ನೀವೂ ಮತ್ತೊಬ್ಬರ ಬದುಕು ಬದಲಿಸಬಹುದು!

ದೃಷ್ಟಿಹೀನರು,ಸೆರೆೆಬ್ರಲ್ ಪಾಲ್ಸಿ ಪೀಡಿತರು, ಕೈ ಇಲ್ಲದವರು ಹೀಗೆ ವಿವಿಧ ಅಂಗವೈಕಲ್ಯಗಳನ್ನು ಎದುರಿಸುತ್ತಿರುವವರಿಗೆ ಪರೀಕ್ಷೆ ಬರೆಯಲು ಸಹಾಯಕರ ಸಹಕಾರ ಬೇಕು. ನಿರೀಕ್ಷಿತ ಸಂಖ್ಯೆಯಲ್ಲಿ ಸ್ಕ್ರೈಬ್​ಗಳು ಸಿಗುತ್ತಿಲ್ಲ ಎಂಬ ಅಳಲು ಒಂದೆಡೆಯಾದರೆ, ‘ನಾವು ಸಹಾಯ ಮಾಡಲು ಸಿದ್ಧ. ಆದರೆ, ಯಾರನ್ನು ಸಂರ್ಪಸೋದು?’ ಅನ್ನೋ ಪ್ರಶ್ನೆ ಕೆಲವರದ್ದು.

ಆತ ಕೈಯಿಲ್ಲದಿದ್ದರೂ ಓದಿನಲ್ಲಿ ಭಾರಿ ಜಾಣ. ಕಳೆದ ವರ್ಷ ದ್ವಿತೀಯ ಪಿಯು ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಪರೀಕ್ಷೆ ಒಂದು ತಿಂಗಳಿರುವಾಗಲೇ ಪುನರ್ ಮನನವನ್ನು ಮುಗಿಸಿ, ಉತ್ತಮ ಅಂಕ ಪಡೆಯುವ ಕನಸು ಕಾಣತೊಡಗಿದ ದೀಪಕ್ (ಹೆಸರು ಬದಲಿಸಲಾಗಿದೆ). ಎಷ್ಟು ಚೆನ್ನಾಗಿ ಓದಿದರೂ ಪರೀಕ್ಷೆ ಬರೆಯಲು ಸಹಾಯಕ ಬೇಕಲ್ಲವೇ? ಹುಡುಕಾಟ ಶುರುವಾಯಿತು. ಸ್ನೇಹಿತರು, ಪರಿಚಿತರು, ಬಂಧುಬಳಗದವರು ಹೀಗೆ ಎಲ್ಲಡೆ ನೆರವಿಗಾಗಿ ಯಾಚಿಸಿದ. ಎಲ್ಲರಿಂದ ಹಾರಿಕೆಯ ಉತ್ತರವೇ ದೊರೆಯಿತು. ಕಡೆಗೆ, ಗೆಳೆಯನ ಗೆಳೆಯನೊಬ್ಬ ನೆರವಿಗೆ ಬಂದು ಪರೀಕ್ಷೆ ಬರೆದ. ಆದರೆ, ದೀಪಕ್ ಹೇಳಿದ್ದನ್ನು ಆತನಿಗೆ ಪೂರ್ಣವಾಗಿ ಗ್ರಹಿಸಿ, ಬರೆಯಲು ಆಗಲಿಲ್ಲ. ಹಾಗಾಗಿ, ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂತು.

ಇದು ಒಬ್ಬ ಹುಡುಗನ ಕಥೆಯಲ್ಲ. ಸಾವಿರಾರು ಅಂಗವಿಕಲರು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಸ್ಕ್ರೈಬ್​ಗಳ ಹುಡುಕಾಟದಲ್ಲಿ ತೊಡಗುತ್ತಾರೆ. ದೃಷ್ಟಿಹೀನ ಮಕ್ಕಳ ಶಿಕ್ಷಣ ಸಂಸ್ಥೆಗಳು, ಇತರೆ ಅಂಗವಿಕಲ ವಿದ್ಯಾರ್ಥಿಗಳ ಸಂಸ್ಥೆಗಳು ಕೂಡ ಇದೇ ತೆರನಾದ ಸಮಸ್ಯೆ ಎದುರಿಸುತ್ತಿವೆ. ಹಾಗಾದರೆ, ಇವರ ನೆರವಿಗೆ ಬರುವಷ್ಟು ಸಂವೇದನೆಯೂ ಸಮಾಜಕ್ಕೆ ಇಲ್ಲವೇ? ಎಂಬ ಪ್ರಶ್ನೆ ಮೂಡಬಹುದು. ವಾಸ್ತವದಲ್ಲಿ ಪರಿಸ್ಥಿತಿ ಹಾಗಿಲ್ಲ. ಎಷ್ಟೋ ಜನರಿಗೆ ನೆರವಾಗುವ ಮನಸ್ಸು ಇರುತ್ತದೆಯಾದರೂ ಯಾರನ್ನು, ಎಲ್ಲಿ ಸಂರ್ಪಸಬೇಕು ಎಂಬ ಮಾಹಿತಿ ಇರುವುದಿಲ್ಲ. ಈ ಕೊರತೆಗಳನ್ನು ನಿವಾರಿಸಲೆಂದೇ ಕೆಲ ಸ್ವಯಂಸೇವಾ ಸಂಸ್ಥೆಗಳು ಸೇತುವೆಯಂತೆ ಸಮಾಜ ಮತ್ತು ಈ ವಿಶೇಷ ಪರೀಕ್ಷಾರ್ಥಿಗಳ ನಡುವೆ ಕಾರ್ಯನಿರ್ವಹಿಸುತ್ತಿವೆ.

ಸಾವಿರಾರು ಯುವಕರನ್ನು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿರುವ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಯೂತ್ ಫಾರ್ ಸೇವಾ ಸಂಸ್ಥೆ ಇಂಥ ಪರೀಕ್ಷಾರ್ಥಿಗಳಿಗೆ ಸ್ಕ್ರೈಬ್​ಗಳನ್ನು ಒದಗಿಸುವ ಸಾರ್ಥಕ ಕೆಲಸವನ್ನು ಹಲವು ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ‘ಅಂಗವಿಕಲರ ಬಗ್ಗೆ ಬರೀ ಅನುಕಂಪ ತೋರಿದರೆ ಸಾಲದು. ಅವರ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸಲು ಸ್ಕ್ರೈಬ್​ಗಳ ಅಗತ್ಯ ತುಂಬಾ ಇದೆ. ಇದಕ್ಕಾಗಿ ಹೆಚ್ಚು ಸಮಯವೂ ವಿನಿಯೋಗಿಸಬೇಕಿಲ್ಲ. ವರ್ಷದಲ್ಲಿ ಒಬ್ಬ ವ್ಯಕ್ತಿ 7-10 ದಿನಗಳ ಸಮಯ ನೀಡಿದ್ದಲ್ಲಿ ಒಬ್ಬ ಅಂಗವಿಕಲ ಬಾಳು ರೂಪಿಸಿಕೊಳ್ಳಬಹುದು, ಶೈಕ್ಷಣಿಕ ಪಯಣದ ಮುಂದಿನ ಹಂತಕ್ಕೆ ತಲುಪಬಹುದು. ಈ ನಿಟ್ಟಿನಲ್ಲಿ ಯುವಕ-ಯುವತಿಯರು ಹೆಚ್ಚಾಗಿ ಮುಂದೆಬರಬೇಕು. ಸ್ಕ್ರೈಬ್ ಆಗುವವನಿಗೆ ಉತ್ತಮ ಗ್ರಹಿಕೆ ಹಾಗೂ ಬರವಣಿಗೆ ಕೌಶಲ ಎರಡೂ ಇರಬೇಕು. ಯುವಕ-ಯುವತಿಯರಿಗೆ ಇದು ಸುಲಭವಾಗಿ ಸಾಧ್ಯವಾಗುವುದರಿಂದ ಸ್ಕ್ರೈಬ್​ಗಳಾಗಿ ಬರಬೇಕು’ ಎನ್ನುತ್ತಾರೆ ಯೂತ್ ಫಾರ್ ಸೇವಾದ ಸೇವಾವ್ರತಿ ಪಲ್ಲವಿ ಆಚಾರ್ಯ. 2008ರಿಂದ ತಾವೇ ಸ್ಕ್ರೈಬ್ ಆಗಿ ಪರೀಕ್ಷೆ ಬರೆಯುತ್ತಿದ್ದ ಪಲ್ಲವಿ ಮುಂದೆ ವೈಎಫ್​ಎಸ್ ಸೇರಿದ ಮೇಲೆ ಈ ಕಾರ್ಯಕ್ಕೆ ವಿಶಾಲ ರೂಪ ಕೊಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ (2012ರಿಂದ) ವಿವಿಧ ಸಂಸ್ಥೆಗಳಿಗೆ ವಿಶೇಷವಾಗಿ ದೃಷ್ಟಿಹೀನ ಮಕ್ಕಳ ಸಂಸ್ಥೆಗಳಿಗೆ ಸ್ಕ್ರೈಬ್​ಗಳನ್ನು ಒದಗಿಸುತ್ತಿದ್ದಾರೆ. ಬೆಂಗಳೂರಿನ ರಮಣ ಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್​ಗಾಗಿ ಪ್ರತಿವರ್ಷವೂ ಸಹಾಯಕರನ್ನು ನಿಯೋಜಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಥ ಸ್ವಯಂಸೇವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಆ ನಿಟ್ಟಿನಲ್ಲಿ ಸಮಾಜಕ್ಕೆ ಅರಿವು ಮತ್ತು ಮಾಹಿತಿ ನೀಡುವ ಅಗತ್ಯವಿದೆ ಎನ್ನುವ ಅವರು ಇದಕ್ಕಾಗಿ ಶಾಲಾಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಎಸ್​ಎಸ್​ಎಲ್​ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಸ್ಪರ್ಧಾತ್ಮಕ ಸೇರಿದಂತೆ ಯಾವುದೇ ಪರೀಕ್ಷೆಗಳಿಗೆ ಸಹಾಯಕರಾಗಲು ಬಯಸುವವರು ಪಲ್ಲವಿ ಆಚಾರ್ಯ (96119-11335, [email protected]) ಅವರನ್ನು ಸಂರ್ಪಸಬಹುದು.

ಆ ಖುಷಿ ವರ್ಣಿಸಲು ಅಸಾಧ್ಯ!: ಸೆರೆಬ್ರಲ್ ಪಾಲ್ಸಿ(ಮಿದುಳಿನ ಲಕ್ವ) ಕಾಯಿಲೆಯೊಡನೆ ನಿರಂತರವಾಗಿ ಹೋರಾಡುತ್ತಲೇ ಛಲ ಬಿಡದೆ ಶೈಕ್ಷಣಿಕ ಪಯಣವನ್ನು ಮುಂದುವರಿಸಿ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ಅದ್ಭುತ ಸಾಧಕ ಅಶ್ವಿನ್ ಕಾರ್ತಿಕ್ ಅವರ ಜೀವದ ಗೆಳೆಯ ಭರತ್ ಶರ್ವ. ಅಶ್ವಿನ್ ಇಂಜಿನಿಯರಿಂಗ್ ಓದಬೇಕೆಂಬ ಆಸೆಗೆ, ಕನಸಿಗೆ ಬೆನ್ನೆಲುವಾಗಿ ಅವರ ಇಂಜಿನಿಯರಿಂಗ್​ನ 4 ವರ್ಷದ ಎಲ್ಲ ಎಂಟು ಸೆಮಿಸ್ಟರ್​ಗಳಿಗೂ ಸ್ಕ್ರೈಬ್ ಆಗಿ ಪರೀಕ್ಷೆ ಬರೆದವರು ಭರತ್.

ಆ ಅನುಭವ ಹೇಗಿತ್ತು ಎಂದು ಭರತ್​ಗೆ ಪ್ರಶ್ನಿಸಿದರೆ-‘ಅದು ಪದಗಳಲ್ಲಿ ಹೇಳಲಾಗದಂಥ ಆನಂದ, ಸಂತೃಪ್ತಿ’ ಎಂದರು. ‘‘ನಾವು ನಮ್ಮ ಪರೀಕ್ಷೆ ಬರೆದು 90 ಅಂಕ ಪಡೆದರೂ ಅಷ್ಟು ಖುಷಿ ಆಗಲ್ಲ. ಆದರೆ, ಬೇರೆಯವರ ಪರೀಕ್ಷೆ ಬರೆದು ಅವರು ಜಸ್ಟ್​ಪಾಸ್ ಆಗಿದ್ದಾರೆಂದರೂ ಅದೇನೋ ಅವರ್ಣನೀಯ ಸಂತೃಪ್ತಿ ನಮ್ಮಲ್ಲಿ ಆವರಿಸಿಕೊಳ್ಳುತ್ತದೆ. ನನ್ನ ಪರೀಕ್ಷೆಯ ಹೊತ್ತಿಗೂ ನಾನು ಅಷ್ಟು ಟೆನ್ಶನ್ ಮಾಡ್ಕೊಂಡಿರಲಿಲ್ಲ. ಆದರೆ, ಅಶ್ವಿನ್ ಪರೀಕ್ಷೆ ಬರೆಯುವಾಗ ತುಂಬ ಭಯವಿತ್ತು. ಏಕೆಂದರೆ, ಅದೊಂದು ದೊಡ್ಡ ಜವಾಬ್ದಾರಿ. ನಮ್ಮಿಂದ ತಪ್ಪುಗಳು ಆಗಬಾರದು ಎಂಬುದು. ಆಕಸ್ಮಾತ್, ಸ್ಕ್ರೈಬ್ ತಪ್ಪು ಬರೆದುಬಿಟ್ಟರೆ ಅನ್ಯಾಯವಾಗಿ ಅವರ ಅಂಕಗಳನ್ನು ಕಿತ್ತುಕೊಂಡ ಹಾಗೆ ಆಗುತ್ತದೆ. ಅಶ್ವಿನ್ ಹಾಗೂ ನಾನು ಉತ್ತಮ ಗೆಳೆಯರಾಗಿರುವುದರಿಂದ ಪರೀಕ್ಷೆ ಮುನ್ನವೇ ಸಾಕಷ್ಟು ತಯಾರಿ ನಡೆಸುತ್ತಿದ್ದೇವು. ಅಶ್ವಿನ್ ಕೂಡ ನನಗೆ ಸಲಹೆ-ಸೂಚನೆಗಳನ್ನು ಕೊಡುತ್ತಿದ್ದ. ಹಾಗಾಗಿ, ನನಗೆ ಆತನ ಇಂಜಿನಿಯರಿಂಗ್ ಪರೀಕ್ಷೆ ಬರೆಯಲು ಸಾಧ್ಯವಾಯಿತು. ಅಲ್ಲದೆ, ಬರೀ ಇದೊಂದು ಕ್ರಿಯೆಯಲ್ಲ. ಭಾವನಾತ್ಮಕ ಬಂಧ ಕೂಡ. ನಾವು ಪರೀಕ್ಷೆ ಬರೆದವರ ಫಲಿತಾಂಶ ಬಂದಾಗ ಅವರಿಗಿಂತಲೂ ಹೆಚ್ಚು ಖುಷಿ ನಮಗಾಗುತ್ತದೆ. ಅಲ್ಲದೆ, ನಮ್ಮೊಳಗಿನ ಆತ್ಮವಿಶ್ವಾಸವನ್ನೂ ಅದು ಜಾಗೃತಗೊಳಿಸುತ್ತದೆ. ನಾವು ಬೇರೆಯವರಿಗೆ ನೆರವಾಗಬಹುದು ಎಂಬ ಅರಿವನ್ನು ತುಂಬುತ್ತದೆ’’ ಎನ್ನುವ ಭರತ್ ಈಗಲೂ ಅಗತ್ಯ ಬಿದ್ದಲ್ಲಿ ಸ್ಕ್ರೈಬ್ ಆಗಿ ತೆರಳುತ್ತಾರೆ. ಅಷ್ಟೇ ಅಲ್ಲ, ಈ ಕುರಿತು ಗೊಂದಲ, ಅನುಮಾನಗಳಿದ್ದಲ್ಲಿ ಕಾರ್ಯಾಗಾರ ನಡೆಸಿ ಸೂಕ್ತ ಮಾಹಿತಿ ನೀಡಲೂ ಸಿದ್ಧರಿದ್ದಾರೆ. ‘ಯಾವುದೇ ಸಮಯವಾಗಿರಲಿ ನಾನು, ನನ್ನ ಗೆಳೆಯರು ಸ್ಕ್ರೈಬ್ ಆಗಿ ತೆರಳಲು ಸಿದ್ಧ. ಏಕೆಂದರೆ, ಅದು ನೀಡುವ ಖುಷಿಗಿಂತ ಅಮೂಲ್ಯವಾದದ್ದು ಯಾವುದಿಲ್ಲ’ ಎನ್ನುವ ಭರತ್​ರ (98451-37450) ಉತ್ಸಾಹ ಹಾಗೂ ಕಾಳಜಿ ಶ್ಲಾಘನೀಯ.

ಅಶ್ವಿನ್ ಸಲಹೆ ಬೇಕೆ?: ಸ್ಕ್ರೈಬ್ ನೆರವಿನಿಂದ ಪರೀಕ್ಷೆ ಬರೆದಿರುವ ಅಶ್ವಿನ್ ಕಾರ್ತಿಕ್ ಈ ನಿಟ್ಟಿನಲ್ಲಿ ಸ್ಕ್ರೈಬ್​ಗಳಿಗೆ ತಯಾರು ಮಾಡುವಲ್ಲಿ ಎತ್ತಿದ ಕೈ. ಪರೀಕ್ಷೆ ಬರೆಯುವವರಿಗೆ ಅನುಮಾನ, ಸಂದೇಹಗಳಿದ್ದಲ್ಲಿ ಅವರನ್ನು [email protected]ಗೆ ಮಿಂಚಂಚೆ ಮೂಲಕ ಸಂರ್ಪಸಬಹುದು.

ನಿಯಮಗಳು ಸರಳಗೊಳ್ಳಲಿ: ಕೇಂದ್ರ ಸರ್ಕಾರ 2013ರ ಫೆಬ್ರವರಿಯಲ್ಲೇ ಸ್ಕ್ರೈಬ್​ಗೆ ಸಂಬಂಧಪಟ್ಟಂತೆ ಕೆಲ ನಿಯಮಗಳನ್ನು ಸರಳಗೊಳಿಸಿದ್ದು, ದೇಶಾದ್ಯಂತ ಏಕಮಾದರಿಯಲ್ಲಿ ಅದು ಅನುಷ್ಠಾನವಾಗಬೇಕು ಎಂದು ಹೇಳಿದೆ. ಆದರೆ, ಕರ್ನಾಟಕದಲ್ಲಿ ಈ ನಿಯಮಗಳು ಇನ್ನೂ ಪೂರ್ತಿಯಾಗಿ ಜಾರಿಯಾಗದೆ ಇರುವುದರಿಂದ ಪರೀಕ್ಷಾರ್ಥಿಗಳು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದು ತಪ್ಪಬೇಕು ಎನ್ನುತ್ತಾರೆ ಶಿರಸಿಯ ಹವ್ಯಾಸಿ ಬರಹಗಾರ ಅಕ್ಷತ್ ಹೆಗಡೆ. ಅಂಗವೈಕಲ್ಯಕ್ಕೆ ಬೆದರದೆ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಯನ್ನು ಸಹಾಯಕರ ನೆರವಿನಿಂದ ಬರೆದಿರುವ ಅಕ್ಷತ್ ಸ್ಕ್ರೈಬ್​ಗಳಿಂದ ಪರೀಕ್ಷೆಯಲ್ಲಿ ತುಂಬ ಅನೂಕುಲವಾಗುತ್ತದೆ. ಆಂಗವಿಕಲರಿಗೆ ಮಾಡುವ ನೆರವಿನಲ್ಲಿ ಇದಕ್ಕೆ ಮೊದಲ ಸ್ಥಾನ ಸಿಗಬೇಕು ಎನ್ನುತ್ತಾರೆ.

ನಮ್ಮ ಪರೀಕ್ಷೆಗಳನ್ನೇನೋ ನಾವು ಸುಲಭವಾಗಿ ಬರೆದುಬಿಡುತ್ತೇವೆ. ಆದರೆ, ಅದಕ್ಕಿಂತಲೂ ಮಿಗಿಲಾದ ಖುಷಿ ದೊರೆಯುವುದು ಇಂಥವರಿಗೆ ನೆರವಾದಾಗ. ಅಂಗವೈಕಲ್ಯ ಹೊಂದಿರುವ ನಮ್ಮ ಸ್ನೇಹಿತರೋ, ಬಂಧುಬಳಗದವರೋ ಪರೀಕ್ಷೆ ಬರೆಯಲು ಸಹಾಯಕರಿಲ್ಲದೆ ಪರಿತಪಿಸುತ್ತಿರುವಾಗ ಆಗುವ ಸಂಕಟ, ತಳಮಳ ಎಂಥದ್ದು ಎಂಬುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಇದು ಪರೀಕ್ಷಾ ಸಮಯ. ಎಸ್​ಎಸ್​ಎಲ್​ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಸೇರಿದಂತೆ ಹಲವು ಪರೀಕ್ಷೆಗಳು ಒಂದಾದರೊಂದರಂತೆ ಬರುತ್ತಿದ್ದು, ಈ ಸಮಯದಲ್ಲಿ ಇಂಥವರಿಗೆ ನೆರವಾಗಿ, ಅವರು ಶೈಕ್ಷಣಿಕ ಹಾದಿಯಲ್ಲಿ ಮುಂದೆ ಸಾಗಲು ಸಹಕರಿಸೋಣ. ಆ ಮೂಲಕ ಸಂವೇದನೆಯ ಸಣ್ಣ ಜ್ಯೋತಿಯನ್ನು ಬೆಳಗೋಣ. ನೀವೇನಂತೀರಿ?

ಕೇಂದ್ರದ ನಿಯಮಗಳೇನು?

  • ಶೇಕಡ 40 ಅಥವಾ ಅದಕ್ಕಿಂತ ಹೆಚ್ಚು ಅಂಗವೈಕಲ್ಯ ಇದ್ದಲ್ಲಿ ಅಂಥವರಿಗೆ ಸ್ಕ್ರೈಬ್/ರೀಡರ್/ಲ್ಯಾಬ್ ಸಹಾಯಕನನ್ನು ಒದಗಿಸಬೇಕು.
  • ಪರೀಕ್ಷಾ ಅಭ್ಯರ್ಥಿಯೂ ಮೊದಲೇ ತನ್ನ ಸಹಾಯಕರನ್ನು ನಿಯೋಜಿಸಿಕೊಂಡು, ಸ್ಕ್ರೈಬ್ ಅರ್ಜಿಯ ಮೂಲಕ ಅವರ ಮಾಹಿತಿಯನ್ನು ಪರೀಕ್ಷಾ ಮಂಡಳಿಗೆ ತಲುಪಿಸಬೇಕು. ಆ ಬಳಿಕ ಪರೀಕ್ಷಾ ಮಂಡಳಿಯು ಪರಿಶೀಲಿಸಿ ಅಭ್ಯರ್ಥಿಗೆ ಸಹಾಯಕರನ್ನು ಒದಗಿಸುತ್ತದೆ.
  • ಬೇರೆ-ಬೇರೆ ಉತ್ತರ ಪತ್ರಿಕೆಗಳನ್ನು ಬರೆಯಲು (ವಿಶೇಷವಾಗಿ ಭಾಷೆಗಳಿಗೆ ಸಂಬಂಧಪಟ್ಟ) ಅಭ್ಯರ್ಥಿಯು ಒಬ್ಬರಿಗಿಂತ ಹೆಚ್ಚು ಸಹಾಯಕರನ್ನು ನಿಯೋಜಿಸಿಕೊಳ್ಳಲು ಅವಕಾಶವಿದೆ. ತೀರಾ ತುರ್ತು ಸಂದರ್ಭಗಳಲ್ಲಿ ಸಹಾಯಕರನ್ನು ಬದಲಿಸಿಕೊಳ್ಳಲು ಅವಕಾಶವಿದೆ.
  • ಬ್ರೖೆಲ್ ಲಿಪಿಯಲ್ಲಿ ಅಥವಾ ಕಂಪ್ಯೂಟರ್ ಮೂಲಕ ಇಲ್ಲವೆ ರೆಕಾರ್ಡೆಡ್ ಉತ್ತರಗಳ ಮೂಲಕವೂ ಪರೀಕ್ಷಾರ್ಥಿ ಪರೀಕ್ಷೆ ಎದುರಿಸಬಹುದಾಗಿದೆ.
  • ಪರೀಕ್ಷಾ ಅವಧಿ ಮೂರು ಗಂಟೆ ಇದ್ದಲ್ಲಿ ಒಂದು ಗಂಟೆ ಹೆಚ್ಚುವರಿ ಅವಧಿ ನೀಡಲಾಗುವುದು.

Leave a Reply

Your email address will not be published. Required fields are marked *