ನೀ ಯಾಕೆ ಬಂದೆ ನಮ್ಮನೆ ಹಿತ್ಲಾಗೆ…!

ನಿಮ್ಮ ಮನೆ ಹಿತ್ತಿಲಲ್ಲಿ ಏನೆಲ್ಲ ಸರೀಸೃಪಗಳು ಕಾಣಿಸಿಕೊಳ್ಳಬಹುದು…… ಹಲ್ಲಿ, ಹಾವು, ಓತಿಕ್ಯಾತ, ಉಡ, ಗೋಸುಂಬೆ ಇತ್ಯಾದಿಗಳು ಅಲ್ಲವೇ? ಆದರೆ ಒಂದು ಮೊಸಳೆಯೇ ಕಾಣಿಸಿಕೊಂಡರೆ ನಿಮಗೆ ಹೇಗನ್ನಿಸಬಹುದು?! ಅಮೆರಿಕದಿಂದ ಇಂಥದೊಂದು ಘಟನೆ ವರದಿಯಾಗಿದೆ.

ಅಲ್ಲಿನ ದಕ್ಷಿಣ ಕರೋಲಿನಾದ ಮನೆಯೊಂದರ ಹಿತ್ತಿಲಲ್ಲಿ ಏನೋ ಜೋರಾಗಿ ಸರಿದಾಡಿದಂತಾಗಿ ಹಿಂದಿನ ಬಾಗಿಲು ತೆರೆದು ನೋಡಿದಾಗ ಮನೆಯವರಿಗೆ ಹೃದಯವೇ ಬಾಯಿಗೆ ಬಂದಂತಾಯ್ತಂತೆ. ಕಾರಣ, ಭದ್ರತಾಕಾರ್ಯದ ನಿಗಾ ಹೊತ್ತವರು ಅತ್ತಿಂದಿತ್ತ ಠಳಾಯಿಸುವಂತೆ, ಮೊಸಳೆಯೊಂದು ಹಿತ್ತಿಲಲ್ಲಿ ಶತಪಥ ಹಾಕುತ್ತಿತ್ತು. ಒಟ್ನಲ್ಲಿ, ಮನೆಯವರು ನಿತ್ಯಕರ್ಮಕ್ಕೋ ಮತ್ತೇನಕ್ಕೋ ಹಿತ್ತಿಲಿಗೆ ಹೋಗಲಿಕ್ಕೂ ಆಗದ ಪರಿಸ್ಥಿತಿ! ಬರೋಬ್ಬರಿ 7 ಅಡಿ ಉದ್ದವಿದ್ದ ಈ ಮೊಸಳೆ ಅಲ್ಲಿಗೆ ಬಂದಿದ್ದಾದರೂ ಹೇಗೆ ಎಂಬ ಜಿಜ್ಞಾಸೆ ಅಲ್ಲಿನ ಕೆಲವರದಾಗಿದ್ದರೆ, ‘ಕರೆಯದೇ ಬಂದ’ ಅತಿಥಿಯನ್ನು ಜಾಗ ಖಾಲಿಮಾಡಿಸುವುದಾದರೂ ಹೇಗೆ ಎಂದು ಮತ್ತಿತರರು ತಲೆ ಕೆಡಿಸಿಕೊಳ್ಳಹತ್ತಿದರಂತೆ. ಜನರ ಗುಜುಗುಜು ಕೇಳಿಸಿಕೊಂಡ ಮೊಸಳೆ, ‘ಇಲ್ಲಿದ್ದರೆ ಇವರೆಲ್ಲ ಏನಾದರೊಂದು ಗತಿ ಕಾಣಿಸ್ತಾರೆ, ಇಲ್ಲವೇ ಹಿಡಿದು ಕೂಡಿಹಾಕ್ತಾರೆ’ ಅಂದ್ಕೊಂಡು ಮನೆಯ ಬೇಲಿ ಹಾರಲು ಹವಣಿಸಿತಂತೆ. ಆದರೆ ‘ಬೇಲಿ ಹಾರೋದು’ ಅಂದ್ಕೊಂಡಷ್ಟು ಸುಲಭವೇ? ಅದೇನು ರಾಜಕಾರಣಿಗಳ ‘ಪಕ್ಷಾಂತರ’ ಕೆಟ್ಹೋಯ್ತೇ?! ಹೀಗಾಗಿ ಗಿಟ್ಟಲಿಲ್ಲ. ಅಷ್ಟು ಹೊತ್ತಿಗೆ ಮನೆಯವರ್ಯಾರೋ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಕರೆಮಾಡಿದ್ದರಿಂದ, ಅವರು ಬೋನು ಸಮೇತ ಬಂದು ಮೊಸಳೆಯನ್ನು ಎತ್ಹಾಕಿಕೊಂಡು ಹೋದರಂತೆ. ನಂತರವೇ ಮನೆಯವರ ಗಂಟಲಲ್ಲಿ ನೀರು, ಮತ್ತೊಂದು ಇಳಿದಿದ್ದು!

Leave a Reply

Your email address will not be published. Required fields are marked *