ನೀರಿನ ಹಕ್ಕುಪತ್ರಕ್ಕೆ ರೈತರ ಪರದಾಟ

ಆಲ್ದೂರು: ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಕೊಳ್ಳಲು ಸಂಬಂಧಪಟ್ಟ ಇಲಾಖೆಗಳು ನೀರಿನ ಹಕ್ಕು ಪತ್ರ ನೀಡಲು ನಿರಾಕರಿಸುತ್ತಿದ್ದು ರೈತರು ಪರದಾಡುವಂತಾಗಿದೆ.

ಆಲ್ದೂರು ಸುತ್ತಮುತ್ತ ಸಾಕಷ್ಟು ರೈತರು, ಬೆಳೆಗಾರರು ಸ್ವಂತ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಂಡಿದ್ದು ಅದರ ಬಳಕೆಗೆ ಬೇಕಾದ ಯಂತ್ರೋಪಕರಣಗಳನ್ನು ಕೃಷಿ ಇಲಾಖೆಯಿಂದ ಪಡೆಯಲು ನೀರಿನ ಹಕ್ಕು ಪತ್ರಗಳನ್ನು ಇಲಾಖೆಗೆ ನೀಡಬೇಕು. ಈ ಹಕ್ಕು ಪತ್ರ ಪಡೆದುಕೊಂಡ ರೈತರಿಗೆ ಕೃಷಿ ಇಲಾಖೆ ಸಬ್ಸಿಡಿ ದರದಲ್ಲಿ ಕೃಷಿ ಸಲಕರಣೆಗಳನ್ನು ವಿತರಣೆ ಮಾಡುತ್ತದೆ. ಆದರೆ ಆಲ್ದೂರು ಸುತ್ತಮುತ್ತಲಿನ ರೈತರು ಹಕ್ಕು ಪತ್ರ ಪಡೆಯಲು ಹರಸಾಹಸ ಪಡುವಂತಾಗಿದೆ. ಕಂದಾಯ ಇಲಾಖೆಯವರನ್ನು ವಿಚಾರಿಸಿದರೆ ಅವರು ಗ್ರಾ ಪಂ ಅಭಿವೃದ್ಧಿ ಅಧಿಕಾರಗಳ ಬಳಿ ಪಡೆಯಿರಿ ಎನ್ನುತ್ತಾರೆ. ಪಿಡಿಒಗಳನ್ನು ವಿಚಾರಿಸಿದರೆ ಕಂದಾಯ ಇಲಾಖೆಯಲ್ಲಿ ಪಡೆಯಿರಿ, ಜಿಪಂ ಎಇಒ ಅವರನ್ನು ಸಂರ್ಪಸಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ರೈತರು ದೂರಿದ್ದಾರೆ.

ಕೃಷಿ ಇಲಾಖೆಯಲ್ಲಿ ಯಂತ್ರೋಪಕರಣವನ್ನು ಪಡೆಯಲು ಹಕ್ಕು ಪತ್ರಗಳನ್ನು ನೀಡಬೇಕು. ಆದರೆ ರೈತರಿಗೆ ಹಕ್ಕು ಪತ್ರ ಕೊಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಯಾವುದೇ ಸವಲತ್ತುಗಳು ಸಿಗುವುದಿಲ್ಲ. ಜಿಲ್ಲಾಧಿಕಾರಿ ಗಮನ ಹರಿಸಿ ಹಕ್ಕು ಪತ್ರಗಳನ್ನು ಯಾವ ಇಲಾಖೆ ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು. ರೈತಾಪಿ ವರ್ಗಕ್ಕೆ ಅನುಕೂಲವಾಗುವಂತೆ ಶೀಘ್ರವಾಗಿ ಹಕ್ಕುಪತ್ರಗಳನ್ನು ನೀಡಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಕಾಫಿ ಬೆಳೆಗಾರರ ಸಂಘದ ಹೋಬಳಿ ಅಧ್ಯಕ್ಷ ಸಿ.ಸುರೇಶ್ ಒತ್ತಾಯಿಸಿದ್ದಾರೆ.