ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

ಶಿರಹಟ್ಟಿ:ನೀರಿನ ಸಮಸ್ಯೆ ಕುರಿತು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುವವರೆಗೆ ನಿರ್ಲಕ್ಷ್ಯತೋರುವುದನ್ನು ಬಿಟ್ಟು ಶುದ್ಧ ನೀರಿನ ಘಟಕಗಳು ಸ್ಥಗಿತವಾಗದಂತೆ ಎಚ್ಚರ ವಹಿಸಿ ಎಂದು ಶಿರಹಟ್ಟಿ ತಾಲೂಕು ನೋಡಲ್ ಅಧಿಕಾರಿ ಟಿ. ದಿನೇಶ ಪಿಡಿಒಗಳಿಗೆ ಸೂಚಿಸಿದರು.

ಪಟ್ಟಣದ ತಾಪಂ ಸಾಮರ್ಥ್ಯಸೌಧದ ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ಬರ ನಿರ್ವಹಣೆ ಸಭೆಯಲ್ಲಿ, ವಿವಿಧ ಹಳ್ಳಿಗಳ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕುರಿತು ಮಾಹಿತಿ ಪಡೆದರು.

ಜಲ್ಲಿಗೇರಿ ತಾಂಡಾದಲ್ಲಿ ಸ್ಥಗಿತಗೊಂಡ ಶುದ್ಧ ನೀರಿನ ಘಟಕದ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಕಡಕೋಳ ಗ್ರಾಪಂ ಪಿಡಿಒ ಸುಜಾತಾ ಕೆ. ಅವರು, ‘ಘಟಕ ದುರಸ್ತಿ ಮಾಡಲಾಗಿದ್ದು, ಪುನಾರಂಭವಾಗಿದೆ’ ಎಂದರು. ಸುಗ್ನಳ್ಳಿ, ದೇವಿಹಾಳ, ಸೇವಾನಗರ, ಹೊಸಳ್ಳಿ, ಅಕ್ಕಿಗುಂದ, ಅಲಗಿಲವಾಡ ಗ್ರಾಮಗಳಲ್ಲಿ ಕೆಲ ಕಾರಣಗಳಿಂದ ಶುದ್ಧ ನೀರಿನ ಘಟಕಗಳು ಬಂದಾದ ಬಗ್ಗೆ ಮಾಹಿತಿ ನೀಡಿದರು.

ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ಸೇರಿ 9 ಮೇವು ಬ್ಯಾಂಕ್ ಕೇಂದ್ರಗಳಲ್ಲಿ ಇದ್ದ 131 ಕ್ವಿಂಟಾಲ್ ಮೇವಿನಲ್ಲಿ, 96 ಕ್ವಿಂಟಾಲ್ ಮೇವು ರೈತರಿಗೆ ವಿತರಣೆಯಾಗಿದೆ ಎಂದು ಪಶು ಸಂಗೋಪನ ಅಧಿಕಾರಿ ತಳವಾರ ಮಾಹಿತಿ ನೀಡಿದರು.

ವಿವಿಧ ಯೋಜನೆಯಡಿ ಜನರಿಗೆ ಕೆಲಸ ನೀಡಿ ಎರಡು ತಿಂಗಳಲ್ಲಿ 40 ಲಕ್ಷ ರೂ.ಕೂಲಿ ಹಣ ಸಂದಾಯ ಮಾಡಿದ್ದು, 12 ಲಕ್ಷ ರೂ. ಮಾತ್ರ ಬಾಕಿ ಇದೆ ಎಂದು ಅಧಿಕಾರಿ ಕೃಷ್ಣಪ್ಪ ಧರ್ವರ ಮಾಹಿತಿ ನೀಡಿದರು.

ನೋಡಲ್ ಅಧಿಕಾರಿ ಸಿ.ಎಚ್. ಮುದಗಲ್, ತಾಪಂ ಪ್ರಭಾರ ಸಿಒ ಕೃಷ್ಣಪ್ಪ ಧರ್ಮರ್ ಉಪಸ್ಥಿತರಿದ್ದರು.

ಕಾರಣ ನೀಡದೆ ಸಭೆಗೆ ಹಾಜರಾಗಿ:ಪ್ರಸಕ್ತ ವರ್ಷದ ಮುಂಗಾರು ಮಳೆ ಆಗುವವರೆಗೂ ಬರ ನಿರ್ವಹಣೆ ಕೆಲಸ ಕಾರ್ಯಗಳು ನಡೆಯಬೇಕು. ಈ ಕುರಿತು ಕೈಗೊಂಡ ಕ್ರಮ ಹಾಗೂ ಸಮಸ್ಯೆಗಳ ಬಗ್ಗೆ ರ್ಚಚಿಸಲು ಪ್ರತಿ 15 ದಿನಕ್ಕೊಮ್ಮೆ ನಡೆಸುವ ಬರ ನಿರ್ವಹಣೆ ಸಭೆಗೆ ನೋಡಲ್ ಅಧಿಕಾರಿ ಮತ್ತು ಗ್ರಾಪಂ ಪಿಡಿಒಗಳು ಯಾವ ಕಾರಣ ನೀಡದೆ ಕಡ್ಡಾಯವಾಗಿ ಉಪಸ್ಥಿತರಿರಬೇಕು ಎಂದು ಟಿ. ದಿನೇಶ ಅಧಿಕಾರಿಗಳಿಗೆ ಸೂಚಿಸಿದರು.

Leave a Reply

Your email address will not be published. Required fields are marked *