ, ‘ಸಮೂಹ ಮಾಧ್ಯಮ ಮತ್ತು ಮಹಿಳೆ’ ಕುರಿತು ಅಕ್ಷತಾ ಹುಂಚದಕಟ್ಟೆ ಉಪನ್ಯಾಸ ನೀಡುವರು.