ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕ್ರಮ

ವಿಜಯವಾಣಿ ಸುದ್ದಿಜಾಲ ಜೇವರ್ಗಿ
ನಾರಾಯಣಪುರದ ಬಸವಸಾಗರ ಜಲಾಶಯದಿಂದ ಎಡದಂಡೆ ಕಾಲುವೆ ಮುಖಾಂತರ ಭೀಮಾ ನದಿಗೆ 700 ಕ್ಯೂಸೆಕ್ ನೀರು ಮಂಗಳವಾರ ಹರಿಸಲಾಗಿದ್ದು, ರಾತ್ರಿವರೆಗೂ ಭೀಮಾ ನದಿಗೆ ನೀರು ತಲುಪಲಿದೆ ಎಂದು ಶಾಸಕ ಡಾ. ಅಜಯಸಿಂಗ್ ಹೇಳಿದರು.

ತಾಲೂಕಿನ ಶಖಾಪುರ ಬಳಿಯ ವಿತರಣಾ ಕಾಲುವೆ-18ಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಭೀಮಾ ನದಿಗೆ 700 ಕ್ಯೂಸೆಕ್ ನೀರು ಹರಿಸುವಂತೆ ವಾರದ ಹಿಂದೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಪಾಟೀಲ್ ಅವರಿಗೆ ಮನವಿ ಮಾಡಲಾಗಿತ್ತು. ಇದರಿಂದ ಕಳೆದ ಶನಿವಾರ ನಾರಾಯಣಪುರ ಜಲಾಶಯದಿಂದ ಕಾಲುವೆಗೆ ನೀರು ಹರಿಸಲಾಗಿತ್ತು ಎಂದು ತಿಳಿಸಿದರು.

ಭೀಮಾ ನದಿ ಸಂಪೂರ್ಣ ಬತ್ತಿದ್ದರಿಂದ ನದಿ ಪಾತ್ರದ ಗ್ರಾಮಸ್ಥರು ಹಾಗೂ ಜಾನುವಾರುಗಳು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನಾರಾಯಣಪುರ ಎಡದಂಡೆ ಕಾಲುವೆ ಮುಖಾಂತರ 700 ಕ್ಯೂಸೆಕ್ ನೀರು ಹರಿಸಿ ಪಟ್ಟಣ ಸೇರಿ ತಾಲೂಕಿನ ನದಿ ಪಾತ್ರದ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲದೇ ಧರ್ಮಸಿಂಗ್ ಫೌಂಡೇಶನ್ನಿಂದಲೂ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಎಂದರು.

ಜೇವರ್ಗಿ ಪಟ್ಟಣ ಸೇರಿ ಭೀಮಾ ಪಾತ್ರದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗಲಿದೆ. ಜೇವರ್ಗಿ ಜನತೆಗೆ ಎರಡು ದಿನಗಳಲ್ಲಿ ಕುಡಿಯುವ ನೀರು ಸರಬರಾಜ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಪುರಸಭೆಯಿಂದ ಪಟ್ಟಣದ ಜನತೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಪುರಸಭೆ ಮುಖ್ಯಾಧಿಕಾರಿ ಬಾಬುರಾವ ವಿಭೂತಿಗೆ ಸೂಚಿಸಿದರು.

ಮುಖಂಡರಾದ ಖಾಸೀಂಪಟೇಲ್ ಮುದಬಾಳ, ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಸಂಗಣ್ಣಗೌಡ ಗುಳ್ಯಾಳ, ಚಂದ್ರಶೇಖರ ನೇರಡಗಿ, ತಿಪ್ಪಣ್ಣ ಗುಂಡಗುತರ್ಿ, ಮರೇಪ್ಪ ಸರಡಗಿ, ಮಲ್ಲಿಕಾರ್ಜುನ ಬೂದಿಹಾಳ ಇತರರಿದ್ದರು.