ನೀರು, ಮೇವಿನ ಸಮಸ್ಯೆ ನೀಗಿಸಿ

ಶಿರಹಟ್ಟಿ: ತಾಲೂಕಿನಲ್ಲಿ ಬರ ತಾಂಡವವಾಡುತ್ತಿರುವುದರಿಂದ ಪ್ರತಿ ಹಳ್ಳಿಯಲ್ಲೂ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಬಡ ಕೂಲಿ ಕಾರ್ವಿುಕರಿಗೆ ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಶಾಸಕ ರಾಮಣ್ಣ ಲಮಾಣಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಿಡಿಒಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಜರುಗಿದ ಬರ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕುಂದ್ರಳ್ಳಿ, ಸುಗ್ನಳ್ಳಿ, ಬನ್ನಿಕೊಪ್ಪ, ತಾರೀಕೊಪ್ಪ, ಅಕ್ಕಿಗುಂದ ಇತರ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ. ಅಲ್ಲದೆ, ಉದ್ಯೋಗ ಹುಡುಕಿಕೊಂಡು ಬಡ ಕೂಲಿಕಾರ್ವಿುಕರು ಗುಳೆ ಹೋಗದಂತೆ ಪ್ರತಿ ಗ್ರಾಮದಲ್ಲಿ ಅವರಿಗೆ ಉದ್ಯೋಗ ನೀಡಬೇಕು. ಜಾನುವಾರುಗಳ ರಕ್ಷಣೆಗೆ ತುರ್ತು ಮೇವು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಸಹಿಸುವುದಿಲ್ಲ’ ಎಂದು ತಾಕೀತು ಮಾಡಿದರು.

ಸಭೆಗೆ ಆಗಮಿಸದ ಶಿರಹಟ್ಟಿ ಪಪಂ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಶಾಸಕ ರಾಮಣ್ಣ ಲಮಾಣಿ ಸೂಚನೆ ನೀಡಿದರು. ‘ಮುಖ್ಯಾಧಿಕಾರಿಯವರು ತಮ್ಮಿಚ್ಚೆಯಂತೆ ಆಡಳಿತ ನಡೆಸುತ್ತಿದ್ದಾರೆ. ಯಾರಿಗೂ ಬೆಲೆ ಇಲ್ಲದಾಗಿದೆ ಅಂಥ ಅಧಿಕಾರಿಗಳು ಬೇಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಹಸೀಲ್ದಾರ್ ವೈ.ಎಸ್. ಗೋಣೆಣ್ಣವರ, ಜಿಲ್ಲಾ ಕೃಷಿ ನಿರ್ದೇಶಕ ಸಹದೇವ ಯರಗುಪ್ಪಿ, ದೇವಕ್ಕ ಲಮಾಣಿ, ತಾಪಂ. ಅಧ್ಯಕ್ಷೆ ಸುಶೀಲವ್ವ ಲಮಾಣಿ, ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಇತರರು ಇದ್ದರು.

ಬಿಡುಗಡೆಯಾಗದ ಕೂಲಿ ಹಣ: ತಾಲೂಕಿನಲ್ಲಿ ಡಿಸೆಂಬರ್ ಅಂತ್ಯದವರೆಗೆ ಎನ್​ಆರ್​ಇಜಿ ಯೋಜನೆಯಡಿ 6 ಲಕ್ಷಕ್ಕೂ ಅಧಿಕ ಮಾನವ ದಿನಗಳ ಕೆಲಸ ನೀಡಿ ಗುರಿ ಮೀರಿ ಸಾಧನೆ ಮಾಡಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾಗುವಲ್ಲಿ ತಡವಾಗಿದ್ದರಿಂದ ಕೂಲಿ ಕಾರ್ವಿುಕರ ಹಣ ಪಾವತಿಯಾಗಿಲ್ಲ. ಹಣ ಬಂದ ಕೂಡಲೇ ಶೀಘ್ರವೇ ವಿತರಣೆ ಮಾಡಲಾಗುತ್ತದೆ. ಪ್ರತಿ ಗ್ರಾಪಂವಾರು ಕೆಲಸ ಕಾರ್ಯಗಳಿಗೆ ಹೆಚ್ಚುವರಿ ಕ್ರಿಯಾಯೋಜನೆ ಸಿದ್ಧಪಡಿಸಿ 2.50 ಕೋಟಿ ರೂ.ಅನುದಾನಕ್ಕೆ ಜಿಪಂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಪಂ ಇಒ ಆರ್.ವೈ. ಗುರಿಕಾರ ಸಭೆಯಲ್ಲಿ ಮಾಹಿತಿ ನೀಡಿದರು.

ಸದಸ್ಯೆ-ಅಧಿಕಾರಿ ವಾಗ್ವಾದ: ಸಭೆಯಲ್ಲಿ ಮಾತನಾಡಿದ ಜಿಪಂ ಸದಸ್ಯೆ ರೇಖಾ ಅಳವಂಡಿ, ನಮ್ಮ ಕ್ಷೇತ್ರ ವ್ಯಾಪ್ತಿಯ ಬನ್ನಿಕೊಪ್ಪ, ಸುಗ್ನಳ್ಳಿ, ಬೆಳ್ಳಟ್ಟಿ, ಕಡಕೋಳ ಗ್ರಾಮಗಳಲ್ಲಿನ ನೀರಿನ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲು ಸಂಬಂಧಸಿದ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರೂ ಅವರು ಸ್ಪಂದಿಸಿಲ್ಲ ಎಂದು ದೂರಿದರು. ಇದರಿಂದ ಆಕ್ರೋಶಗೊಂಡ ಅಧಿಕಾರಿ ಬಾಬು ಪವಾರ, ‘ಮೇಡಂ ಇಲ್ಲಸಲ್ಲದ ಆರೋಪ ಮಾಡಬೇಡಿ. ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದೇವೆ’ ಎಂದರು. ನೋಡಲ್ ಅಧಿಕಾರಿ ದಿನೇಶ ಮಧ್ಯ ಪ್ರವೇಶಿಸಿ ವಾಗ್ವಾದಕ್ಕೆ ತೆರೆ ಎಳೆದರು.

ಅಧಿಕಾರಿಗಳು ತಾಲೂಕಿನ ಪ್ರತಿ ಗ್ರಾಮದಲ್ಲೂ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಸರ್ವ ರೀತಿಯಿಂದಲೂ ಕ್ರಮ ಕೈಗೊಳ್ಳಬೇಕು. ಚುನಾವಣೆ ಕರ್ತವ್ಯದ ನೆಪದಲ್ಲಿ ಯಾವುದೇ ಕಾರಣಕ್ಕೂ ಬರ ನಿರ್ವಹಣೆ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ತಾಳದೇ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ತಾಲೂಕಿನ ಗ್ರಾಪಂ.ವಾರು ಮೇವು ದಾಸ್ತಾನು ಮಾಡುವ ಕೇಂದ್ರಗಳನ್ನು ಪರಿಶೀಲಿಸಿ ಜಾನುವಾರುಗಳಿಗೆ ಮೇವು ಪೂರೈಸಬೇಕು. | ದಿನೇಶ, ತಾಲೂಕು ನೋಡಲ್ ಅಧಿಕಾರಿ