ನೀರಿನ ಸಮಸ್ಯೆ ನಿವಾರಣೆಗೆ ಚೆಕ್​ಡ್ಯಾಂ

ಗುಡಿಬಂಡೆ:  ತಾಪಂ ಕಚೇರಿ ಸಭಾಂಗಣದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಚೆಕ್​ಡ್ಯಾಂ ನಿರ್ವಣ, ರೈತರಿಗೆ ಸಹಾಯಧನ, ಬೆಳೆ ವಿಮೆ ಕುರಿತು ಮಾಹಿತಿ ಸೇರಿ ಹಲವು ವಿಚಾರಗಳ ಕುರಿತು ರ್ಚಚಿಸಲಾಯಿತು.

ಗುಡಿಬಂಡೆ ತಾಲೂಕಿನಲ್ಲಿ 45ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕಮ್ಮಡಿಕೆ, ಚಿಂತಕಾಯಲಹಳ್ಳಿ, ಮಲ್ಲೇನಹಳ್ಳಿ, ನಲ್ಲಮದ್ದರೆಡ್ಡಿಹಳ್ಳಿ, ಚಿಕ್ಕನಂಚೆರ್ಲು, ದಿನ್ನಹಳ್ಳಿ, ಬಾಲೇನಹಳ್ಳಿ, ಬಂದಾರ್ಲಹಳ್ಳಿ, ಕೊಂಡಾವುಲಹಳ್ಳಿ, ಗವಿಕುಂಟಹಳ್ಲಿ, ಲಕ್ಷ್ಮೀಸಾಗರ, ಜಂಗಾಲಹಳ್ಳಿ, ಪೋಲಂಪಲ್ಲಿ, ಗಿಡ್ಡಪ್ಪನಹಳ್ಳಿ ಸೇರಿ 15 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಶೀಘ್ರವೇ ನೀರು ಪೂರೈಸಲು ಕ್ರಮಕೈಗೊಳ್ಳುವಂತೆ ಗ್ರಾಮೀಣ ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ನವೀನ್​ಗೆ ಸುಬ್ಬಾರೆಡ್ಡಿ ಸೂಚಿಸಿದರು.

ಬೆಳೆ ವಿಮೆ ಮಾಹಿತಿ:  ಕೃಷಿ ಇಲಾಖೆ ವಿರುದ್ಧ ರೈತರು ಸಾಕಷ್ಟು ದೂರು ನೀಡುತ್ತಿದ್ದು, ರೈತರೊಂದಿಗೆ ಸರಿಯಾಗಿ ಸ್ವಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗೆ ಮುಂದುವರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ ಶಾಸಕ, ಕೃಷಿ ಹೊಂಡಗಳ ಬಿಲ್ಲುಗಳನ್ನು ಶೀಘ್ರವಾಗಿ ಮಂಜೂರು ಮಾಡಿ, ರೈತರಿಗೆ ಸಹಾಯಧನ ಪಾವತಿಸಬೇಕು. ಬೆಳೆ ವಿಮೆ ಕುರಿತು ಕೃಷಿ ಇಲಾಖೆ ಸಹಾಯಕ ಅಧಿಕಾರಿ ಶಂಕರಯ್ಯ ಮಾಹಿತಿ ನೀಡಿದರು.

ಡ್ಯಾಂಗೆ 5ಕೋಟಿ ರೂ.:  ನೀರಿನ ಬವಣೆ ನೀಗಿಸುವ ಉದೇಶದಿಂದ 5 ಕೋಟಿ ರೂ. ವೆಚ್ಚದಲ್ಲಿ ಪೊಲಂಪಲ್ಲಿ, ಕಮ್ಮಡಿಕೆ, ಯಲಕರಾಳ್ಳಹಳ್ಳಿ, ಚಿಲುಮೆ ಆಂಜನೇಯಸ್ವಾಮಿ ಸೇರಿ ಹಲವೆಡೆ ಚೆಕ್ ಡ್ಯಾಂ ನಿರ್ವಿುಸಲಾಗುತ್ತಿದೆ ಎಂದು ಸುಬ್ಬಾರೆಡ್ಡಿ ತಿಳಿಸಿದರು. ಜಿಪಂ ಸದಸ್ಯೆ ವರಲಕ್ಷ್ಮೀ ನಾರಾಯಣಸ್ವಾಮಿ, ತಹಸೀಲ್ದಾರ್ ಹನುಮಂತರಾಯಪ್ಪ, ತಾಪಂ ಅಧ್ಯಕ್ಷೆ ವರಲಕ್ಷ್ಮೀ ಕೃಷ್ಣೆಗೌಡ, ಉಪಾಧ್ಯಕ್ಷ ಬೈರರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಮತ್ತಿತರರಿದ್ದರು.

ಸೋಮೇನಹಳ್ಳಿ ಪಿಡಿಒಗೆ ತರಾಟೆ:  ಗೆಗ್ಗಿರಾಳ್ಳಹಳ್ಳಿ ಸರ್ಕಾರಿ ಜಮೀನಿನಲ್ಲಿ ಕೆಲವು ಖಾಸಗಿ ವ್ಯಕ್ತಿಗಳೊಂದಿಗೆ ಶಾಮಿಲಾಗಿ ಆಶ್ರಯ ಕಮಿಟಿ ಅನುಮತಿ ಪಡೆಯದೆ ಸುಮಾರು 10 ಸೈಟ್​ಗಳನ್ನು ಪರಭಾರೆ ಮಾಡಿ ಇ-ಖಾತೆ ಮಾಡಿರುವ ಕುರಿತು ಗಮನಕ್ಕೆ ಬಂದಿದೆ. ಕಾಟೇನಹಳ್ಳಿಯ 1.5 ಗುಂಟೆ ಜಮೀನು ಸಾರ್ವಜನಿಕರ ಉದ್ದೇಶಕ್ಕೆ ಮಿಸಲಿಟ್ಟಿದ್ದು, ಇದರ ಕುರಿತು ದಾಖಲೆ ನೀಡುವಂತೆ ಹೇಳಿ ಮೂರು ವರ್ಷ ಕಳೆದರೂ ನೀಡಿಲ್ಲ ಎಂದು ಸೋಮೇನಹಳ್ಳಿ ಪಿಡಿಒ ಶ್ರೀನಿವಾಸ್​ಗೆ ಶಾಸಕರು ತರಾಟೆಗೆ ತೆಗದುಕೊಂಡರು.

ಗೈರಾದ ಅಧಿಕಾರಿಗಳಿಗೆ ನೋಟಿಸ್: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗುಡಿಬಂಡೆ ತಾಲೂಕು ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ಪ್ರಸಕ್ತ ಸಾಲಿನಲ್ಲಿ ಉತ್ತಮ ಫಲಿತಾಂಶ ಪಡೆಯಲು ಅಗತ್ಯ ಕ್ರಮಕೈಗೊಳ್ಳಬೇಕು. ಅವಶ್ಯವಿದ್ದಲ್ಲಿ ವಿಶೇಷ ತರಗತಿಗಳನ್ನು ನಡೆಸಿ ಹೆಚ್ಚಿನ ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕೆಂದು ಬಿಇಒ ಜಯರಾಮರೆಡ್ಡಿಗೆ ಶಾಸಕರು ಸೂಚಿಸಿದರು. ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಶಾಸಕ ಸುಬ್ಬಾರೆಡ್ಡಿ ಬಾಂಡ್ ವಿತರಿಸಿದರು. ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಾಪಂ ಇಒ ರವಿಕುಮಾರ್​ಗೆ ಸೂಚಿಸಿದರು.

Leave a Reply

Your email address will not be published. Required fields are marked *