ನೀರಿನ ಸೆಳೆತಕ್ಕೆ ಮೃತಪಟ್ಟ ಎತ್ತುಗಳು!

ಹಾವೇರಿ: ಹೆಗ್ಗೇರಿಕೆರೆಯ ಒಡ್ಡು ಶುಕ್ರವಾರ ರಾತ್ರಿ ಒಡೆದಿದ್ದು, ಅಪಾರ ಪ್ರಮಾಣದ ನೀರು ಪಕ್ಕದಲ್ಲಿರುವ ಯುಟಿಪಿ ಕಾಲುವೆ ಮೂಲಕ ರಭಸವಾಗಿ ಹರಿಯುತ್ತಿದೆ. ನೀರಿನ ಸೆಳೆತಕ್ಕೆ ಸಿಲುಕಿ ಎರಡು ಎತ್ತುಗಳು ಶನಿವಾರ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಹೆಗ್ಗೇರಿಕೆರೆಯ ಒಡ್ಡು ಭೂಕೋಡಿಹಳ್ಳಿ ಭಾಗದಲ್ಲಿ ಒಡೆದಿದ್ದು, ಯುಟಿಪಿ ಕಾಲುವೆಗೆ ನೀರು ಸೇರುತ್ತಿದೆ. ಇದನ್ನು ಗಮನಿಸದೇ ಶನಿವಾರ ಮಧ್ಯಾಹ್ನ ಕಾಲುವೆಯಲ್ಲಿ ಎತ್ತುಗಳ ಮೈತೊಳೆಯಲು ಹೋಗಿದ್ದ ಭೂಕೋಡಿಹಳ್ಳಿ ಗ್ರಾಮದ ರೈತ ರಾಜಶೇಖರ ಮತ್ತಿಹಳ್ಳಿ ಎತ್ತುಗಳ ಸಮೇತ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಅದೃಷ್ಟವಶಾತ್ ರೈತ ಈಜಿ ದಡ ಸೇರಿದರೆ, ಎತ್ತುಗಳು ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿವೆ.

ಶುಕ್ರವಾರ ರಾತ್ರಿಯೇ ಒಡ್ಡು ಒಡೆದಿದೆ. ಪೋಲಾಗುತ್ತಿರುವ ನೀರು ನಿಲ್ಲಿಸುವಂತೆ ಜಿಲ್ಲಾಡಳಿತ, ತಾಲೂಕು ಆಡಳಿತ, ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾರೂ ಸ್ಪಂದಿಸಿಲ್ಲ. ಇದರಿಂದ ಅನಾಹುತ ಸಂಭವಿಸಿದೆ ಎಂದು ಆಕ್ರೋಶಗೊಂಡ ಭೂಕೋಡಿಹಳ್ಳಿ ಹಾಗೂ ಕನಕಾಪುರ ಗ್ರಾಮಸ್ಥರು ಕನಕಾಪುರದಲ್ಲಿ ಹಾವೇರಿ-ಹಂಸಭಾವಿ ರಸ್ತೆಯಲ್ಲಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳ ವಿರುದ್ಧ ಆಕ್ರೋಶ: ಕನಕಾಪುರ ಬಸ್ ತಂಗುದಾಣದ ಎದುರು ಮೃತ ಎತ್ತುಗಳನ್ನಿಟ್ಟು ಪ್ರತಿಭಟನೆ ನಡೆಸಿದ ರೈತರು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ದಶಕದ ಬಳಿಕ ಕೆರೆ ಭರ್ತಿಯಾಗಿದೆ. ಎರಡು ತಿಂಗಳ ಹಿಂದಷ್ಟೇ ಕೆರೆ ಒಡ್ಡು ಸ್ವಲ್ಪ ಒಡೆದಾಗ ತಕ್ಷಣ ದುರಸ್ತಿ ಮಾಡಲಾಗಿತ್ತು. ಈಗ ಅಪಾರ ಪ್ರಮಾಣದಲ್ಲಿ ನೀರು ಹೋಗುತ್ತಿದೆ. ಇದೇ ರೀತಿ ನೀರು ವ್ಯರ್ಥವಾದರೆ ಎರಡೇ ದಿನಗಳಲ್ಲಿ ಕೆರೆಯ ನೀರು ಅರ್ಧ ಖಾಲಿಯಾಗಲಿದೆ. ಯುಟಿಪಿ ಅಧಿಕಾರಿಗಳ ಅವೈಜ್ಞಾನಿಕ ಕಾಲುವೆ ನಿರ್ವಣದಿಂದ ಎತ್ತುಗಳು ಮೃತಪಟ್ಟಿದ್ದು, ತಕ್ಷಣ ಜಿಲ್ಲಾಧಿಕಾರಿ ಹಾಗೂ ಯುಟಿಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಎತ್ತುಗಳ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥರಾದ ಸುಭಾಷಚಂದ್ರ ಎಣ್ಣಿಯವರ, ಭರನಗೌಡ ಗಾಜಿಗೌಡ್ರ, ರಾಜಶೇಖರ ಮತ್ತಿಹಳ್ಳಿ ಇತರರು ಪ್ರತಿಭಟನೆಯಲ್ಲಿದ್ದರು.

ಎತ್ತಿನ ಕಾಲು ಹಿಡಿದು ಕಣ್ಣೀರಿಟ್ಟ ಬಾಲಕ: ಮೃತ ಎತ್ತುಗಳ ಕಾಲು ಹಿಡಿದು ಬಾಲಕನೊಬ್ಬ ಕಣ್ಣೀರಿಟ್ಟ ಮನಕಲಕುವ ದೃಶ್ಯ ಪ್ರತಿಭಟನೆ ವೇಳೆ ಕಂಡುಬಂತು. ಎತ್ತುಗಳನ್ನು ಬಾಲ್ಯದಿಂದ ಪ್ರೀತಿಯಿಂದ ಸಾಕಿದ್ದ ಕುಟುಂಬದ ಬಾಲಕ ಎತ್ತುಗಳು ಸತ್ತಿದ್ದನ್ನು ಅರಗಿಸಿಕೊಳ್ಳಲಾಗದೇ ಎತ್ತಿನ ಕಾಲನ್ನು ಹಿಡಿದು ಕಣ್ಣೀರಿಡುತ್ತಿದ್ದ. ಸ್ಥಳದಲ್ಲಿದ್ದ ಅನೇಕರು ಬಾಲಕನನ್ನು ಸಮಾಧಾನಿಸಲು ಯತ್ನಿಸಿದರೂ ಅವರಿಂದಲೂ ದುಃಖ ತಡೆಯಲಾಗಲಿಲ್ಲ.

Leave a Reply

Your email address will not be published. Required fields are marked *