ನೀರಿನ ಸಮಸ್ಯೆ ನಿವಾರಿಸಲು ಆಗ್ರಹ

ಕೋಲಾರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವುದರಿಂದ ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ತ್ವರಿತವಾಗಿ ಪಂಪ್ ಮೋಟಾರ್ ಅಳವಡಿಸಬೇಕು ಹಾಗೂ ಕೆಟ್ಟಿರುವ ಮೋಟಾರ್ ದುರಸ್ತಿಗೆ ಆಗ್ರಹಿಸಿ ನಗರಸಭೆ ಅವಧಿ ಮುಗಿದ ಸದಸ್ಯರು ಸೋಮವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ 35 ವಾರ್ಡ್​ಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಟ್ಯಾಂಕರ್ ಮೂಲಕ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲವಾದ್ದರಿಂದ ಕುಡಿಯುವ ನೀರಿಗೆ ಭಾರಿ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಣಿಘಟ್ಟ ರಸ್ತೆಯಲ್ಲಿರುವ ಬೋರ್​ವೆಲ್​ಗೆ ಪೈಲ್​ಲೈನ್, ಪರಶುರಾಮ ದೇವಾಲಯದ ಬಳಿಯ ಬೋರ್​ವೆಲ್​ಗೆ ಪ್ಯಾನಲ್​ಬೋರ್ಡ್ ಅಳವಡಿಸಬೇಕು, ಗದ್ದೆಕಣ್ಣೂರಿನಲ್ಲಿ ಕೆಟ್ಟುಹೋಗಿರುವ ಬೋರ್​ವೆಲ್ ದುರಸ್ತಿ ಮಾಡಬೇಕು ಹಾಗೂ ತೊಟ್ಟಿಬಾವಿಯೊಳಗೆ ಅಳವಡಿಸಿರುವ ಮೋಟಾರ್ ದುರಸ್ತಿ ಮಾಡಬೇಕು ಎಂದು ವಿ.ರವೀಂದ್ರ, ಎಸ್.ಆರ್.ಮುರಳೀಗೌಡ ಇತರರು ಆಗ್ರಹಿಸಿದರು.

ನಗರದ ಅನೇಕ ವಾರ್ಡ್​ಗಳಲ್ಲಿ ಸ್ವಚ್ಛತೆ ಕೊರತೆಯಿದೆ. ಇತ್ತೀಚೆಗೆ ಬಂದ ಮಳೆಗೆ ಚರಂಡಿ ತುಂಬಿ ಮನೆಯೊಳಗೆ ಹಾವು ಸೇರಿಕೊಂಡಿರುವ ಉದಾಹರಣೆಯಿದೆ. ಒಳಚರಂಡಿ ವ್ಯವಸ್ಥೆ ಹಳ್ಳ ಹಿಡಿದಿದ್ದು, ಅನೇಕ ಕಡೆ ಮ್ಯಾನ್​ಹೋಲ್ ಶಿಥಿಲಗೊಂಡಿದ್ದು, ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ನಗರಸಭೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಯಾಗಿದ್ದು ನಗರ ಜನತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸದಿದ್ದರೆ ಜನರೊಟ್ಟಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಮನವಿ ಸ್ವೀಕರಿಸಿದ ನಗರಸಭೆ ಆಯುಕ್ತ ಸತ್ಯನಾರಾಯಣ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮೂರು ದಿನಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಧರಣಿ ಕೈಬಿಡಲಾಯಿತು.

ಅವಧಿ ಮುಗಿದ ಸದಸ್ಯರಾದ ಸೋಮಶೇಖರ್, ಮಂಜುನಾಥ್, ಮೋಹನ್ ಪ್ರಸಾದಬಾಬು, ಗಾಂಧಿನಗರ ನಾರಾಯಣಸ್ವಾಮಿ, ನಾರಾಯಣಮ್ಮ, ವೆಂಕಟೇಶಪತಿ, ಸಾದಿಕ್ ಪಾಷಾ, ಅಪೋ›ಜ್​ಪಾಷಾ, ಅಸ್ಲಾಂ ಪಾಷಾ ಭಾಗವಹಿಸಿದ್ದರು.

Leave a Reply

Your email address will not be published. Required fields are marked *