ನೀರು ಹರಿದರೂ ಗದ್ದೆಗಳು ಭಣಭಣ!

ಕಾರವಾರ: ಹಲವೆಡೆ ನೀರಿಲ್ಲದೇ ಕೃಷಿ ಭೂಮಿಗಳು ಪಾಳು ಬಿದ್ದಿವೆ. ಆದರೆ, ಇಲ್ಲಿ ಮಾತ್ರ ದಿನವೂ ನೀರು ಹರಿದರೂ ಗದ್ದೆಗಳು ಮಾತ್ರ ನಳನಳಿಸುತ್ತಿಲ್ಲ!

ಕೃಷಿಯ ಬಗ್ಗೆ ಸ್ಥಳೀಯರ ನಿರಾಸಕ್ತಿ ಹಾಗೂ ಯೋಜನೆಯ ಕಾಲುವೆಗಳು ಎಲ್ಲೆಡೆ ತಲುಪದ ಕಾರಣ ಗೋಟೆಗಾಳಿ ಏತ ನೀರಾವರಿ ನಿರೀಕ್ಷಿತ ಫಲ ನೀಡಿಲ್ಲ.

1995-96 ನೇ ಸಾಲಿನಲ್ಲಿ ಆಗಿನ ಪಿಡಬ್ಲ್ಯುಡಿ ವಿಭಾಗದಿಂದ 44 ಲಕ್ಷ ರೂ. ವೆಚ್ಚದಲ್ಲಿ ಗೋಟೆಗಾಳಿ ಏತ ನೀರಾವರಿ ಯೋಜನೆ ಜಾರಿ ಮಾಡಲಾಗಿತ್ತು. ಪಿಡಬ್ಲ್ಯುಡಿಯಿಂದ ಸಣ್ಣ ನೀರಾವರಿ ಇಲಾಖೆ ಪ್ರತ್ಯೇಕವಾದ ನಂತರ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು.

4 ತಾಸು ನೀರು: ಪಂಪ್ ಹೌಸ್​ನಿಂದ ಬಲದಂಡೆಗೆ 450 ಮೀಟರ್ ಹಾಗೂ ಎಡದಂಡೆಗೆ 375 ಮೀಟರ್ ಕಾಲುವೆ ನಿರ್ಮಾಣ ಮಾಡಲಾಗಿದೆ. ಕಾಳಿ ನದಿಯಿಂದ ನೀರನ್ನು ಪಕ್ಕದ ಸಣ್ಣ ಬಾವಿಗೆ ತಂದು, ಅಲ್ಲಿಂದ ತಲಾ 25 ಎಚ್​ಪಿಗಳ 3 ಪಂಪ್​ಗಳ ಮೂಲಕ ಕಾಲುವೆಗೆ ಹಾಯಿಸಲಾಗುತ್ತದೆ. ನೀರು ಕಾಲುವೆಯ ಮೂಲಕ ಗದ್ದೆಗಳಿಗೆ ಹರಿಯುತ್ತದೆ. ಸಣ್ಣ ನೀರಾವರಿ ಇಲಾಖೆಯಿಂದ ನೀರು ಬಿಡಲು ಗುತ್ತಿಗೆ ಆಧಾರದಲ್ಲಿ ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿದೆ. ಕಾಳಿ ನದಿ ನೀರಿನ ಉಬ್ಬರ, ಇಳಿತವನ್ನು ಆಧರಿಸಿ ಪ್ರತಿ ದಿನ ಸುಮಾರು ನಾಲ್ಕು ತಾಸು ನೀರು ಬಿಡಲಾಗುತ್ತದೆ. ಒಂದು ದಿನ ಬಲ ದಂಡೆಗೆ ಹಾಯಿಸಿದರೆ ಇನ್ನೊಂದು ದಿನ ಎಡ ದಂಡೆಗೆ.. ಹೀಗೆ ಪಾಳಿಯ ಮೇಲೆ ನೀರು ಬಿಡಲಾಗುತ್ತಿದೆ.

ಬಳಕೆಯಿಲ್ಲ: ಗೋಟೆಗಾಳಿ ಹಾಗೂ ಸುತ್ತಲಿನ ಗ್ರಾಮಗಳ 200 ಎಕರೆ ಕೃಷಿ ಭೂಮಿಗೆ ನೀರುಣಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಆದರೆ, ಸಾಕಷ್ಟು ಕಾಲುವೆಗಳನ್ನು ನಿರ್ಮಾಣ ಮಾಡದ ಕಾರಣ ಕೇವಲ 20 ರೈತರ 15ರಿಂದ 20 ಎಕರೆ ಕೃಷಿ ಭೂಮಿಗೆ ನೀರು ಹರಿಯುತ್ತಿದೆ.

ಕೃಷಿಯ ಬಗ್ಗೆ ನಿರಾಸಕ್ತಿ: ಗ್ರಾಮದಲ್ಲಿ ಹೆಚ್ಚಿನ ಕುಟುಂಬದ ಯುವಕರು ಊರಿನಲ್ಲಿಲ್ಲ. ಕೃಷಿ ಕೂಲಿಕಾರರು ಸಿಗುತ್ತಿಲ್ಲ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ. ಬೆಳೆದರೂ ಬೆಲೆಯಲ್ಲಿ ಸ್ಥಿರತೆ ಇಲ್ಲ. ಇದರಿಂದಾಗಿ ಹೆಚ್ಚಿನ ಕುಟುಂಬಗಳು ಜಮೀನನ್ನು ಪಾಳು ಬಿಟ್ಟಿವೆ. ಕೆಲವರು ಮಾತ್ರ ಮುಂಗಾರು ಸಂದರ್ಭದಲ್ಲಿ ಭತ್ತ ಬೆಳೆಯುತ್ತಾರೆ. ಹಿಂಗಾರಿನಲ್ಲಿ ನೀರು ಹರಿದರೂ ಗದ್ದೆಗಳಲ್ಲಿ ಮಾತ್ರ ಬೆಳೆ ಬರುತ್ತಿಲ್ಲ.

Leave a Reply

Your email address will not be published. Required fields are marked *