ನೀರ್ ತರಾಕ ಹೋದ್ರ ದೂರ ಸರೀತಿದ್ರು!

ಮರಿದೇವ ಹೂಗಾರ ಹುಬ್ಬಳ್ಳಿ

ವಿಲನ್ ಪಾತ್ರ ಮಾಡಿ ಮಾಡಿ ಹೆಂಗಾಗಿತ್ತು ಅಂದ್ರ. ನಾನು ಬೋರ್​ವೆಲ್​ಗೆ ನೀರ್ ತರಾಕ ಹೋದ್ರ, ಹೆಣ್ಮಕ್ಳು ದೂರ ಸರೀತಿದ್ರು. ‘ಯಾಕ್ಬೇ’ ಅಂತ ನಾನಂದ್ರ, ‘ಇಲ್ರೀ ಅಣ್ಣಾರ, ನೀವ ಮೊದ್ಲ್ ನೀರ್ ತುಂಬ್ರಿ ಅಂತಿದ್ರು…! ತಾವು ಅಭಿನಯಿಸಿದ ವಿಲನ್ ಪಾತ್ರಗಳ ಪರಿಣಾಮಗಳ ಕುರಿತು ನಟ ಸತ್ಯಜಿತ್ ‘ವಿಜಯವಾಣಿ’ಯೊಂದಿಗೆ ಅನುಭವ ಹಂಚಿಕೊಂಡಿದ್ದು ಹೀಗೆ..

ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪ ನಮ್ಮೂರು. ನನ್ನ ಮೂಲ ಹೆಸರು ಸೈಯದ್ ನಿಜಾಮುದ್ದಿನ್. ನಮ್ಮ ಕುಟುಂಬದವರು ಮೂಲತಃ ಕಲಾವಿದರಲ್ಲ. ದೊಡ್ಡಾಟ, ನಾಟಕ ನಡೆದಿದ್ದನ್ನು ನೋಡಿ ಎಲ್ಲರೆದುರಿಗೆ ಪ್ರದರ್ಶಿಸುತ್ತಿದ್ದೆ. ಗಾರೆ ಕೆಲಸ, ಆಟೋ ಚಾಲಕ ಸೇರಿ ಇತರೆ ಕೆಲಸ ಮಾಡುತ್ತಿದ್ದೆ. ಕೆಎಸ್​ಆರ್​ಟಿಸಿಯಲ್ಲಿ ಚಾಲಕ ವೃತ್ತಿಯೂ ಆರಂಭಿಸಿದೆ. ಆಗ ನನಗೆ ಸಿಗುತ್ತಿದ್ದದ್ದು ಬರೀ 400 ರೂ. ಸಂಬಳ. ಹಿಂದಿಯ ‘ಅಂಕುಶ್’ ಸಿನಿಮಾದಲ್ಲಿ ಖಳ ನಟನಾಗಿ ಅಭಿನಯಿಸಿದೆ. ಅದರಲ್ಲಿ ಹೀರೋ ನಾನಾ ಪಾಟೇಕರ್ ನಟಿಸಿದ್ದರು. ನನ್ನ ನಟನೆಯನ್ನ ಅವರು ಮೆಚ್ಚಿದರು. ಆಗ ನಿರ್ದೇಶಕರು 80 ಸಾವಿರ ರೂ. ಕೊಡುವುದಾಗಿ ಹೇಳಿ ಅಡ್ವಾನ್ಸ್ 20 ಸಾವಿರ ರೂ. ಕೊಟ್ಟರು. ಒಂದು ರೀತಿಯಲ್ಲಿ ನನಗೆ ಗಾಳಿಯಲ್ಲಿ ತೇಲಿದ ಅನುಭವ. 400 ರೂ.ಗೆ ದುಡಿಯುತ್ತಿದ್ದವನಿಗೆ ಹೇಗಾಗಬೇಡ’ ಎಂದು ಮುಖ ಅರಳಿಸಿದರು. ಸಾಧನೆಯ ಹಿಂದೆ ತನ್ನ ಗೆಳೆಯ ಯುಸೂಫ್ ಖಾನ್ ಇದ್ದ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

‘ಒಟ್ಟು 658 ಚಲನಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಹಿಂದಿಯ ‘ಅಂಕುಶ್’ ಸಿನಿಮಾವೂ ಒಂದು. ವಜ್ರಮುನಿ, ಧೀರೇಂದ್ರಗೋಪಾಲ್, ಸುಧೀರ್ ಸೇರಿ ಇತರರ ಸಮಕಾಲೀನ ವಿಲನ್ ನಟ ನಾನು. ರಾಜ್​ಕುಮಾರ್, ಅನಂತನಾಗ್, ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್ ಸೇರಿ ಇತರೆ ನಟರೊಟ್ಟಿಗೆ ವಿಲನ್ ಆಗಿ ಅಭಿನಯಿಸಿದ್ದೇನೆ. ಅಭಿನಯ ಎಲ್ಲರಿಗೂ ಒಲಿಯುವುದು ಸುಲಭವಲ್ಲ. ಅದು ರಕ್ತಗತವಾಗಿ ಬರಬೇಕೆಂದಿಲ್ಲ. ಪರಕಾಯ ಪ್ರವೇಶ ಇರಬೇಕು. ಕಲಿಕೆ ನಿರಂತರವಾಗಿದ್ದರ ಫಲವಾಗಿ ಜನಮಾನಸದಲ್ಲಿ ನಾನು ಉಳಿದಿದ್ದೇನೆ’ ಎಂದು ಸ್ಮರಿಸಿದರು.

ಸಂತೋಷದಿಂದ ಜೀವನ ಕಳೆಯಲು ನಿರ್ಧಾರ

65 ವರ್ಷ ಜೀವನವನ್ನು ಸುಂದರವಾಗಿ ಕಂಡಿದ್ದೇನೆ. ಆದರೆ, ಗ್ಯಾಂಗ್ರಿನ್ ಆಗಿ ಎಡಗಾಲು ಕಳೆದುಕೊಂಡಿದ್ದೇನೆ. ಇನ್ನೆಷ್ಟು ದಿನ ಬದುಕು ತ್ತೀನೋ ಗೊತ್ತಿಲ್ಲ. ಸಂತೋಷ ದಿಂದ ಜೀವನ ಕಳೆಯಲು ನಿರ್ಧರಿಸಿದ್ದೇನೆ. ಕುಟುಂಬವೂ ನನಗೆ ಧೈರ್ಯ ತುಂಬುತ್ತಿದೆ ಎಂದು ಸತ್ಯಜಿತ್​ಹೇಳಿದರು.

ಕಲಾವಿದರ ಸಂಘ ಸಹಾಯ ಮಾಡಲಿಲ್ಲ

ಕರ್ನಾಟಕ ಕಲಾವಿದರ ಸಂಘದ ಅಧ್ಯಕ್ಷ, ನಟ ಅಂಬರೀಷ್ ಅವರು ನನಗೆ ಕಾಲು ಹೋಗಿದೆ ಎಂದು ಗೊತ್ತಾಗಿದ್ದರೂ ಆರ್ಥಿಕ ಸಹಾಯ ಮಾಡಲಿಲ್ಲ. ಪುನೀತ್​ರಾಜ್​ಕುಮಾರ್, ಶಿವರಾಜ್​ಕುಮಾರ್, ಸುದೀಪ್, ಉಪೇಂದ್ರ ಸೇರಿ ಇತರರು ಆರ್ಥಿಕ ಬಲ ತುಂಬಿದರು. ಹಿಂದಿನ ಕಾಂಗ್ರೆಸ್ ಸರ್ಕಾರ ಆರ್ಥಿಕ ನೆರವು ನೀಡಿತು. ಇದನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ ಎನ್ನುತ್ತಾರೆ ಸತ್ಯಜಿತ್. ನೆರವು ನೀಡಲು ಇಚ್ಛಿಸುವವರು 9448061424 ಸಂರ್ಪಸಿ.

ಜರ್ಮನಿಯಲ್ಲಿ ತಯಾರಿಸಿದ ಕೃತಕ ಕಾಲು ಜೋಡಣೆ ಮಾಡಿಸಿಕೊಂಡರೆ ಮತ್ತೆ ಅಭಿನಯಿಸಬಲ್ಲೆ. ಇದಕ್ಕೆ 3 ಲಕ್ಷ 80 ಸಾವಿರ ರೂ. ಖರ್ಚಾಗುತ್ತದೆ. ಈ ಕಾಲು ಹಾಕಿಸಿಕೊಂಡರೆ ಮಡಚಲು ತಿರುವಲು ಬರುತ್ತದೆ ಎಂದು ಹೇಳಿದ್ದಾರೆ. ಜೈಪುರದ ಕೃತಕ ಕಾಲು ಹಾಕಿಸಿಕೊಂಡರೆ ಹಾಗೆ ಮಾಡಲು ಬರುವುದಿಲ್ಲ.

| ಸತ್ಯಜಿತ್ ನಟ