ರಾಯಬಾಗ: ತೀವ್ರ ಬೇಸಿಗೆ ಇರುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಜಿಪಂ ಸಿಇಒ ರಾಹುಲ ಶಿಂಧೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಹೆಸ್ಕಾಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಕುರಿತು ಸಭೆಯಲ್ಲಿ ಮಾತನಾಡಿ, ಇನ್ನು ೪೫ ದಿನ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಪಂಚಾಯಿತಿಯಲ್ಲಿರುವ ಹಣದಿಂದ ಮುಂಜಾಗ್ರತಾ ಕ್ರಮವಾಗಿ ೨೦ ಎಚ್‌ಪಿ ಸಾಮರ್ಥ್ಯದ ಮೋಟಾರ್ ಖರೀದಿಸಿ ಇಟ್ಟುಕೊಂಡರೆ, ಸ್ಥಳೀಯ ಜಲ ಮೂಲದಿಂದ ನೀರು ಪಡೆಯಲು ಅನುಕೂಲವಾಗುವುದು ಎಂದರು.
ನೀರು ಸರಬರಾಜು ಮಾಡುವ ಮೇಲ್ಮಟ್ಟದ ಜಲಸಂಗ್ರಹ ಸ್ವಚ್ಛಗೊಳಿಸಬೇಕು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರರಿಗೆ ಮತ್ತು ಪಿಡಿಒಗಳಿಗೆ ಸೂಚಿಸಿದರು.
ಅಂಗನವಾಡಿ ಕೇಂದ್ರ ಮತ್ತು ಶಾಲೆಗಳಿಗೆ ರಜೆ ಇರುವುದರಿಂದ ಈಗಲೇ ಸ್ವಚ್ಛಗೊಳಿಸಬೇಕು. ಸಂಗ್ರಹ ಇರುವ ಆಹಾರ ವಿಷಯುಕ್ತ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಎಲ್ಲ ಹೊಸ ಬಹು ಕುಡಿಯುವ ನೀರಿನ ಯೋಜನೆಗಳು ಅಂತಿಮ ಹಂತದಲ್ಲಿದ್ದು, ಪೂರ್ಣಗೊಂಡ ನಂತರ ನೀರಿನ ಸಮಸ್ಯೆ ಬಗೆಹರಿಯಲಿದೆ. ನರೇಗಾದಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕೆಂದರು.
ತಹಸೀಲ್ದಾರ್ ಸುರೇಶ ಮುಂಜೆ, ತಾಪಂ ಇಒ ಡಾ.ಸುರೇಶ ಕದ್ದು, ತಾಲೂಕು ಆರೋಗ್ಯಾಽಕಾರಿ ಡಾ.ಎಸ್.ಎಂ.ಪಾಟೀಲ, ಅರಣ್ಯಾಧಿಕಾರಿಗಳಾದ ಶಿವಕುಮಾರ ಡಿ., ಉಮೇಶ ಪ್ರಧಾನಿ, ಸಮಾಜ ಕಲ್ಯಾಣ ಅಧಿಕಾರಿ ವಿ.ಎಸ್.ಚಂದರಗಿ, ಅಬಕಾರಿ ನಿರೀಕ್ಷಕ ಕಿರಣ ಚಂದರಗಿ, ಎಇಇ ಸುಭಾಷ ಭಜಂತ್ರಿ, ಬಿಇಒ ಬಸವರಾಜಪ್ಪ ಆರ್., ಸಿಡಿಪಿಒ ಭಾರತಿ ಕಾಂಬಳೆ, ಎಸ್.ವೈ.ಸನಮನಿ, ಅರುಣ ಮಾಚಕನೂರ ಇದ್ದರು.