ನೀರೆಯರಿಂದ ನದಿ ಸ್ವಚ್ಛ

ಸಂಗ್ರುನ್ ಹಳ್ಳಿಯ ಮಹಿಳೆಯರು ತಮ್ಮ ಮನೆಯನ್ನು ಸ್ವಚ್ಛ ಮಾಡಿದಂತೆ ಊರನ್ನೂ ಕಸಮುಕ್ತ ಮಾಡಿದ್ದಾರೆ. ಊರಿನಗುಂಟ ಹರಿಯುವ ನದಿಗೆ ಯಾವುದೇ ಮಲಿನ ವಸ್ತು, ಪ್ಲಾಸ್ಟಿಕ್, ಚರಂಡಿ ನೀರು ಸೇರದಂತೆ ಜಾಗೃತಿ ವಹಿಸಿದ್ದಾರೆ. ಇಲ್ಲಿನ ಮಹಿಳೆಯರು ಪೊರಕೆ ಹಿಡಿದು ಹೊರಟರೆಂದರೆ ಇಡೀ ಊರು ಸ್ವಚ್ಛ.

ಹರಿಯುವ ನದಿಯನ್ನು ‘ದೊಡ್ಡ ಚರಂಡಿ’ಯನ್ನಾಗಿ ಮಾಡಿರುವುದು ನಾಗರಿಕ ಸಮಾಜದ ಹೆಗ್ಗಳಿಕೆ. ನೀರಿನ ಸನಿಹದಲ್ಲೇ ಜನಜೀವನ ರೂಪುಗೊಂಡಿದೆಯಾದರೂ ಅದರ ಮಹತ್ವ ಅರಿವಾಗದ ಮನುಷ್ಯ ಅದನ್ನೇ ಕಲುಷಿತಗೊಳಿಸಿದ್ದಾನೆ. ದೊಡ್ಡ ನಗರಗಳ ಮಾತು ಬಿಡಿ, ಚಿಕ್ಕಪುಟ್ಟ ಊರಿನ ಮಧ್ಯವೂ ನದಿ ಹರಿಯುತ್ತಿದ್ದರೆ ಅದನ್ನು ಎಷ್ಟು ಸಾಧ್ಯವೋ ಅಷ್ಟು ಮಲಿನಗೊಳಿಸಲಾಗುತ್ತದೆ. ಊರಿನ ಚರಂಡಿ ನೀರು, ಕಾರ್ಖಾನೆಗಳ ಮಲಿನ ನೀರು ಸೇರಿದಂತೆ ಮಾನವ ತ್ಯಾಜ್ಯ ಎಲ್ಲವನ್ನೂ ನೀರಿಗೆ ಬಿಟ್ಟು ಅದನ್ನು ಬಳಸಲು ಯೋಗ್ಯವಿಲ್ಲದಂತೆ ಮಾಡಲಾಗುತ್ತದೆ. ಆದರೆ, ಮಹಾರಾಷ್ಟ್ರದ ಈ ಗ್ರಾಮ ಮಾತ್ರ ಇದಕ್ಕೆ ಅಪವಾದ.

ಪುಣೆಯಿಂದ 27 ಕಿಮೀ ದೂರದಲ್ಲಿರುವ ಸಂಗ್ರುನ್ ಎನ್ನುವ ಗ್ರಾಮ ನದಿನೀರಿನ ಸ್ವಚ್ಛತೆ ಕಾಪಾಡಿಕೊಳ್ಳುವ ವಿಚಾರದಲ್ಲಿ ಮಾದರಿಯಾಗಿದೆ. ಇದು ಮೊಸೆ, ಮುಥಾ ಹಾಗೂ ಅಂಬಿ ಈ ಮೂರು ನದಿಗಳು ಸೇರುವ ಜಾಗವಾಗಿದ್ದರಿಂದ ‘ತ್ರಿವೇಣಿ ಸಂಗಮ’ ಎಂದೂ ಗ್ರಾಮಸ್ಥರು ಹೇಳಿಕೊಳ್ಳುತ್ತಾರೆ. ಈ ಊರಿನಲ್ಲಿ ನದಿಗಳು ಒಂದಾಗಿ ಮುಂದೆ ಪುಣೆ ನಗರದತ್ತ ಸಾಗುತ್ತವೆ. ಮುಂದೆ ಮುಲಾ ನದಿಯೂ ಸೇರಿ ಇದರ ಹೆಸರು ಮುಲಾ-ಮುಥಾ ಎಂದಾಗಿದೆ. ಸಂಗ್ರುನ್ ಊರಿನಲ್ಲಿ 200ಕ್ಕೂ ಅಧಿಕ ಮನೆಗಳಿದ್ದು, 1200ಕ್ಕೂ ಹೆಚ್ಚು ಜನರಿದ್ದಾರೆ. ದೇಶದ ಉಳಿದ ಭಾಗಗಳಂತೆಯೇ ಇಲ್ಲಿನವರೂ ಇದ್ದರೆ ಈ ನದಿಗಳು ಇನ್ನಷ್ಟು ಮಲಿನಗೊಂಡು ನಗರದತ್ತ ಹರಿಯಬೇಕಿತ್ತು. ಆದರೆ, ಇಲ್ಲಿನ ಬಹುತೇಕರು ನೀರಿನ ಸ್ವಚ್ಛತೆ ವಿಚಾರದಲ್ಲಿ ಅಕ್ಷರಸ್ಥರು. ಇಡೀ ಊರನ್ನು ಕಸಮುಕ್ತ ಮಾಡುವ ಜತೆಗೆ, ನದಿಗೆ ಯಾವುದೇ ರೀತಿಯ ಮಾಲಿನ್ಯಕಾರಕ ವಸ್ತು ಸೇರದಂತೆ ಜಾಗೃತಿ ವಹಿಸುತ್ತಾರೆ. ಜಲಸಂರಕ್ಷಣೆಯ ಈ ಕಿಡಿ ಹೊತ್ತಿರುವುದು ಮಹಿಳೆಯರ ಮೂಲಕ ಎನ್ನುವುದು ಹೆಮ್ಮೆಯ ಸಂಗತಿ. ಮುಥಾ ಹಾಗೂ ಮುಲಾ ನದಿಗಳು ಒಂದಾಗಿ ಪುಣೆ ಪ್ರವೇಶಿಸುತ್ತವೆ. ಎರಡೂ ಮಲಿನವಾಗಿವೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿರುವಂತೆ ದೇಶದಲ್ಲಿ ಗರಿಷ್ಠ ಮಟ್ಟದಲ್ಲಿ ಮಲಿನವಾಗಿರುವ 302 ನದಿಗಳ ಪೈಕಿ ಮುಲಾ-ಮುಥಾ ಹೆಸರೂ ಇದೆ. ಚರಂಡಿ ನೀರು, ಕೈಗಾರಿಕಾ ತ್ಯಾಜ್ಯ, ಘನ ತ್ಯಾಜ್ಯಗಳಿಂದ ಹಾಗೂ ಬಯಲುಶೌಚದಿಂದ ಮುಲಾ-ಮುಥಾ ನೀರು ಅತಿಯಾಗಿ ಮಲಿನವಾಗಿದೆ. ಆದರೆ, ಸಂಗ್ರುನ್ ಊರಿನ ಜನರು ತಮ್ಮ ಹಳ್ಳಿಗುಂಟ ಸಾಗುವ ಮುಥಾ ನದಿಯ ನೀರನ್ನು ಸ್ವಚ್ಛವಾಗಿಸಲು ಪಣ ತೊಟ್ಟರು. ಈ ಕಾರ್ಯಕ್ಕೆ 250-300 ಮಹಿಳೆಯರು ಸಿದ್ಧರಾದರು. ನದಿಗೆ ಸೇರುವ ಎಲ್ಲ ರೀತಿಯ ತಾಜ್ಯವನ್ನು ನಿಲ್ಲಿಸಲು ಕಂಕಣಬದ್ಧರಾದರು. ಇದೀಗ, ಪ್ರತಿ ಭಾನುವಾರ ಸುಮಾರು 300 ಮಹಿಳೆಯರ ತಂಡ ನದಿಯನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ. ಒಣಕಸವನ್ನು ಪ್ರತ್ಯೇಕವಾಗಿಸಿದರು, ಹಸಿಕಸವನ್ನು ಗ್ರಾಮ ಪಂಚಾಯಿತಿ ಸಂಗ್ರಹಿಸುವಂತೆ ಮಾಡಿದರು. ಪ್ಲಾಸ್ಟಿಕ್ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಯೇ ಸಂಗ್ರಹಿಸಿ ಪುಣೆ ಮೂಲಕ ಕ್ಲೀನ್ ಗಾರ್ಬೆಜ್ ಮ್ಯಾನೇಜ್​ವೆುಂಟ್ ಎನ್ನುವ ಕಂಪನಿಗೆ ಮಾರಾಟ ಮಾಡುತ್ತದೆ. ಈ ಕಂಪನಿ ಕೆಜಿಗೆ ಐದು ರೂ. ನೀಡಿ ಪ್ಲಾಸ್ಟಿಕ್ ತ್ಯಾಜ್ಯ ಖರೀದಿಸುತ್ತಿದೆ. ಪ್ರತಿಮನೆಗಳಿಂದ ಎಷ್ಟು ಕಸ ಬಂದಿದೆ ಎನ್ನುವ ಲೆಕ್ಕಾಚಾರ ಇಟ್ಟುಕೊಂಡು, ಮಾರಾಟದಿಂದ ಬಂದ ಹಣವನ್ನು ಅವರಿಗೆ ನೀಡಲಾಗುತ್ತದೆ. ಹಳ್ಳಿಗರಿಂದ ಪಡೆದ ಪ್ಲಾಸ್ಟಿಕ್ ಕಸವನ್ನು ಈ ಕಂಪನಿ ಡಸ್ಟ್​ಬಿನ್, ಪಾಟ್​ಗಳು ಹಾಗೂ ನೀರಾವರಿ ಪೈಪ್​ಗಳನ್ನಾಗಿ ಪರಿವರ್ತಿಸುತ್ತಿದೆ.

ಮೊದಲು ಹಳ್ಳಿ ಹೀಗಿರಲಿಲ್ಲ

‘ಸಂಗ್ರುನ್ ಮೊದಲು ದೇಶದ ಬಹುತೇಕ ಹಳ್ಳಿಗಳಂತೆಯೇ ಗಲೀಜಾಗಿತ್ತು. ಕಂಡಕಂಡಲ್ಲಿ ಕೊಳಕು ನೀರು, ಕಸದಿಂದ ತುಂಬಿತ್ತು. ಸಂಘಮಿತ್ರ ಸಂಸ್ಥೆಯ ಉತ್ತೇಜನದಿಂದಾಗಿ ನದಿಯನ್ನು ಸ್ವಚ್ಛಗೊಳಿಸಲು ನಿರ್ಧರಿಸಲಾಯಿತು’ ಎಂದು ಈ ಸ್ವಚ್ಛತಾ ಕಾರ್ಯಕ್ರಮದ ಪ್ರಮುಖ ರೂವಾರಿ ಸುನಿಲ್ ಭೊಕಾರೆ ಹೇಳುತ್ತಾರೆ. ‘ಸ್ವಚ್ಛತೆ ಹಾಗೂ ಉತ್ತಮ ಆರೋಗ್ಯದ ಕುರಿತು ಮಕ್ಕಳಿಗೆ ನಾವೇ ಕಲಿಸಬೇಕು. ಇದು ಸಹ ಇಂದಿನ ಅಗತ್ಯ. ಮೊದಲೆಲ್ಲ ಮಕ್ಕಳು ಪ್ಲಾಸ್ಟಿಕ್ ಕಸವನ್ನು ಎಲ್ಲೆಲ್ಲೂ ಬಿಸಾಕುತ್ತಿದ್ದರು. ಈಗ ಅವರಿಗೂ ಅರಿವಾಗಿದೆ. ಶಾಲೆ-ಕಾಲೇಜುಗಳಲ್ಲಿ ಇದಕ್ಕಾಗಿ ಜಾಗೃತಿ ಕಾರ್ಯಕ್ರಮ ಮಾಡಿದೆವು. ಜಂಕ್​ಫುಡ್​ಗಳ ಬಗೆಗೂ ಅರಿವು ಮೂಡಿಸಿದ್ದೇವೆ’ ಎನ್ನುತ್ತಾರೆ ಈ ಕಾರ್ಯಕ್ರಮದಲ್ಲಿ ಸತತವಾಗಿ ಪಾಲ್ಗೊಳ್ಳುವ ವಿಮಲ್​ತಾಯಿ.

ಗಟಾರಗಳಲ್ಲಿ ಹರಿಯುವ ನೀರನ್ನು ಸಹ ಶುದ್ಧೀಕರಿಸುವ ನಿಟ್ಟಿನಲ್ಲಿ, ಸೋಕ್ ಪಿಟ್ ಅಳವಡಿಸುವ ವಿಚಾರ ಹೊಂದಿದ್ದಾರೆ ಇಲ್ಲಿನ ಮಹಿಳೆಯರು. ಚರಂಡಿ ನೀರಿಗೆ ತಡೆ ಹಾಕಿದರೆ ಗ್ರಾಮ ಇನ್ನಷ್ಟು ಶುದ್ಧಿಯಾಗುತ್ತದೆ ಎನ್ನುತ್ತಾರೆ. ಇತ್ತೀಚೆಗೆ ಈ ಗ್ರಾಮ ಬಯಲು ತ್ಯಾಜ್ಯ ಮುಕ್ತವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪ್ರತಿ ಮನೆಯಲ್ಲೂ ಶೌಚಗೃಹವಿದ್ದು, ಇದರ ನಿರ್ವಣದಲ್ಲಿಯೂ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ.

ಸುಗ್ರುನ್ ಊರಿನ ಇನ್ನೊಂದು ವಿಶೇಷತೆಯೆಂದರೆ, ಇಲ್ಲಿನ ಐವತ್ತು ಕುಟುಂಬಗಳು ಮೀನುಗಾರಿಕೆಯನ್ನು ನೆಚ್ಚಿಕೊಂಡಿವೆ. ಇಲ್ಲಿ ಹರಿಯುವ ಮುಥಾ ನದಿಯಲ್ಲೇ ಮೀನುಗಾರಿಕೆ ನಡೆಸಲಾಗುತ್ತದೆ. ಅಂದರೆ, ಈ ಭಾಗದ ನೀರು ಅಷ್ಟು ಶುದ್ಧವಾಗಿದೆ.

ಸುಗ್ರುನ್ ಗ್ರಾಮದ ಸರ್​ಪಂಚ್ ಸೀತಾಬಾಯಿ ಮಾನ್​ಕರ್. ‘ಮುಥಾ ನದಿಯ ದಡದಲ್ಲಿರುವ ಗ್ರಾಮ ನಮ್ಮದೊಂದೇ ಅಲ್ಲ. ಇತರ ಹಳ್ಳಿಗಳ ಜನರೂ ನಮ್ಮಂತೆಯೇ ನದಿಗೆ ಮಾಲಿನ್ಯಕಾರಕ ವಸ್ತುಗಳನ್ನು ಸೇರ್ಪಡೆಗೊಳಿಸದಿದ್ದರೆ ನೀರು ಎಷ್ಟು ನಿರ್ಮಲವಾಗಿರುತ್ತಿತ್ತು. ಹೀಗಾಗಿ, ನಮ್ಮ ಮಾದರಿಯನ್ನು ಅವರಿಗೂ ಪರಿಚಯಿಸಲು ಉದ್ದೇಶಿಸಿದ್ದೇವೆ. ಪುಣೆಗೆ ಅತಿ ಸಮೀಪದಲ್ಲಿರುವ ಊರುಗಳಲ್ಲಂತೂ ಈ ನದಿ ಚರಂಡಿಯಂತಾಗಿದೆ. ಅವರೂ ಏನಾದರೂ ಮಾಡಬೇಕಿದೆ’ ಎನ್ನುವ ನಿಲುವು ಸೀತಾಬಾಯಿ ಅವರದ್ದು. ಇದು ಕೇವಲ ಪುಣೆ ಅಥವಾ ಮುಥಾ ನದಿಯ ಕಥೆಯಷ್ಟೇ ಅಲ್ಲ. ನದಿಯೊಂದು ಯಾವುದೇ ಊರು, ನಗರ, ಪಟ್ಟಣಗಳನ್ನು ದಾಟಿ ಹೋಗುವ ಸಮಯದಲ್ಲಿ ಮಲಿನವಾಗಿರುತ್ತದೆ. ಅದನ್ನು ತಡೆಗಟ್ಟಲು ಸ್ಥಳೀಯರೇ ನಿಲ್ಲಬೇಕು, ಅಷ್ಟೇ ಅಲ್ಲ, ಅಲ್ಲಿ ಮಹಿಳೆಯರು ಸಕ್ರಿಯವಾಗಿರಬೇಕು.

ಸುಮನಾ

Leave a Reply

Your email address will not be published. Required fields are marked *