ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ

ಚಳ್ಳಕೆರೆ: ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನ ಯಾವ ಗ್ರಾಮದಲ್ಲೂ ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತೆ ವಹಿಸಬೇಕೆಂದು ಶಾಸಕ ಟಿ. ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ 40 ಗ್ರಾಪಂ ವ್ಯಾಪ್ತಿಯ ಶುದ್ಧ ನೀರಿನ ಘಟಕಗಳ ನಿರ್ವಹಣೆ ಕುರಿತು ಮಾಹಿತಿ ಪಡೆದ ಶಾಸಕರು, ಗೌರಿಪುರ, ಸಿದ್ದೇಶ್ವರನದುರ್ಗ, ಚೌಳೂರು, ಚಿಕ್ಕಚೆಲ್ಲೂರು ನೀರಿನ ಘಟಕಗಳ ಯಂತ್ರಗಳನ್ನು ಕಳ್ಳರು ದೋಚಿಕೊಂಡು ಹೋಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಏಕೆ ದೂರು ನೀಡಿಲ್ಲ. ಸರ್ಕಾರಿ ಸಂಬಳ ಪಡೆಯುವ ಪಂಚಾಯಿತಿ ಅಧಿಕಾರಿಗಳು ಸಾರ್ವಜನಿಕ ಆಸ್ತಿ ಕಾಪಾಡುವಲ್ಲಿ ನಿಷ್ಠೆ ಇರಬೇಕು. ಕೂಡಲೇ ದೂರು ದಾಖಲಿಸಿ ಎಂದು ಇಓ ಈಶ್ವರ ಪ್ರಸಾದ್‌ಗೆ ಸೂಚಿಸಿದರು.

ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವ ಕಾರಣ ಅಲ್ಲಿನ ಕೃಷಿ ಪಂಪ್‌ಸೆಟ್‌ನಿಂದ ನೀರು ಪಡೆದು ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ ಎಂದು ಪರಶುರಾಂಪುರ, ನನ್ನಿವಾಳ ಪಂಚಾಯಿತಿ ಪಿಡಿಒ ಸೇರಿ ಕೆಲ ಪಂಚಾಯಿತಿ ಅಧಿಕಾರಿಗಳು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಕೊಡುವುದು ಪರಿಹಾರವಲ್ಲ. ಹೊಸದಾಗಿ ಬೋರ್ ಕೊರೆಸಿ ಪೈಪ್‌ಲೈನ್ ಮಾಡಿಕೊಡುವ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಚಿತ್ರದುರ್ಗ ತಾಲೂಕು ತಹಸೀಲ್ದಾರ್ ಟಿ.ಸಿ. ಕಾಂತರಾಜ್, ಜಿಪಂ ಎಇಇ ಭೀಮನಾಯ್ಕ, ಇಒ ಕೃಷ್ಣನಾಯ್ಕ, ಬಿಇಒ ಸಿ.ಎಸ್. ವೆಂಕಟೇಶ್, ಬಿಸಿಎಂ ಇಲಾಖೆ ಡಿ.ಟಿ. ಜಗನ್ನಾಥ್, ಸಿಡಿಪಿಒ ಸಿ.ಕೆ. ಗಿರಿಜಾಂಬ, ಕೆಆರ್‌ಐಡಿಎಲ್ ಜಿ.ಎಚ್. ಶಶಿಕುಮಾರ್, ಡಾ.ಎನ್. ಪ್ರೇಮಸುಧಾ ಇತರರಿದ್ದರು.