ನೀರಿನ ಸಮಸ್ಯೆ ನೀಗಿಸಲು ಜಾಗೃತರಾಗೋಣ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಕರೆ: ಸಾಧಕರಿಗೆ ಡಿಎಸ್ ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿ ಪ್ರದಾನ

ಬೆಂಗಳೂರು: ಎಲ್ಲೆಡೆ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕೆರೆ ಸೇರಿ ನೀರಿನ ಮೂಲಗಳ ಅಭಿವೃದ್ಧಿಯಾಗಬೇಕಿದೆ. ಹೀಗೆ ನೀರಿನ ಸಮಸ್ಯೆ ಬಗ್ಗೆ ಹೋರಾಡುವವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕಾದ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಡಿಎಸ್ ಮ್ಯಾಕ್ಸ್ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಅರಮನೆ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ‘ಡಿಎಸ್ ಮ್ಯಾಕ್ಸ್ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇಶದೆಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಳೆಯಿಲ್ಲದೆ ನೀರಿನ ಸಮಸ್ಯೆ ಹೆಚ್ಚುವಂತಾಗಿದೆ. ನೀರಿನ ಮೂಲಗಳಾದ ಕೆರೆ, ನದಿಗಳು ಕಲುಷಿತಗೊಂಡು ನಶಿಸಿ ಹೋಗುತ್ತಿರುವುದೇ ಅದಕ್ಕೆ ಮೂಲ ಕಾರಣ ಎಂದರು. ಡಿಎಸ್ ಮ್ಯಾಕ್ಸ್ ಸಂಸ್ಥೆ ಕಲಾವಿದರು, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಕಲಾಶ್ರೀ ಪ್ರಶಸ್ತಿ ನೀಡುತ್ತಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ನೀಗಿಸುವವರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಬೇಕು ಎಂದು ಸಲಹೆ ನೀಡಿದರು.ಸರ್ಕಾರಗಳು ಕಲಾವಿದರ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಆದರೆ, ಡಿಎಸ್ ಮ್ಯಾಕ್ಸ್ ಸಂಸ್ಥೆ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ನಗರದಲ್ಲಿ ವಸತಿ ಸಮಸ್ಯೆ ನೀಗಿಸುವ ಕೆಲಸ ಖಾಸಗಿ ಸಂಸ್ಥೆಗಳು ಸಮರ್ಪಕವಾಗಿ ಮಾಡುತ್ತಿವೆ. ಹಾಗೆಯೇ, ಇಲ್ಲಿಗೆ ಕೆಲಸ ಅರಸಿ ಬರುವವರು ಕನ್ನಡ ಭಾಷೆ ಕಲಿಯಬೇಕು ಎಂದು ತಿಳಿಸಿದರು.

ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ನಿರ್ಭಯಾನಂದ ಮಹಾರಾಜ ಸ್ವಾಮೀಜಿ, ಶಾಸಕ ರಾಜುಗೌಡ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದಯಾನಂದ್ ಇನ್ನಿತರರಿದ್ದರು. ಡಿಎಸ್ ಮ್ಯಾಕ್ಸ್​ನಲ್ಲಿ ಫ್ಲ್ಯಾಟ್ ಖರೀದಿಸಿದ ಗ್ರಾಹಕರಿಗಾಗಿ ಫ್ಲ್ಯಾಟ್ ಪತಿ ಲಕ್ಕಿ ಡ್ರಾ ಏರ್ಪಡಿಸಲಾಗಿತ್ತು. ಪ್ರಸಾದ್ ಎಂಬುವರಿಗೆ ಡಬಲ್ ಬೆಡ್ ರೂಂ ಫ್ಲ್ಯಾಟ್, ಶಿವಣ್ಣ ಈಶ್ವರಪ್ಪ ಎಂಬುವರಿಗೆ ಕಾರು ಉಡುಗೊರೆ ದೊರೆಯಿತು. ಜತೆಗೆ 20 ಅದೃಷ್ಟಶಾಲಿಗಳಿಗೆ ಸ್ಕೂಟರ್​ಗಳನ್ನು ನೀಡಲಾಯಿತು.

ಎಲ್ಲರೂ ಕುಟುಂಬದ ಸದಸ್ಯರು

ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಕೆಲಸ ಮಾಡುವುದಕ್ಕೂ, ಅಪರಿಚಿತರೊಂದಿಗೆ ಕೆಲಸ ಮಾಡುವುದಕ್ಕೂ ವ್ಯತ್ಯಾಸವಿದೆ. 14 ವರ್ಷದ ಹಿಂದೆ ಅಪರಿಚಿತರೊಂದಿಗೆ ಕೆಲಸ ಆರಂಭಿಸಿದೆ. ಆದರೆ, ಈಗ ಅವರೆಲ್ಲರೂ ಕುಟುಂಬ ಸದಸ್ಯರಂತಾಗಿದ್ದಾರೆ ಎಂದು ಡಿಎಸ್ ಮ್ಯಾಕ್ಸ್ ಸಂಸ್ಥೆ ಅಧ್ಯಕ್ಷ ಡಾ.ಕೆ.ವಿ.ಸತೀಶ್ ಅಭಿಪ್ರಾಯಪಟ್ಟರು. ಈವರೆಗೆ 16 ಸಾವಿರ ಮನೆ ನಿರ್ವಿುಸಲಾಗಿದೆ. ಇನ್ನೂ 16 ಸಾವಿರ ಮನೆ

ನಿರ್ವಣಕ್ಕೆ ಸಿದ್ಧತೆ ನಡೆಸಲಾಗಿದೆ. ಸಂಸ್ಥೆ ಹಲವು ಏಳು ಬೀಳುಗಳನ್ನು ಕಂಡಿದೆ. ಆದರೆ, ನಮ್ಮ ಸಹೋದ್ಯೋಗಿಗಳು ಅದನ್ನೆಲ್ಲ ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ನೌಕರರಿಗೆ ಫ್ಲ್ಯಾಟ್ ಉಡುಗೊರೆ

ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ನಿರ್ದೇಶಕ ಕೆ.ಎಸ್.ರವಿಕುಮಾರ್, ಕವಿ ಡಾ. ದೊಡ್ಡರಂಗಗೇಗೌಡ, ನಟರಾದ ಕಾಂಚನ, ಭಾರ್ಗವಿ ನಾರಾಯಣ್, ರವಿಕಿರಣ್, ರಮೇಶ್ ಭಟ್, ಮೇನಕ ಸುರೇಶ್​ಕುಮಾರ್, ಕುಕ್ಕು ಪರಮೇಶ್ವರನ್, ಹರ್ಷಿಕಾ ಪೂಣಚ್ಚ, ಐಶ್ವರ್ಯ ರಾಜ್ ಅವರಿಗೆ ಡಿಎಸ್ ಮ್ಯಾಕ್ಸ್ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಸಂಸ್ಥೆಗಾಗಿ ಉತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಫ್ಲ್ಯಾಟ್, ಕಾರುಗಳನ್ನು ಉಡುಗೊರೆಯಾಗಿ ನೀಡಲಾಯಿತು. ಸಂಸ್ಥೆ ಅಧ್ಯಕ್ಷ ಡಾ.ಕೆ.ವಿ.ಸತೀಶ್ ಅವರ ಹುಟ್ಟುಹಬ್ಬವನ್ನೂ ಆಚರಿಸಲಾಯಿತು.

Leave a Reply

Your email address will not be published. Required fields are marked *