ನೀರಿನ ಸಮಸ್ಯೆ ದಿನೇದಿನೆ ಅಧಿಕ

ರಾಣೆಬೆನ್ನೂರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೆ ಅಧಿಕವಾಗತೊಡಗಿದೆ.

ತಾಲೂಕಿನ 108 ಗ್ರಾಮಗಳ ಪೈಕಿ 76 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ಈ ಪೈಕಿ 32 ಗ್ರಾಮಗಳಿಗೆ ಕರ್ಲಗೇರಿ, 22 ಗ್ರಾಮಗಳಿಗೆ ಕುದರಿಹಾಳ ಹಾಗೂ ಮಾಕನೂರ ಗ್ರಾಮಕ್ಕೆ ತುಂಗಭದ್ರಾ ನದಿಪಾತ್ರದಿಂದ ನೀರು ಸರಬರಾಜು ಮಾಡಲಾಗುತ್ತಿದೆ.

ಕಳೆದ ತಿಂಗಳು ಭದ್ರಾ ಜಲಾಶಯದಿಂದ 1.5 ಟಿಎಂಸಿ ನೀರನ್ನು ತುಂಗಭದ್ರಾ ನದಿಗೆ ಹರಿಸಿದ ಹಿನ್ನೆಲೆಯಲ್ಲಿ ಈ 76 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗಿರಲಿಲ್ಲ. ಆದರೆ, ಕಳೆದ ಒಂದು ವಾರದಿಂದ ನದಿ ಪಾತ್ರದಲ್ಲಿ ನೀರಿನ ಹರಿವು ಕಡಿಮೆಯಾಗುತ್ತ ಬಂದಿದೆ. ಇನ್ನೂ 15 ದಿನದಲ್ಲಿ ಸಂಪೂರ್ಣ ನದಿ ಬತ್ತಿ ಹೋಗುವ ಸಾಧ್ಯತೆಯಿದೆ. ಹೀಗಾದರೆ ಕುಡಿಯುವ ನೀರಿನ ಸಮಸ್ಯೆ ಇನ್ನೂ ಅಧಿಕವಾಗಲಿದೆ.

ಸದ್ಯ ನದಿಪಾತ್ರದಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಕಾರಣ ನಗರ ಹೊರತು ಪಡಿಸಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವೆಡೆ ದಿನಕ್ಕೆ ಒಂದು ಗಂಟೆ ನೀರು ಬಂದರೆ ಸಾಕು ಎನ್ನುವಂತಹ ಸ್ಥಿತಿ ನಿರ್ವಣವಾಗಿದೆ.

ಎಲ್ಲೆಲ್ಲಿ ಸಮಸ್ಯೆ?: ತಾಲೂಕಿನಲ್ಲಿ ನದಿಪಾತ್ರದ ಗ್ರಾಮಗಳನ್ನು ಹೊರತುಪಡಿಸಿ ಇನ್ನುಳಿದ ದೇವರಗುಡ್ಡ, ಕಾಕೋಳ, ರಾಹುತನಕಟ್ಟಿ, ಇಟಗಿ, ಕಾಕೋಳ ತಾಂಡಾ, ಕಜ್ಜರಿ, ಸುಣಕಲ್ಲಬಿದರಿ, ಹೊನ್ನತ್ತಿ, ಅಸುಂಡಿ, ಉಕ್ಕುಂದ, ಜೋಯಿಸರಹರಳಹಳ್ಳಿ ಸೇರಿ 25ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ.

ಗ್ರಾಮದಲ್ಲಿ ನೀರು ದೊರೆಯದ ಕಾರಣ ಜನತೆ ಅಕ್ಕಪಕ್ಕದ ಜಮೀನುಗಳಲ್ಲಿರುವ ಬೋರ್​ವೆಲ್​ಗಳಿಗೆ ತೆರಳಿ ನೀರು ಹೊತ್ತು ತರುತ್ತಿದ್ದಾರೆ. ಕಾಕೋಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಿಂದ ಬರುವ ತ್ಯಾಜ್ಯದ ನೀರನ್ನು ತುಂಬಿಕೊಳ್ಳುತ್ತಿದ್ದಾರೆ. ಕೆಲವೆಡೆ ಬೋರ್​ವೆಲ್ ನೀರೂ ದೊರಕದ ಸ್ಥಿತಿ ನಿರ್ವಣವಾಗಿದೆ.

ಶುದ್ಧ ನೀರು ಮರೀಚಿಕೆ: ತಾಲೂಕಿನ ಭೂಸೇನಾ ನಿಗಮ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಒಟ್ಟು 151 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 26 ಘಟಕಗಳಿಗೆ ಇನ್ನೂ ಚಾಲನೆ ದೊರೆತಿಲ್ಲ. ಉಳಿದ 125 ಘಟಕಗಳಲ್ಲಿ ಬಹುತೇಕ ಕಡೆ ದುರಸ್ತಿಗೊಳಪಟ್ಟು ನಿರುಪಯುಕ್ತವಾಗಿವೆ.

1.50 ಕೋಟಿ ರೂ. ಮೀಸಲು

ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಸರ್ಕಾರದಿಂದ 1.50 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದೇ ಅನುದಾನ ಬಳಸಿಕೊಂಡು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಇಲಾಖೆ ಅಧಿಕಾರಿಗಳು ಅವಶ್ಯವಿರುವೆಡೆ 44 ಬೋರ್​ವೆಲ್​ಗಳನ್ನು ಕೊರೆಯಿಸಿದ್ದಾರೆ. ಆದರೆ, ಬೇಸಿಗೆ ಕಾಲದಲ್ಲಿ ಬೋರ್​ವೆಲ್ ಕೊರೆಯಿಸಿದ ಕಾರಣ ಸಮರ್ಪಕವಾಗಿ ನೀರು ದೊರೆತಿಲ್ಲ. ಕೆಲವೆಡೆ ಕೊರೆಯಿಸಿದ ಬೋರ್​ವೆಲ್​ಗಳಿಗೆ ಯಂತ್ರ ಅಳವಡಿಸಿಲ್ಲ. ಹೀಗಾಗಿ, ಬೋರ್​ವೆಲ್ ಕೊರೆಯಿಸಿದರೂ ಪ್ರಯೋಜನವಿಲ್ಲದಂತಾಗಿದೆ.

ಸದ್ಯ ನದಿಯಲ್ಲಿ ಸ್ವಲ್ಪ ನೀರಿರುವ ಕಾರಣ ಹೇಳಿಕೊಳ್ಳುವಂತಹ ಸಮಸ್ಯೆ ಎದುರಾಗಿಲ್ಲ. ಗ್ರಾಮೀಣ ಭಾಗದಲ್ಲಿ ವಾಟರ್​ವುನ್​ಗಳು ನೀರು ಬಿಡುವ ಹಾಗೂ ಬಂದ್ ಮಾಡುವ ಕೆಲಸವನ್ನು ಸರಿಯಾಗಿ ಮಾಡದ ಕಾರಣ ಕೆಲವೆಡೆ ಸಮಸ್ಯೆ ಅನಿಸುತ್ತಿದೆ. 15 ದಿನದಲ್ಲಿ ನದಿಯಲ್ಲಿ ನೀರು ಬತ್ತಿ ಹೋಗಲಿದ್ದು, ಮುಂದಿನ ದಿನದಲ್ಲಿ ಬೋರ್​ವೆಲ್ ನೀರು ಪೂರೈಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅವಶ್ಯ ಬಿದ್ದರೆ ಟ್ಯಾಂಕರ್ ನೀರು ಪೂರೈಸುತ್ತೇವೆ.

| ಸಿ.ವಿ. ಬಿದರೂರಮಠ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ