ನೀರಿಲ್ಲದೆ ಒಣಗಿದ ಬೇಸಿಗೆ ಶೇಂಗಾ

ಲಕ್ಷ್ಮೇಶ್ವರ: ಸತತ ಬರಗಾಲದಿಂದ ಅಂತರ್ಜಲಮಟ್ಟ ಕುಸಿದಿದ್ದು ಕೆರೆಕಟ್ಟೆಗಳು, ನದಿ ಹಳ್ಳಗಳು ಬರಿದಾಗಿ ಹಾಹಾಕಾರ ಸೃಷ್ಟಿಯಾಗುವ ಸ್ಥಿತಿ ನಿರ್ವಣವಾಗಿದೆ. ಈ ನಡುವೆ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ಕೈ ಸುಟ್ಟುಕೊಂಡಿದ್ದ ರೈತರು ಬೇಸಿಗೆ ಹಂಗಾಮಿನಲ್ಲಿ ಬೆಳೆದಿರುವ ಬೆಳೆಗಳಿಗೂ ನೀರಿಲ್ಲದಂತಾಗಿದೆ. ಅಂತರ್ಜಲ ಮಟ್ಟ ಕುಸಿದ ಪರಿಣಾಮ ಬೋರ್​ವೆಲ್​ಗಳಲ್ಲಿನ ನೀರು ಕಡಿಮೆಯಾಗಿ ಬೆಳೆಗಳು ಒಣಗಲಾರಂಭಿಸಿವೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲೂಕಿನಲ್ಲಿ ನೀರಾವರಿ ಸೌಲಭ್ಯವುಳ್ಳ ರೈತರು ಶೇಂಗಾ, ಗೋದಿ, ಉಳ್ಳಾಗಡ್ಡಿ ಸೇರಿ ಇತರೆ ಬೆಳೆಗಳನ್ನು ಬೇಸಿಗೆ ಹಂಗಾಮಿನಲ್ಲಿ ಬೆಳೆಯುವುದು ವಾಡಿಕೆ. ಶೇಂಗಾ ವಾಣಿಜ್ಯ ಬೆಳೆಯಾಗಿದ್ದರೂ ಸಹ ರೈತರು ತಮ್ಮ ಜಾನುವಾರುಗಳಿಗೆ ಹೊಟ್ಟಿನ ಉದ್ದೇಶಕ್ಕಾಗಿಯೂ ಬೆಳೆಯುತ್ತಾರೆ.

ಕೃಷಿ ಇಲಾಖೆಯ ಮೂಲಗಳ ಪ್ರಕಾರ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 1634 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ಬಿತ್ತನೆ ಬೀಜಗಳನ್ನು ಪ್ರತಿ ಕ್ವಿಂಟಾಲ್​ಗೆ 8000 ರಿಂದ 8500 ರೂವರೆಗೆ ಖರೀದಿಸಿದ್ದಾರೆ. ಶೇಂಗಾ ಬೆಳೆದ ರೈತರು ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೃಷಿಕೂಲಿ ಸೇರಿದರೆ ಕನಿಷ್ಠ 15 ರಿಂದ 20 ಸಾವಿರ ರೂ ಖರ್ಚು ಮಾಡಿದ್ದಾರೆ. ಡಿಸೆಂಬರ್-ಜನೆವರಿ ತಿಂಗಳಲ್ಲಿ ಬಿತ್ತನೆ ಮಾಡಿರುವ ಶೇಂಗಾ 4 ತಿಂಗಳಿಗೆ ಕೈಗೆ ಬರುತ್ತದೆ. ಆದರೆ ಇದೀಗ ನೀರಿನ ಕೊರತೆಯಿಂದ ಶೇಂಗಾ ಕಾಯಿ ಕಟ್ಟುವ ಮೊದಲೇ ಒಣಗುತ್ತಿದೆ. ಪ್ರತಿ ಎಕರೆಗೆ 10 ಕ್ವಿಂಟಾಲ್ ಶೇಂಗಾ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಬಿತ್ತನೆ ಮಾಡಿದಷ್ಟು ಬೀಜವೂ ಬರದಂತಾಗಿದೆ. ಅಲ್ಲದೇ ಜಾನುವಾರುಗಳಿಗೂ ಹೊಟ್ಟು ಕೈಗೆ ಸಿಗದಂತಹ ಪರಿಸ್ಥಿತಿ ಉಂಟಾಗಿದೆ. ಬೋರ್​ವೆಲ್​ಗಳಲ್ಲಿ ಉತ್ತಮ ನೀರಿರುವ ರೈತರು 5 ಎಕರೆ ಶೇಂಗಾ ಬಿತ್ತಿದ್ದರೂ ಸಹ ಈಗ ನೀರಿನ ಕೊರತೆ ಅರಿತು 2-3 ಎಕರೆ ಬೆಳೆ ಮಾತ್ರ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಈ ಕುರಿತು ಶೇಂಗಾ ಬೆಳೆದ ಲಕ್ಷ್ಮೇಶ್ವರದ ರೈತರಾದ ಹನಮಂತಪ್ಪ ಶರಸೂರಿ, ಅಬ್ಜಲ್ ರಿತ್ತಿ ಅವರು, ‘ಮುಂಗಾರಿನ ಕೃಷಿ ಖರ್ಚು ಮತ್ತು ದನಕರುಗಳ ಹೊಟ್ಟಿಗಾಗಿ ಬ್ಯಾಸಗಿ ಶೇಂಗಾ ಬೆಳೆಯುತ್ತೇವೆ. ಆದ್ರ ಈ ವರ್ಷ ಬೋರ್​ವೆಲ್ ನೀರು ಕಡಿಮೆಯಾಗಿ 2 ತಿಂಗಳ ಬೆಳೆ ಒಣಗುತ್ತಿದೆ. ನಮ್ಮ ಶ್ರಮವೆಲ್ಲ ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ. ಸಾಲಶೂಲ ಮಾಡಿ ಬಿತ್ತನೆ ಮಾಡಿದ್ದ ಖರ್ಚಿನ ಹೊರೆಯ ಜತೆಗೆ ದನಕರುಗಳಿಗೆ ಮೇವಿನ ಚಿಂತೆ ಕಾಡುತ್ತಿದೆ. ನಮ್ಮ ಸಮಸ್ಯೆ ಕೇಳೋರಿಲ್ಲ’ ಎಂದು ಗೋಳು ತೋಡಿಕೊಂಡರು.